ಕೈಲಾಂಚ : ಹೋಬಳಿಯ ಚಿಕ್ಕೇನಹಳ್ಳಿಯಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿನಲ್ಲಿ ಶನಿವಾರ ರಾತ್ರಿ ಸುಮಾರು 2 ವರ್ಷದ ಚಿರತೆ ಸೆರೆಯಾಗಿದೆ.
ಗ್ರಾಮದ ಸನಿಹದಲ್ಲೇ ಅಚ್ಚಲು ಅರಣ್ಯ ಪ್ರದೇಶವಿದ್ದು, ಜತೆಗೆ ಗ್ರಾಮದ ಹತ್ತಿರದ ಬೆಟ್ಟ-ಗುಡ್ಡ ಪ್ರದೇಶಗಳಲ್ಲಿ ಚಿರತೆ ವಾಸಿಸುತ್ತಿತ್ತು ಎನ್ನಲಾಗಿದೆ.
ಸಂಜೆ ವೇಳೆ ಆಹಾರ ಅರಸಿ ಗ್ರಾಮದೊಳಗೆ ದಾಂಗುಡಿ ಇಡುತ್ತಿತ್ತು. ಮನೆ ಸಮೀಪ ಬಂದು ಕುರಿ, ಕರು, ಮೇಕೆ, ಕೋಳಿ, ಸಾಕು ನಾಯಿಗಳ ಮೇಲೆ ದಾಳಿ ನಡೆಸಿ ಹೊತ್ತೊಯ್ಯುತ್ತಿತ್ತು. ಆಗಾಗ್ಗೆ ಪ್ರತ್ಯಕ್ಷವಾಗುತ್ತಿದ್ದ ಚಿರತೆಯಿಂದ ಜನರು ಆತಂಕಕ್ಕೆ ಒಳಗಾಗಿ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ 3 ದಿನಗಳ ಹಿಂದಷ್ಟೇ ರೈತ ಪಾರ್ಥ ಎಂಬುವವರ ಮನೆ ಸಮೀಪ ಬೋನು ಇಡಲಾಗಿತ್ತು. ಸದ್ಯ ಚಿರತೆ ಸೆರೆಯಿಂದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.
ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಇದ್ದ ಬೋನನ್ನು ರಾತ್ರಿ 1 ಗಂಟೆ ಸುಮಾರಿಗೆ ರಾಮನಗರ ವಲಯ ಅರಣ್ಯಾಧಿಕಾರಿಗಳ ಕಚೇರಿಗೆ ತಂದು, ದೂರದ ಅರಣ್ಯಕ್ಕೆ ಬಿಡಲಾಗಿದೆ. ಅರಣ್ಯ ರಕ್ಷಕ ಶಾಂತಕುಮಾರ್, ಸಿಬ್ಬಂದಿ ಮಂಜು, ಕುಮಾರ್, ಗಂಗಣ್ಣ ಇದ್ದರು.
ಇತ್ತೀಚೆಗೆ ಚಿರತೆ ಉಪಟಳ ಗ್ರಾಮದಲ್ಲಿ ಹೆಚ್ಚಾಗಿತ್ತು. ಒಂದು ಚಿರತೆ ಸೆರೆಯಾಗಿದೆಯಾದರೂ ಈ ಭಾಗದಲ್ಲೂ ಇನ್ನೂ ಚಿರತೆಗಳು ಇವೆ. ಅರಣ್ಯ ಇಲಾಖೆ ಅಧಿಕಾರಿಗಳು ಮತ್ತೆ ಬೋನು ಇಟ್ಟು ಅವುಗಳನ್ನು ಸೆರೆ ಹಿಡಿಯಬೇಕು. ಇದರಿಂದ ರೈತರು ನೆಮ್ಮದಿಯಾಗಿ ಕೃಷಿ ಚಟುವಟಿಕೆ ಮಾಡಬಹುದು. ಜಯರಾಂ, ಚಿಕ್ಕೇನಹಳ್ಳಿ ಅಂದಾಜು ಎರಡು ವರ್ಷದ ಚಿರತೆಯಾಗಿದ್ದು, ಆರೋಗ್ಯವಾಗಿದೆ. ಹಿರಿಯ ಅಧಿಕಾರಿಗಳ ನಿರ್ದೇಶನದ ಮೇರೆಗೆ ದೂರದ ಅರಣ್ಯಕ್ಕೆ ಸುರಕ್ಷಿತವಾಗಿ ಬಿಡಲಾಗಿದೆ. ಶಾಂತಕುಮಾರ್ ಅರಣ್ಯ ರಕ್ಷಕ, ರಾಮನಗರ