ಆಲೂರು ಪಟ್ಟಣದ ಮಿನಿವಿಧಾನಸೌಧ ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಆಚರಣೆಯ ಕಾರ್ಯಕ್ರಮವನ್ನು ಆಚರಿಸಲಾಯಿತು. 
ಜಿಲ್ಲೆ

ಚೆನ್ನಮ್ಮನ ಆದರ್ಶ ಯುವಜನರಿಗೆ ದಾರಿದೀಪ

ಆಲೂರು: ನಾಡು-ನುಡಿಗಾಗಿ, ಸಮಾಜ ಸುಧಾರಣೆಗಾಗಿ, ಸ್ವಾಭಿಮಾನಕ್ಕಾಗಿ ಧೀರೋದಾತ್ತ ಹೋರಾಟ ನಡೆಸಿದ ಕಿತ್ತೂರು ರಾಣಿ ಚೆನ್ನಮ್ಮನ ಆದರ್ಶಮಯ ಬದುಕು ಇಂದಿನ ಪೀಳಿಗೆಗೆ ದಾರಿದೀಪ ಎಂದು ಮಹಿಳಾ ಮತ್ತು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಲ್ಲೇಶ್ ತಿಳಿಸಿದರು.

ಪಟ್ಟಣದ ಮಿನಿವಿಧಾನಸೌಧ ಆವರಣದಲ್ಲಿ ಬುಧವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಆಯೋಜಿಸಿದ್ದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಭಾರತದ ಇತಿಹಾಸದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಅವರ ಹೋರಾಟ ಅವಿಸ್ಮರಣೀಯ. ಚೆನ್ನಮ್ಮನ ಸ್ವಾಭಿಮಾನ ಮತ್ತು ದೇಶಾಭಿಮಾನ ಇಂದಿನ ಪೀಳಿಗೆ ಅರಿತು ಅಳವಡಿಸಿಕೊಳ್ಳಬೇಕು ಎಂದರು.

ತಾಲೂಕು ವೀರಶೈವ ಲಿಂಗಾಯತ ಸಂಘದ ಅಧ್ಯಕ್ಷ ರೇಣುಕಾ ಪ್ರಸಾದ್ ಮಾತನಾಡಿ, ಕಿತ್ತೂರು ಚೆನ್ನಮ್ಮ ಅವರು ಮಾಡಿದ ಕಾರ್ಯಗಳಿಂದ ಇತಿಹಾಸದ ಪುಟದಲ್ಲಿ ಅವರು ಅಜರಾಮರ. ಇಂತಹ ಮಹನೀಯರ ಕುರಿತಾಗಿ ಅಧ್ಯಯನ ಮಾಡುವ ಮೂಲಕ ಮತ್ತಷ್ಟು ತಿಳಿದುಕೊಳ್ಳಬೇಕು. ಧೈರ್ಯ ಶೌರ್ಯ ಕೆಚ್ಚೆದೆಯ ಹೋರಾಟದ ಕಿತ್ತೂರು ಚೆನ್ನಮ್ಮ ಗುಣಗಳನ್ನು ಅಳವಡಿಸಿಕೊಂಡು ಬೆಳೆಸಿಕೊಂಡಾಗ ಮಾತ್ರ ಜಯಂತಿ ಕಾರ್ಯಕ್ರಮ ಅರ್ಥಪೂರ್ಣವಾಗುತ್ತದೆ ಎಂದರು.

ಕಾಂಗ್ರೆಸ್ ಮುಖಂಡ ಶಾಂತಕೃಷ್ಣ ಮಾತನಾಡಿ, ಕಿತ್ತೂರಿನಲ್ಲಿ ನಡೆದ ಮೊಟ್ಟ ಮೊದಲ ಹೋರಾಟ ಬ್ರಿಟೀಷ್‌ರಿಗೆ ಸೋಲಿನ ಕಹಿಯನ್ನು ನೀಡಿತ್ತು. ಬಲಿಷ್ಠವಾದ ಸೈನ್ಯ ಹೊಂದಿದ್ದ ಬ್ರಿಟೀಷ್‌ರ ವಿರುದ್ಧ ಕೆಚ್ಚೆದೆಯಿಂದ ಹೋರಾಡಲು ಚೆನ್ನಮ್ಮನ ಹೃದಯದಲ್ಲಿ ತುಂಬಿಕೊಂಡಿರುವ ನಾಡ ಭಕ್ತಿ, ನಾಡ ಪ್ರೇಮವೇ ಪ್ರೇರಣೆ ಒದಗಿಸಿತು. ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬುದರ ವಿರುದ್ಧ ಮೊದಲು ಸಿಡಿದೆದ್ದ ಸಂಸ್ಥಾನ ಕಿತ್ತೂರು. ಇದು ಹೋರಾಟಕ್ಕೆ ನಾಂದಿಯಾಯಿತು. ಕೆಚ್ಚೆದೆಯಿಂದ ಪುಟ್ಟ ಸಂಸ್ಥಾನದ ಉಳಿವಿಗಾಗಿ ಧೈರ್ಯ- ಶೌರ್ಯದಿಂದ ಹೋರಾಡಿದ ಚೆನ್ನಮ್ಮ ಓರ್ವ ಕನ್ನಡತಿ ಎಂಬುದು ನಮಗೆ ಹೆಮ್ಮೆ. ಸರದಾರ ಗುರುಸಿದ್ದಪ್ಪ, ಅಮಟೂರ ಬಾಳಪ್ಪ ಅವರು ಕಿತ್ತೂರು ಸೈನ್ಯದ ನಾಯಕರಾಗಿ ಮುಂಚೂಣಿಯಲ್ಲಿದ್ದರು ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ತಾಲೂಕು ಕಚೇರಿ ಶಿರಸ್ತೆದಾರ್ ಗಳಾದ ಸೋಮಣ್ಣ, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಡಿ.ಎಸ್ ಜಯಣ್ಣ, ಜಿಲ್ಲಾ ಹಿಂದುಳಿದ ವರ್ಗಗಳ ಆಯೋಗದ ಕಾರ್ಯಾಧ್ಯಕ್ಷ ಬಿ.ಸಿ ಶಂಕರಾಚಾರ್, ಅಖಿಲ ಭಾರತ ವೀರಶೈವ ಮಹಾಸಭೆಯ ಮಾಜಿ ಡಾ.ಜಯರಾಜ್, ಕಸಾಪ ಅಧ್ಯಕ್ಷ ಗೋಪಾಲಕೃಷ್ಣ, ತಾಲೂಕು ಕಚೇರಿ ಸಿಬ್ಬಂದಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.