ಕಂಪ್ಲಿಯಲ್ಲಿ ಮಾರಾಟಕ್ಕಾಗಿ ತಾಳೆಹಣ್ಣನ್ನು ಕತ್ತರಿಸುತ್ತಿರುವ ದೃಶ್ಯ. 
ಜಿಲ್ಲೆ

ಋತುಮಾನದ ಫಲ ತಾಳೆ ಹಣ್ಣಿಗೆ ಬಲು ಬೇಡಿಕೆ

ಕುರುವತ್ತಿ ಶ್ರೀಕಾಂತಪ್ಪ

ವಿಜಯವಾಣಿ ವಿಶೇಷ ಕಂಪ್ಲಿ
ದಿನೇ ದಿನೆ ಏರುತ್ತಿರುವ ಬಿಸಿಲಿನ ತಾಪದಿಂದ ಶಮನಗೊಳ್ಳಲು ಪಟ್ಟಣದ ಜನತೆ ಋತುಮಾನದ ಔಷಧಯುಕ್ತ ತಾಳೆಹಣ್ಣಿನ ಮೊರೆ ಹೋಗಿದ್ದಾರೆ. ಬೇಡಿಕೆ ಹೆಚ್ಚಿರುವ ತಾಳೆ ಹಣ್ಣುಗಳು, ಬಿಸಿ ದೋಸೆಯಂತೆ ಭರಾಟೆಯಿಂದ ಮಾರಾಟಗೊಳ್ಳುತ್ತಿವೆ.

ರಾಸಾಯನಿಕ ಸೋಂಕಿಲ್ಲದೆ ನೈಸರ್ಗಿಕವಾಗಿ, ಮುಕ್ತ ವಾತಾವರಣದಲ್ಲಿ ತಾಳೆಹಣ್ಣು ದೊರೆಯುತ್ತವೆ. ಕಂಪ್ಲಿ ಸುತ್ತಮುತ್ತಲಿನ ರಾಮಸಾಗರ, ಬುಕ್ಕಸಾಗರ ಹಾಗೂ ತುಂಗಭದ್ರಾ ನದಿಪಾತ್ರದಲ್ಲಿ ನೈಸರ್ಗಿಕವಾಗಿ ಬೆಳೆದ ತಾಳೆಮರಗಳಿಂದ ಸಹಾಸಿ ಯುವಕರು ಋತುಮಾನದ ಫಲ ತಾಳೆ ಹಣ್ಣುಗಳನ್ನು ಸಂಗ್ರಹಿಸಿ ತಂದು ಮಾರಾಟ ಮಾಡುತ್ತಿದ್ದಾರೆ. ಒಂದು ಹಣ್ಣಿನಲ್ಲಿ ಎರಡು ಅಥವಾ ಮೂರು ಕಣ್ಣುಗಳಿದ್ದು, ಇವು ಔಷಧೀಯ ಗುಣಹೊಂದಿವೆ.

ಪ್ರಾಣಾಪಾಯದ ವೃತ್ತಿ

ತಾಳೆಹಣ್ಣು ಸಂಗ್ರಹ ಪ್ರಾಣಾಪಾಯದ ವೃತ್ತಿಯಾಗಿದ್ದರೂ, ಸಹಾಸಿ ಯುವಕರು ತಾಳೆಹಣ್ಣು ಸಂಗ್ರಹಿಸಿ ದಿನಗೂಲಿಗಳಿಸುವಲ್ಲಿ ಮುಂದಾಗುತ್ತಿದ್ದಾರೆ. ತಾಳೆಮರದ ಚೂಪಾದ ಗರಿಗಳ ಚೂರುವಿಕೆ, ತಾಳೆ ಮರದಲ್ಲಿನ ಚೇಳು, ವಿಷಜಂತು, ಕೆಂಪಿರುವೆ, ಝರಿ ಮೊದಲಾದ ಜೈವಿಕ ಉಪಟಳಗಳನ್ನು ಜಾಗೃತಿಯಿಂದ ಎದುರಿಸಿ, ಎಂಟತ್ತು ಸಹಾಸಿ ಯುವಕರು ತಾಳೆಮರ ಏರಿ ಚೂಪಾದ ಕತ್ತಿಯಿಂದ ತಾಳೆಹಣ್ಣಿನ ಗೊಂಚಲನ್ನು ಕೆಳಗಿಳಿಸುತ್ತಾರೆ.

