ಚೆರ್ಕಳ-ಕಲ್ಲಡ್ಕ ಅಂತಾರಾಜ್ಯ ಸಂಪರ್ಕದ ರಸ್ತೆ ಪಳ್ಳತ್ತಡ್ಕ ಪ್ರದೇಶದಲ್ಲಿ ಹೊಂಡಬಿದ್ದು, ಸಂಚಾರ ದುಸ್ತರವಾಗಿದೆ.
- ಹೊಂಡಮಯ ರಸ್ತೆಯಲ್ಲಿ ಚಾಲಕರ ಪರದಾಟ
- ಯೋಜನೆ ಅನುಮೋದನೆಗೆ ಸೀಮಿತ
ಪುರುಷೋತ್ತಮ ಪೆರ್ಲ ಕಾಸರಗೋಡು
ಚೆರ್ಕಳ-ಕಲ್ಲಡ್ಕ ಅಂತಾರಾಜ್ಯ ಹೆದ್ದಾರಿಯ ಶೋಚನೀಯಾವಸ್ಥೆ ಪರಿಹಾರಕ್ಕೆ ಇನ್ನೂ ಕಾಲ ಕೂಡಿಬಂದಿಲ್ಲ. ಚೆರ್ಕಳದಿಂದ ಉಕ್ಕಿನಡ್ಕ ವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಗಾಗಿ 30 ಕೋಟಿ ರೂ.ಗೂ ಮಿಕ್ಕಿದ ಪ್ರಸ್ತಾವನೆ ಸಲ್ಲಿಕೆಯಾಗಿ, ಟೆಂಡರ್ ಪ್ರಕ್ರಿಯೆ ಜಾರಿಯಲ್ಲಿದ್ದರೂ, ಈ ವರ್ಷವೂ ಕಾಮಗಾರಿ ಆರಂಭಗೊಳ್ಳುವುದು ಅನುಮಾನವಾಗಿ ಉಳಿದಿದೆ.
ನಾಗರಿಕರ ನಿರಂತರ ಹೋರಾಟ, ಜನಪ್ರತಿನಿಧಿ, ಅಧಿಕಾರಿಗಳಿಗೆ ಮನವಿ ಸಲ್ಲಿಸಿದ ಪರಿಣಾಮ 30.36 ಕೋಟಿ ರೂ. ಮೊತ್ತದ ಅಭಿವೃದ್ಧಿ ಯೋಜನೆಗೆ ಸರ್ಕಾರದ ಅಂಗೀಕಾರ ಲಭಿಸಿದರೂ, ಪ್ರಸಕ್ತ ರಸ್ತೆಗೆ ಅಭಿವೃದ್ಧಿ ಭಾಗ್ಯ ಲಭಿಸಲೇ ಇಲ್ಲ. ಇದರಿಂದ ವಾಹನಗಳು ಹೊಂಡ-ಗುಂಡಿಗಳಲ್ಲಿ ಸಂಚರಿಸುವುದರ ಜತೆಗೆ ಧೂಳಿನ ಸಿಂಚನದೊಂದಿಗೆ ಪ್ರಯಾಣಿಕರು ಸಂಚರಿಸಬೇಕಾದ ಅನಿವಾರ್ಯತೆಯಿದೆ. ಕರಿಂಬಿಲ, ಪಳ್ಳತ್ತಡ್ಕ, ಗೋಳಿಯಡಿ ಸೇರಿದಂತೆ ನಾನಾ ಕಡೆ ರಸ್ತೆ ಹೇಳ ಹೆಸರಿಲ್ಲದಂತೆ ಹಾನಿಗೊಂಡಿದೆ.
ಅಂತಾರಾಜ್ಯ ಸಂಪರ್ಕದ ರಸ್ತೆಯೊಂದು ಈ ರೀತಿ ಶಿಥಿಲಾವಸ್ಥೆ ತಲುಪಿದ್ದರೂ, ನಮ್ಮ ಜನಪ್ರತಿನಿಧಿಗಳಾಗಲಿ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳಾಗಲಿ ಎಚ್ಚೆತ್ತುಕೊಳ್ಳದಿರುವ ಬಗ್ಗೆ ನಾಗರಿಕರು ಹಿಡಿಶಾಪ ಹಾಕುವಂತಾಗಿದೆ.
