ಹುಬ್ಬಳ್ಳಿ: ಇಲ್ಲಿಯ ರೋಟರಿ ಕ್ಲಬ್ ಉತ್ತರ, ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯ ಮತ್ತು ಧಾರವಾಡ ಜಿಲ್ಲಾ ಚೆಸ್ ಅಸೋಸಿಯೇಶನ್ ಸಹಯೋಗದಲ್ಲಿ ಅಖಿಲ ಭಾರತ ಮುಕ್ತ ಫಿಡೆ ರೇಟಿಂಗ್ ರ್ಯಾಪಿಡ್ ಚೆಸ್ ಪಂದ್ಯಾವಳಿಯನ್ನು ಜೂನ್ 22ರಿಂದ ಎರಡು ದಿನಗಳವರೆಗೆ ನಗರದ ಬಿವಿಬಿ ಕ್ಯಾಂಪಸ್ ನಲ್ಲಿರುವ ಡಾ. ಪ್ರಭಾಕರ ಕೋರೆ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದೆ ಎಂದು ರೋಟರಿ ಕ್ಲಬ್ ಅಧ್ಯಕ್ಷ ನಾಗರಾಜ ಶೆಟ್ಟಿ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋವಾ, ಮಹಾರಾಷ್ಟ್ರ, ಕೇರಳ ಸೇರಿದಂತೆ ದೇಶದ ವಿವಿಧ ರಾಜ್ಯಗಳಿಂದ ಸುಮಾರು 300 ಆಟಗಾರರು ಪಾಲ್ಗೊಳ್ಳುವರು. ಎಲ್ಲ ವಯೋಮಾನದವರು ಭಾಗವಹಿಸಬಹುದಾಗಿದ್ದು, ಆರು ಜನ ಗ್ರಾಂಡ್ ಮಾಸ್ಟರ್ ಹಾಗೂ ಕರ್ನಾಟಕದ ದೇಶಕುಮಾರ ಅವರು ಆಗಮಿಸಲಿದ್ದಾರೆ ಎಂದರು.
ಅಖಿಲ ಭಾರತ ಚೆಸ್ ಫೆಡರೇಶನ್, ಫಿಡೆಯಿಂದ ಗುರುತಿಸಲ್ಪಟ್ಟ ಕರ್ನಾಟಕ ರಾಜ್ಯ ಚೆಸ್ ಅಸೋಸಿಯೇಶನ್ ಆಶ್ರಯದಲ್ಲಿ ಪಂದ್ಯಗಳು ನಡೆಯಲಿವೆ. ಒಟ್ಟು 2 ಲಕ್ಷ ರೂ. ನಗದು ಬಹುಮಾನ ಹಾಗೂ 75 ಟ್ರೋಫಿಗಳನ್ನು ವಿಜೇತರಿಗೆ ನೀಡಲಾಗುತ್ತಿದೆ. ಮೊದಲ 30 ಸ್ಥಾನಗಳಿಗೆ ಮುಖ್ಯ ಬಹುಮಾನಗಳನ್ನು ನೀಡಲಾಗುವುದು.
1ನೇ ಸ್ಥಾನಕ್ಕೆ 35 ಸಾವಿರ ರೂ., ಉತ್ತಮ ಮಹಿಳಾ ಆಟಗಾತಿರ್, ಉತ್ತಮ ಧಾರವಾಡ ಜಿಲ್ಲೆಯ ಆಟಗಾರ, ಹುಬ್ಬಳ್ಳಿಯ ಅತ್ಯುತ್ತಮ ಆಟಗಾತಿರ್ ಪ್ರಶಸ್ತಿ ನೀಡಲಾಗುವುದು. ಎಂಟು, ಹತ್ತು, ಹನ್ನೆರಡು ಹಾಗೂ ಹದಿನಾಲ್ಕು ವಯೋಮಾನದ ಬಾಲಕ, ಬಾಲಕಿಯರಿಗೆ ಪ್ರತ್ಯೇಕ ಅಗ್ರ ಐದು ಸ್ಥಾನ ನೀಡಲಾಗುವುದು. ಕಿರಿಯ ಹಾಗೂ ಹಿರಿಯ ಆಟಗಾರರನ್ನು ಗುರುತಿಸಲಾಗುತ್ತದೆ ಎಂದು ತಿಳಿಸಿದರು.
ಧಾರವಾಡ ಚೆಸ್ ಅಸೋಸಿಯೇಶನ್ ಅಧ್ಯಕ್ಷ ಡಾ. ಅರವಿಂದ ಏರಿ, ಕೆಎಲ್ಇ ತಾಂತ್ರಿಕ ವಿವಿ ಕುಲಸಚಿವ ಡಾ. ಬಸವರಾಜ ಅನಾಮಿ, ಪ್ರೊ. ವಿಜಯಕುಮಾರ ನಿಂಬಗಲ್, ಶ್ರೀನಿವಾಸ ಇಂದ್ರಾಳಿ ಗೋಷ್ಠಿಯಲ್ಲಿದ್ದರು.