ಜಿಲ್ಲೆ

ಸೀಬರ್ಡ್ ಗೇಟ್ ಎದುರು ಚೆಂಡಿಯಾ ನಾಗರಿಕರ ಪ್ರತಿಭಟನೆ

Uttara Kannada - Subash Hegde

ಕಾರವಾರ: ಚೆಂಡಿಯಾ ಗ್ರಾಮದ ನೂರಾರು ಮನೆಗಳಿಗೆ  ಸೋಮವಾರ ನೀರು ನುಗ್ಗಿದ್ದು, ಅದಕ್ಕೆ ಸೀಬರ್ಡ್ ನೌಕಾಯೋಜನೆಯ ಅವೈಜ್ಞಾ‌ನಿಕ ಕಾಮಗಾರಿಯೇ ಕಾರಣ ಎಂದು  ಸ್ಥಳೀಯರು ಆಕ್ಷೇಪಿಸಿ ನೌಕಾನೆಲೆಯ ಗೇಟ್ ಎದುರು ಪ್ರತಿಭಟನೆ ನಡೆಸಿದರು.

ನೌಕಾ ಯೋಜನೆಯ ಎರಡನೇ ಹಂತದ ಕಾಮಗಾರಿಗಾಗಿ ಸಮುದ್ರಕ್ಕೆ ನೀರು ಹರಿಯುವ ಚರಂಡಿಗಳನ್ನು ಮುಚ್ಚಲಾಗಿದೆ. ನೀರು ನಿಲ್ಲುವ ತಗ್ಗು ಪ್ರದೇಶಗಳನ್ನು ಮಣ್ಣು ಹಾಕಿ ತುಂಬಲಾಗಿದೆ. ಇದರಿಂದ ಗುಡ್ಡದಿಂದ ಹರಿದು ಬರುವ ನೀರು ಸರಿಯಾಗಿ ಹರಿದು ಹೋಗದೇ ಮನೆಗಳಿಗೆ ನುಗ್ಗುತ್ತಿದೆ. ಈ ಸಮಸ್ಯೆಯನ್ನು ಬಗೆಹರಿಸುವುದಾಗಿ ಕಳೆದ ವರ್ಷವೇ ಹೇಳಿದ್ದರೂ ಸಮಸ್ಯೆ ಬಗೆಹರಿಸಿಲ್ಲ ಎಂದು ಜನ ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ, ಜಿಪಂ ಸಿಇಒ ಈಶ್ವರ ಕಾಂದೂ, ಎಎಸ್ ಪಿ ಸಿ.ಟಿ.ಜಯಕುಮಾರ್  ಸ್ಥಳಕ್ಕಾಗಮಿಸಿ ನೌಕಾ ಅಧಿಕಾರಿಗಳ ಜತೆ ಸ್ಥಳ ಪರಿಶೀಲನೆ ನಡೆಸಿ ವಾಪಸಾದರು.

ಸಮನ್ವಯ ಸಮಿತಿ

ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ನೌಕಾನೆಲೆಯ ಒಳಗೆ ಕಾಮಗಾರಿಗಾಗಿ ನೀರು ಹರಿಯುವ ಒಂದು ಕಾಲುವೆ ಮುಚ್ಚಲಾಗಿದ್ದು, ಅದನ್ನು ಜೆಸಿಬಿ ಮೂಲಕ ತೆರವು ಮಾಡಿಕೊಡಲಾಗುವುದು ಎಂದು ನೌಕಾ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೇ ತುಂಬಿದ ನೀರನ್ನು ಪಂಪ್ ಮಾಡಿ ಹೊರ ಹಾಕುವುದಾಗಿ ಭರವಸೆ ನೀಡಿದ್ದಾರೆ.‌  ನೌಕಾಸೇನೆಯ ಜತೆ ಈ ವಿಚಾರವಾಗಿ ಸಮನ್ವಯ ಸಾಧಿಸಲು ಕಾರವಾರ ಎಸಿ ಅಧ್ಯಕ್ಷತೆಯಲ್ಲಿ  ಒಂದು ಸಮಿತಿ ರಚನೆ ಮಾಡಲಾಗುವುದು. ಅದರಲ್ಲಿ ಸ್ಥಳೀಯ ತಹಸೀಲ್ದಾರ್,  ಪಿಡಿಒ, ಹಾಗೂ ಇತರ ಅಧಿಕಾರಿಗಳೂ ಇರುವರು. ಕಾಲಕಾಲಕ್ಕೆ ಸಭೆ ಮಾಡಿ ಅವರು ನೌಕಾ ಅಧಿಕಾರಿಗಳ‌ ಜತೆ ಮಾತುಕತೆ ನಡೆಸಲಿದ್ದಾರೆ ಎಂದರು.

ನೀರಿನ ಹರಿವು ತಡೆದಿಲ್ಲ

ನೈಸರ್ಗಿಕ ನೀರಿನ ಹರಿವನ್ನು ನಾವು ತಡೆದಿಲ್ಲ ಎಂದು ಕದಂಬ ನೌಕಾನೆಲೆ ಪ್ರಕಟಣೆ ತಿಳಿಸಿದೆ. ಪಿಆರ್ ಒ ಪತ್ರಿಕಾ ಹೇಳಿಕೆ ನೀಡಿದ್ದು, ಮಳೆಗಾಲಕ್ಕೂ ಪೂರ್ವದಲ್ಲಿ ಕಾರವಾರ ಎಸಿ ಅವರ ಅಧ್ಯಕ್ಷತೆಯಲ್ಲಿ ಸಾಕಷ್ಟು ಸಭೆಗಳು ನಡೆದಿವೆ. ಸ್ಥಳ ಭೇಟಿ ಮಾಡಿ ನೀರು ಹರಿಯಲು ಇರುವ ನಾಲೆಗಳನ್ನು ಸ್ವಚ್ಛ ಮಾಡುವುದು, ಕಲ್ವರ್ಟ್ ಗಳನ್ನು ಶುದ್ಧೀಕರಣ ಮಾಡುವ ಕಾರ್ಯವನ್ನು ನೌಕಾನೆಲೆ ಕೈಗೊಂಡಿದೆ. ನೌಕಾನೆಲೆ ಎರಡನೇ ಹಂತದ ವಿಸ್ತರಣೆ ಕಾರ್ಯದಿಂದ ಯಾವುದೇ ಸಮಸ್ಯೆಯಾಗಿಲ್ಲ ಎಂದು ಹೇಳಲಾಗಿದೆ.