ಜಿಲ್ಲೆ

ಆ. 3ಕ್ಕೆ ಚೆಸ್ ಟೂರ್ನಾಮೆಂಟ್

ಹುಬ್ಬಳ್ಳಿ : ಹುಬ್ಬಳ್ಳಿ ಚೆಸ್ ಅಕಾಡೆಮಿ ವತಿಯಿಂದ ಚೆಸ್ ಟೂರ್ನಾಮೆಂಟ್ ‘ಎನ್​ಎಲ್​ಇ ರೋಟರಿ ಟ್ರೋಫಿ’ ಅನ್ನು ಆ. 3ರಂದು ಇಲ್ಲಿನ ದೇಶಪಾಂಡೆ ನಗರದ ರಾಘವೇಂದ್ರ ಸಭಾ ಭವನದಲ್ಲಿ ಆಯೋಜಿಸಲಾಗಿದೆ.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಚೆಸ್ ಟೂರ್ನಾಮೆಂಟ್ ಉಸ್ತುವಾರಿ ಗುರುರಾಜ ಕುಲಕರ್ಣಿ, ಎನ್​ಎಲ್​ಇ ಸೊಸೈಟಿಯ ಸಹಯೋಗದೊಂದಿಗೆ ಈ ಟೂರ್ನಾಮೆಂಟ್ ಆಯೋಜಿಸಲಾಗುತ್ತಿದೆ ಎಂದು ಹೇಳಿದರು.

8 ವರ್ಷದೊಳಗಿನ, 12 ವರ್ಷದೊಳಗಿನ, 16 ವರ್ಷದೊಳಗಿನ ಹಾಗೂ 25 ವರ್ಷದೊಳಗಿನವರ ಒಟ್ಟು ನಾಲ್ಕು ವಿಭಾಗಗಳಲ್ಲಿ ಪಂದ್ಯಾವಳಿ ನಡೆಯಲಿದೆ ಎಂದು ತಿಳಿಸಿದರು.

ನಾಲ್ಕೂ ವಿಭಾಗಳಲ್ಲಿನ ವಿಜೇತರಿಗೆ 40 ಟ್ರೋಫಿ ಹಾಗೂ 40 ಮೆಡಲ್​ಗಳನ್ನು ನೀಡಲಾಗುವುದು. ಭಾಗವಹಿಸಿದ ಪ್ರತಿಯೊಬ್ಬರಿಗೂ ಪ್ರಮಾಣ ಪತ್ರ ನೀಡಲಾಗುವುದು ಎಂದು ಹೇಳಿದರು.

ವಿಜೇತರಿಗೆ ರಾಜ್ಯಮಟ್ಟದ ಚೆಸ್ ಪಂದ್ಯಾವಳಿಗೆ ಭಾಗವಹಿಸಲು ಅವಕಾಶ ನೀಡಲಾಗುವುದು. ಆಸಕ್ತರು ಆ. 1ರೊಳಗೆ ಹೆಸರು ನೋಂದಾಯಿಸಬೇಕು. 3 ರಂದು ಬೆಳಗ್ಗೆ 9 ರಿಂದ ಸಂಜೆ 5.30ರವರೆಗೆ ಟೂರ್ನಾಮೆಂಟ್ ನಡೆಯಲಿದೆ. ಬೆಳಗ್ಗೆ 9.30ಕ್ಕೆ ಉದ್ಘಾಟನೆ ನೆರವೇರಲಿದೆ ಎಂದು ತಿಳಿಸಿದರು.

ಎನ್​ಎಲ್​ಇ ಸೊಸೈಟಿಯ ಜಂಟಿ ಕಾರ್ಯದರ್ಶಿ ಸದಾನಂದ ಕಾಮತ ಸುದ್ದಿಗೋಷ್ಠಿಯಲ್ಲಿ ಇದ್ದರು.