ಹಲಗೂರು : ರೈತರ ಜೀವನಾಡಿಯಾಗಿರುವ ರೇಷ್ಮೆ ಬೆಳೆಗೆ ಬೇರು ಕೊಳೆ ರೋಗ ಹರಡುತ್ತಿದ್ದು, ಅದನ್ನು ತಡೆಗಟ್ಟಲು ರೇಷ್ಮೆ ಇಲಾಖೆಯಿಂದ ಸಿಗುವ ಔಷಧಗಳನ್ನು ಬಳಸಿ ರೋಗ ತಡೆಗೆ ಮುಂದಾಗಬೇಕು ಎಂದು ಮದ್ದೂರು ವಿಭಾಗದ ಕೇಂದ್ರ ರೇಷ್ಮೆ ಮಂಡಳಿಯ ವಿಜ್ಞಾನಿ ಡಾ.ಶಿವಕುಮಾರ್ ತಿಳಿಸಿದರು.
ಮುತ್ತತ್ತಿ ರಸ್ತೆಯಲ್ಲಿರುವ ಕರಲಕಟ್ಟೆ ಗ್ರಾಮದ ಚಿಕ್ಕರಾಜು ಅವರ ಜಮೀನಿನಲ್ಲಿ ಹಲಗೂರಿನ ತಾಂತ್ರಿಕ ಸೇವಾ ಕೇಂದ್ರ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಹಿಪ್ಪು ನೇರಳೆ ತೋಟಕ್ಕೆ ಇತ್ತೀಚೆಗೆ ಯಥೇಚ್ಛವಾಗಿ ಹರಡುತ್ತಿರುವ ಬೇರು ಕೊಳೆ ರೋಗದ ಬಗ್ಗೆ ರೈತರಿಗೆ ಅರಿವು ಮೂಡಿಸುವ ನನ್ನ ರೇಷ್ಮೆ ನನ್ನ ಹೆಮ್ಮೆ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಿಪ್ಪು ನೇರಳೆ ಮತ್ತು ರೇಷ್ಮೆ ಹುಳು ಇದು ನಮ್ಮ ರೈತರ ಜೀವನಾಡಿ. ಆದರೆ ಇತ್ತೀಚಿನ ದಿನಗಳಲ್ಲಿ ಈ ಬೆಳೆಗೆ ಬೇರು ಕೊಳೆ ರೋಗ ಹರಡುತ್ತಿದೆ. ಇದು ಒಂದು ಗಿಡಕ್ಕೆ ಬಂದರೆ ಇಡೀ ಜಮೀನನ್ನು ನಾಶಪಡಿಸುತ್ತದೆ. ಅದನ್ನು ಸರಿಯಾದ ರೀತಿಯಲ್ಲಿ ಹತೋಟಿಗೆ ತರದಿದ್ದರೆ ಇಡೀ ಹಿಪ್ಪು ನೇರಳೆ ತೋಟವನ್ನು ನಾಶಪಡಿಸಬೇಕಾಗುತ್ತದೆ. ಅಲ್ಲದೆ ಅಕ್ಕಪಕ್ಕದ ಜಮೀನುಗಳಿಗೂ ಹರಡುತ್ತದೆ. ಭೂಮಿಗೆ ರಾಸಾಯನಿಕ ಗೊಬ್ಬರ ಮತ್ತು ಭೂಮಿಯಲ್ಲಿ ಫಲವತ್ತತೆ ಕಡಿಮೆಯಾಗುತ್ತಿರುವುದರಿಂದ ಈ ರೋಗ ಹರಡುತ್ತಿದೆ ಎಂದು ತಿಳಿಸಿದರು.
ಈ ರೋಗ ತಡೆಗೆ ಇಲಾಖೆ ಶಿಫಾರಸ್ಸಿನ ಔಷಧಗಳನ್ನು ಸಿಂಪಡಿಸಬೇಕು. ಅದರಲ್ಲಿ ಕಡಿಮೆ ಮಟ್ಟದಲ್ಲಿ ರೋಗ ಕಾಣಿಸಿದರೆ ಸಾಫ್ ಎಂಬ ಶಿಲೀಂದ್ರ ನಾಶಕ ಬಳಸಬೇಕು. ಮಿಸ್ಟರ್ ಪ್ರೊ ಎಂಬ ಜೈವಿಕ ಗೊಬ್ಬರವನ್ನು ಕೂಡ ಬಳಸಿ ರೋಗವನ್ನು ಹತೋಟಿಗೆ ತರಬಹುದು ಎಂದು ಮಾಹಿತಿ ನೀಡಿದರು.
ಉಪನ್ಯಾಸಕ ಸುಂದರ್ ರಾಜ್, ಹಲಗೂರು ತಾಂತ್ರಿಕ ಸೇವಾ ಕೇಂದ್ರದ ರೇಷ್ಮೆ ಕೃಷಿ ವಿಸ್ತರಣಾಧಿಕಾರಿಗಳಾದ ಎಸ್.ವಿ.ನರಸಿಂಹಮೂರ್ತಿ, ಹಲಸಹಳ್ಳಿ ತಾಂತ್ರಿಕ ಸೇವಾ ಕೇಂದ್ರದ ರೇಷ್ಮೆ ನಿರೀಕ್ಷಕ ನವೀನ್ ಕುಮಾರ್, ಮೈಸೂರು ರೇಷ್ಮೆ ನಿರೀಕ್ಷಕ ಬಿ.ಆರ್.ಕಿರಣ್, ಸಿಎಸ್‌ಆರ್‌ಟಿಐ ಪ್ರಾಜೆಕ್ಟ್ ಅಸಿಸ್ಟೆಂಟ್ ಸಹನಾ ಸೇರಿದಂತೆ ಸ್ಥಳೀಯ ರೈತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.