ಮಂಗಳೂರು: ಚೆಸ್ 44ನೇ ಒಲಿಂಪಿಯಾಡ್ ರಿಲೇ ಜ್ಯೋತಿಗೆ ಮಂಗಳವಾರ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಮೇಯರ್ ಪ್ರೇಮಾನಂದ ಶೆಟ್ಟಿ ಸ್ವಾಗತ ಕೋರಿದರು.
ಸ್ವಾತಂತ್ರೃದ ಅಮೃತ ಮಹೋತ್ಸವದ ಅಂಗವಾಗಿ ದೇಶದಾದ್ಯಂತ ಚೆಸ್ ಒಲಿಂಪಿಯಾಡ್ ರಿಲೇ ಜ್ಯೋತಿಯ ಆಗಮನವಾಗುತ್ತಿದೆ. ದೇಶದ ಎಲ್ಲ ರಾಜ್ಯಗಳ ರಾಜಧಾನಿಗಳಲ್ಲಿ ಹಾಗೂ 75 ಜಿಲ್ಲಾ ಕೇಂದ್ರಗಳಲ್ಲಿ ಒಲಿಂಪಿಯಾಡ್ ರಿಲೇ ಜ್ಯೋತಿ ಸಂಚರಿಸಲಿದೆ. ರಾಜ್ಯದ ಬೆಂಗಳೂರು ಮತ್ತು ಮಂಗಳೂರಿಗೆ ಈ ಸುವರ್ಣಾವಕಾಶ ದೊರೆತಿರುವುದು ಸೌಭಾಗ್ಯವಾಗಿದೆ ಎಂದರು.
ಕರ್ಣಾಟಕ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮಹಾಬಲೇಶ್ವರ ಮಾತನಾಡಿ, ವಿಶ್ವಕ್ಕೆ ಭಾರತ ನೀಡಿದ ಅಮೂಲ್ಯ ಕೊಡುಗೆಗಳಲ್ಲಿ ಚದುರಂಗದಾಟವು ಒಂದು. ಅದು ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ದೊಡ್ಡ ಮಟ್ಟದಲ್ಲಿ ಬೆಳವಣಿಗೆ ಕಾಣುತ್ತಿದೆ. ಸರ್ಕಾರ ಇದಕ್ಕೆ ನೀಡುತ್ತಿರುವ ಪ್ರೋತ್ಸಾಹದಿಂದಾಗಿ ಚೆಸ್ ದ್ರುವತಾರೆಗಳು ಬೆಳಕಿಗೆ ಬರಲಿದ್ದಾರೆ ಎಂದರು.
ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ಯೇನೆಪೋಯ ಉಪ ಕುಲಪತಿ ಡಾ.ಎಂ.ವಿಜಯ ಕುಮಾರ್, ಗ್ರಾಂಡ್ ಮಾಸ್ಟರ್‌ಗಳಾದ ತೇಜ ಕುಮಾರ್, ಜಿ.ಎ. ಸ್ಟಾನಿ, ಚೆಸ್ ಅಸೋಸಿಯೇಶನ್ ರಾಜ್ಯಾಧ್ಯಕ್ಷ ರಾಜಗೋಪಾಲ್ ಶೆಣೈ, ಜಿಲ್ಲಾ ಅಧ್ಯಕ್ಷ ರಮೆಶ್ ಕೋಟೆ, ಎನ್.ಎಸ್.ಎಸ್. ಪ್ರೋಗ್ರಾಂ ಕೋ-ಆರ್ಡಿನೇಟರ್ ಡಾ.ಅಶ್ವಿನಿ ಶೆಟ್ಟಿ, ನೆಹರೂ ಯುವ ಕೇಂದ್ರದ ಅಧಿಕಾರಿಗಳಾದ ವಿಷ್ಣುಮೂರ್ತಿ, ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ಪ್ರಾದೇಶಿಕ ನಿರ್ದೇಶಕ ಎಂ.ಎನ್. ನಟರಾಜ್, ನೆಹರು ಯುವ ಕೇಂದ್ರದ ಜಿಲ್ಲಾ ಅಧಿಕಾರಿ ರಘುವೀರ್ ಸೂಟರ್‌ಪೇಟೆ, ಎನ್.ಸಿ.ಸಿ ವಿದ್ಯಾರ್ಥಿಗಳು, ಕ್ರೀಡಾಪಟುಗಳು ಉಪಸ್ಥಿತರಿದ್ದರು.