ಅಂತಾರಾಜ್ಯ ಸಂಪರ್ಕದ ರಸ್ತೆ
ಕಾಸರಗೋಡಿನಿಂದ ಚೆರ್ಕಳ-ಬದಿಯಡ್ಕ-ಪೆರ್ಲ ಹಾದಿಯಾಗಿ ಕರ್ನಾಟಕಕ್ಕೆ ಸಂಪರ್ಕ ಕಲ್ಪಿಸುವ ಚೆರ್ಕಳ-ಕಲ್ಲಡ್ಕ ರಾಜ್ಯ ಹೆದ್ದಾರಿ ಶಿಥಿಲಗೊಂಡು ಹಲವು ವರ್ಷಗಳೇ ಸಂದಿವೆ. ಪ್ರಸಕ್ತ ರಸ್ತೆ ದುರಸ್ತಿ ಬಗ್ಗೆ ಜನಪ್ರತಿನಿಧಿಗಳಿಗಿರುವ ಇಚ್ಛಾಶಕ್ತಿಯ ಕೊರತೆ ಎದ್ದುಕಾಣುತ್ತಿದೆ. ಒಂದೆಡೆ ನಾಗರಿಕರ ಪ್ರತಿಭಟನೆ, ಇನ್ನೊಂದೆಡೆ ಖಾಸಗಿ ಬಸ್ ಮಾಲೀಕರ ಸಂಘದಿಂದ ಬಸ್ ನಿಲುಗಡೆಗೊಳಿಸಿ ಹರತಾಳ ನಡೆಸಿದರೂ, ಸರ್ಕಾರದ ಮೌನ ಮುರಿಯಲು ಸಾಧ್ಯವಾಗಿಲ್ಲ. ಪೆರ್ಲ ಭಾಗದಿಂದ ಕಾಸರಗೋಡಿಗೆ ಸಂಚರಿಸುವ ಬಹುತೇಕ ವಾಹನಗಳು ಹೊಂಡಮಯ ರಸ್ತೆಯನ್ನು ಬಿಟ್ಟು ಬದಲಿ ಮಾರ್ಗದಲ್ಲಿ ಸಂಚರಿಸುತ್ತಿದ್ದರೂ, ಬದಿಯಡ್ಕ ತೆರಳುವವರು ಹಾಗೂ ಪೆರ್ಲ-ಬದಿಯಡ್ಕ ಹಾದಿಯಾಗಿ ಸಂಚರಿಸುವ ಬಸ್‌ಗಳು ಹೊಂಡಮಯ ರಸ್ತೆಯನ್ನೇ ಆಶ್ರಯಿಸಬೇಕಾಗಿದೆ. ಹೊಂಡಮಯ ರಸ್ತೆಯಲ್ಲಿನ ಸಂಚಾರದಿಂದ ವಾಹನಗಳಿಗೂ ನಿರಂತರ ಹಾನಿಯುಂಟಾಗುತ್ತಿದ್ದು, ನಿತ್ಯ ಬಿಡಿಭಾಗ ಖರೀದಿ ಅನಿವಾರ್ಯವಾಗುತ್ತಿರುವುದಾಗಿ ಚಾಲಕರು ತಮ್ಮ ವೇದನೆ ಹೊರಹಾಕುತ್ತಿದ್ದಾರೆ.
ಸಮಸ್ಯೆಗಳ ಸರಮಾಲೆ
ಉಕ್ಕಿನಡ್ಕದಲ್ಲಿರುವ ಕಾಸರಗೋಡು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಂಚರಿಸಲಿರುವ ಪ್ರಮುಖ ರಸ್ತೆ ಇದಾಗಿದ್ದು, ಶಿಥಿಲ ರಸ್ತೆಯಲ್ಲಿನ ಪ್ರಯಾಣ ಚಾಲಕರು ಹಾಗೂ ಜನರಲ್ಲಿ ವ್ಯಾಪಕ ಸಮಸ್ಯೆ ಹುಟ್ಟುಹಾಕಿದೆ. ಒಂದೆಡೆ ಉಕ್ಕಿನಡ್ಕ ವೈದ್ಯಕೀಯ ಕಾಲೇಜು ಆಸ್ಪತ್ರೆ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದ್ದರೆ, ಇಲ್ಲಿಗೆ ತೆರಳುವ ರಸ್ತೆಯ ಬಗ್ಗೆಯೂ ನಮ್ಮ ಜನಪ್ರತಿನಿಧಿಗಳು ಉದಾಸೀನ ಪ್ರವೃತ್ತಿ ಮೆರೆಯುತ್ತಿರುವ ಬಗ್ಗೆ ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ ಪಳ್ಳತ್ತಡ್ಕ ಸೇತುವೆಯೂ ದುರ್ಬಲಗೊಂಡಿದ್ದು, ಸೇತುವೆ ಶಿಥಿಲಾವಸ್ಥೆ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಎರಡೂ ಕಡೆ ಸೂಚನಾಫಲಕ ಅಳವಡಿಸಿದ್ದು, ಭಾರಿ ವಾಹನಗಳ ಸಂಚಾರದ ಬಗ್ಗೆ ಎಚ್ಚರಿಕೆಯನ್ನೂ ನೀಡಿದ್ದಾರೆ.
"
ಚೆರ್ಕಳ-ಕಲ್ಲಡ್ಕ ಅಂತಾರಾಜ್ಯ ಸಂಪರ್ಕದ ರಸ್ತೆ ಚೆರ್ಕಳದಿಂದ ಉಕ್ಕಿನಡ್ಕವರೆಗೆ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ 30.36 ಕೋಟಿ ರೂ. ಮೊತ್ತದ ಯೋಜನೆ ಟೆಂಡರ್ ಪ್ರಕ್ರಿಯೆ ಜಾರಿಯಲ್ಲಿದೆ. ಚುನಾವಣೆ ಹಿನ್ನೆಲೆ ಒಂದಷ್ಟು ವಿಳಂಬವುಂಟಾಗಿದೆ. ಆಡಳಿತಾತ್ಮಕ ಅನುಮತಿಯೊಂದಿಗೆ ತಾಂತ್ರಿಕ ಅನುಮತಿ ಲಭ್ಯವಾಗಿದ್ದು, ಟೆಂಡರ್ ನೀಡುವ ಬಗ್ಗೆ ಒಂದೆರಡು ದಿವಸಗಳಲ್ಲಿ ಅಂತಿಮ ತೀರ್ಮಾನವಾಗಲಿದೆ.
— ಸಿ.ಜೆ.ಕೃಷ್ಣನ್, ಎಕ್ಸಿಕ್ಯೂಟಿವ್ ಇಂಜಿನಿಯರ್ ಕಿಫ್‌ಬಿ ಕಾಸರಗೋಡು