ಉಡುಪಿ: ಶಿವಾಜಿಯ ಜೀವನ ಚರಿತ್ರೆಯನ್ನು ಅವಲೋಕಿಸಿ ಇತಿಹಾಸಕ್ಕೆ ಅವರು ನೀಡಿದ ಕೊಡುಗೆಗಳನ್ನು, ವ್ಯಕ್ತಿತ್ವ ಗುಣಗಳನ್ನು ಅರಿತುಕೊಳ್ಳಬೇಕು. ಇದರಿಂದ ದೇಶದಲ್ಲೇ ಉತ್ತಮ ಆಡಳಿತ ನೀಡಿದ ಹಿಂದೂ ಮಹಾಕ್ರಾಂತಿಕಾರಿ ಶಿವಾಜಿ ಜಯಂತಿ ಅರ್ಥಪೂರ್ಣವಾಗುತ್ತದೆ. ಶಿವಾಜಿ ಆದರ್ಶ ತತ್ವಗಳು ಎಲ್ಲರಿಗೂ ಮಾದರಿ ಎಂದು ಶಾಸಕ ಯಶ್ಪಾಲ್ ಸುವರ್ಣ ಹೇಳಿದರು.
ಬುಧವಾರ ಮಲ್ಪೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಡೆದ ಛತ್ರಪತಿ ಶಿವಾಜಿ ಜಯಂತಿ ಆಚರಣೆ ಉದ್ಘಾಟಿಸಿ ಮಾತನಾಡಿದರು. ಶೀಘ್ರದಲ್ಲಿಯೇ ನಗರಸಭಾ ವ್ಯಾಪ್ತಿಯಲ್ಲಿ ಶಿವಾಜಿ ಪ್ರತಿಮೆಯನ್ನು ನಿಮಾರ್ಣ ಮಾಡಲಾಗುವುದು ಎಂದರು.
ಅಪರ ಜಿಲ್ಲಾಧಿಕಾರಿ ನಾಗರಾಜ್ ವಿ. ನಾಯಕ್ ಮಾತನಾಡಿ, ಅಂದಿನ ಕಾಲಘಟ್ಟದಲ್ಲಿ ದೇಶ ಕಟ್ಟುವಲ್ಲಿ ಶ್ರದ್ಧೆಯಿಂದ ಹೋರಾಡಿದ ಧೀಮಂತ ನಾಯಕ ಹಾಗೂ ಶಿವಾಜಿಯ ಜಾಣ್ಮೆ ಆಡಳಿತಕ್ಕೆ ಪ್ರಮುಖವಾಗಿತ್ತು ಎಂದರು. ಜಿಲ್ಲೆಯ ಲೇಖಕ ಮತ್ತು ಕಥೆಗಾರರಾದ ಮಂಜುನಾಥ ಹಿಲಿಯಾಣ ಉಪನ್ಯಾಸ ನೀಡಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಸಮುದಾಯದ ವತಿಯಿಂದ ಯಕ್ಷಗಾನ ಕ್ಷೇತ್ರದಲ್ಲಿ ಸಾಧನೆಗೈದ ಕೇಶವ್ ರಾವ್ ಬಡಾನಿಡಿಯೂರು ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ಸಮೃದ್ಧಿ ಆರ್. ಇವರನ್ನು ಸನ್ಮಾನಿಸಲಾಯಿತು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ಕರ್ನಾಟಕ ಕ್ಷತ್ರೀಯ ಮರಾಠ ಪರಿಷತ್ತಿನ ಜಿಲ್ಲಾಧ್ಯಕ್ಷ ಪ್ರಕಾಶ್ ರಾವ್, ಛತ್ರಪತಿ ಶಿವಾಜಿ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ದಿನೇಶ್ ನಾಯ್ಕ್, ಕಾಲೇಜಿನ ಪ್ರಾಂಶುಪಾಲೆ ಜಯಶ್ರೀ ಉಪಸ್ಥಿತರಿದ್ದರು. ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ತೇಜಸ್ ಬಂಗೇರ ನಿರೂಪಿಸಿ, ಕಾಲೇಜಿನ ಹಿರಿಯ ಶಿಕ್ಷಕ ಸತೀಶ್ ಭಟ್ ವಂದಿಸಿದರು.