ಆಟೋ ಇಲ್ಲವೆ ಬಂಡಿಗಳಲ್ಲಿ ಮಾರಾಟಕ್ಕಾಗಿ ತಂದು, ಹರಿತವಾದ ಕುಡುಗೋಲು ಇಲ್ಲವೆ ಕತ್ತಿಯಿಂದ ಕತ್ತರಿಸಿ ಗ್ರಾಹಕರಿಗೆ ಕೊಡುತ್ತಾರೆ.

ಇದೀಗ ಬೆಲೆ ಏರಿಕೆ

ಕೆಲ ವರ್ಷ ಹತ್ತು ರೂಪಾಯಿಗೊಂದರಂತೆ ಮಾರಾಟವಾಗುತ್ತಿದ್ದ ತಾಳೆಹಣ್ಣು, ಇದೀಗ ಬೆಲೆ ಏರಿಕೆ ಕಂಡಿದೆ. ತಾಳೆ ನೈಸರ್ಗಿಕ ಹಣ್ಣಾಗಿದ್ದು, ಜನತೆಗೋಸ್ಕರ ಮಾರಾಟ ಮಾಡುತ್ತಿದ್ದೇವೆ. ಆಟೋ, ಬಂಡಿ ಬಾಡಿಗೆ, ಸ್ಥಳದ ಜಕಾತಿ ಕಳೆದು ನಮಗೆ ದಿನಗೂಲಿಯಾಗಿ ನ್ನೂರರಿಂದ ಮುನ್ನೂರು ರೂಪಾಯಿ ದೊರೆಯುತ್ತದೆ ಎಂದು ಬುಕ್ಕಸಾಗರದ ಪ್ರಭು, ರಾಜಾ, ಮೈಲಾರಿ, ನಾಗರಾಜ, ಮಹೇಶ್, ರಾಜೇಶ್ ತಮ್ಮ ಸಂಕಷ್ಟವನ್ನು ಹೇಳಿಕೊಳ್ಳುತ್ತಾರೆ.

ತಾಳೆ, ವಿಶೇಷವಾಗಿ ಮಾನವನ ಆರೈಕೆ ಮತ್ತು ಪೋಷಣೆ ಮುಕ್ತವಾಗಿ ಋತುಮಾನಕ್ಕೆ ಅನುಸಾರವಾಗಿ ಬೆಳೆಯುವುದರಿಂದ ಮಾಲಿನ್ಯರಹಿತ ಮತ್ತು ರಾಸಾಯನಿಕ ಮುಕ್ತವಾಗಿದೆ. ಇದರ ಸೇವನೆಯಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲದಿರುವುದರಿಂದ ಬಹು ಜನಪ್ರಿಯವಾಗಿದೆ.

ಔಷಧೀಯ ಗುಣವುಳ್ಳ ತಾಳೆಹಣ್ಣು ಸೇವನೆಯಿಂದ ಕ್ಷೀಣ ಶರೀರವುಳ್ಳವರಿಗೆ ಶಕ್ತಿವರ್ಧಕವಾಗಿ, ಶೀತವೀರ್ಯ ಗುಣವುಳ್ಳವರಿಗೆ ದೇಹಕ್ಕೆ ತಂಪು ನೀಡುತ್ತದೆ. ದೇಹದ ನಿರ್ಜಲೀಕರಣವನ್ನು ತಡೆಗಟ್ಟುತ್ತದೆ. ಕಿಡ್ನಿಗಳ ಕಾರ್ಯಕ್ಷಮತೆ ಹೆಚ್ಚಿಸುವ, ಜೀರ್ಣಶಕ್ತಿ ವೃದ್ಧಿಸುವ, ಮಲಬದ್ಧತೆ ನಿವಾರಿಸುವ ಗುಣ ಹೊಂದಿದೆ. ಸೂರ್ಯನ ಪ್ರಖರತೆಯಿಂದಾಗುವ ಮೂರ್ಚೆ(ಸನ್ ಸ್ಟ್ರೋಕ್)ರೋಗವನ್ನೂ ನಿವಾರಿಸುವ ವಿಶೇಷ ಗುಣ ತಾಳೆಹಣ್ಣಿಗಿದೆ.ಡಾ. ಮಲ್ಲೇಶಪ್ಪಆಯುಷ್ ವೈದ್ಯಾಧಿಕಾರಿ, ಕಂಪ್ಲಿ ಇದನ್ನೂ ಓದಿ: ರಾಜ್ಯದಲ್ಲಿ ಹೆಚ್ಚಾದ ಬಿಸಿಲು ಧಗೆ; ಎದುರಾಗಿದೆ ಹೀಟ್‌ವೇವ್ ಆತಂಕ