ಜಿಲ್ಲೆ

ಗುರುಕೃಪಾನಗರ ನಿವಾಸಿಗಳ ನಿದ್ದೆಗೆಡಿಸಿದ ರಾಸಾಯನಿಕ ನೊರೆ

ಮಂಜುನಾಥ ಎಸ್. ಅಂಗಡಿ ಧಾರವಾಡ

ಕೆಲಗೇರಿ ಕೆರೆಯ ರಾಜಕಾಲುವೆಯುದ್ದಕ್ಕೂ ಆಳೆತ್ತರ ಕಸ ಬೆಳೆದುನಿಂತಿದೆ. ಈ ವರ್ಷ ಅತಿಯಾದ ಮಳೆಗಾಲದಲ್ಲೂ ರಾಜಕಾಲುವೆಗೆ ಹೊಂದಿಕೊ0ಡ ಪ್ರದೇಶದ ಮನೆಗಳು ಜಲಾವೃತವಾಗುವುದು ಖಚಿತ. ಮಳೆಗಾಲದಲ್ಲಿ ಒಂದು ಸಮಸ್ಯೆಯಾದರೆ ನಿತ್ಯವೂ ಹರಡುವ ರಾಸಾಯನಿಕ ನೊರೆ ನಿವಾಸಿಗಳ ನಿದ್ದೆಗೆಡಿಸಿದೆ.

ಕೆಲಗೇರಿ ಕೆರೆಯ ರಾಜಕಾಲುವೆಯು ಕೃಷಿ ವಿಶ್ವವಿದ್ಯಾಲಯದ ಎದುರಿನ ಹಿರೇಮಠ ಲೇಔಟ್, ಗುರುಕೃಪಾನಗರ ಹಾಗೂ ಸುತ್ತಮುತ್ತಲಿನ ಬಡಾವಣೆಗಳಲ್ಲಿ ಹಾದುಹೋಗಿದೆ. ರಾಜಕಾಲುವೆಯ ಸೇತುವೆಗಳಿಗೆ ಸಣ್ಣ ಪೈಪ್‌ಗಳನ್ನು ಅಳವಡಿಸಲಾಗಿದೆ. ಇವು ಮಳೆ ನೀರಿನ ಹರಿವು ತಡೆಯಲಾಗದೆ ಅಕ್ಕಪಕ್ಕ ಹರಿಯುತ್ತದೆ. ಇದರಿಂದ ಕಳೆದ 4- 5 ವರ್ಷಗಳಿಂದ ಸುತ್ತಲಿನ ಬಡಾವಣೆಗಳಿಗೆ ಅಪಾರ ಪ್ರಮಾಣದ ನೀರು ನುಗ್ಗಿ ಜಲಾವೃತವಾಗುತ್ತಿದೆ. ಇನ್ನು ಕಾಲುವೆಯುದ್ದಕ್ಕೂ ಕಸ ಬೆಳೆದಿದ್ದು, ನೀರು ಸರಾಗವಾಗಿ ಹರಿದು ಹೋಗಲು ಸಾಧ್ಯವಾಗದೆ ಜಲದಿಗ್ಬಂಧನವಾಗುತ್ತಿದೆ.

* ರಾಸಾಯನಿಕ ನೊರೆ ಹಾರಾಟ:

ಕೆಲಗೇರಿ ಕೆರೆಗೆ ಸೇರುತ್ತಿದ್ದ ಮೇಲ್ಭಾಗದ ಚರಂಡಿ ನೀರನ್ನು 2017ರಲ್ಲಿ ತಡೆದು ಬೇರೆ ಮಾರ್ಗ ಮಾಡಲಾಯಿತು. ಮಳೆಗಾಲದಲ್ಲಷ್ಟೆ ಅಲ್ಲದೆ, ವರ್ಷವಿಡೀ ಚರಂಡಿ ನೀರು ಹರಿಯುತ್ತಿದೆ. ಸೇತುವೆಗಳ ಪಕ್ಕ ಗಲೀಜು ನೀರು ಜಮೆಯಾಗಿ ರಾಸಾಯನಿಕವಾಗಿ ಮಾರ್ಪಟ್ಟು ಹಾರುತ್ತಿದೆ.

* ಜನಸಂಪರ್ಕ ಸಭೆಯಲ್ಲಿ ದೂರು:

ಗುರುಕೃಪಾನಗರ ನಿವಾಸಿಗಳು ಇಲ್ಲಿನ ಸಮಸ್ಯೆಯನ್ನು ಸಚಿವ ಸಂತೋಷ ಲಾಡ್ ಗಮನಕ್ಕೆ ತಂದಿದ್ದಾರೆ. ಜನಸಂಪರ್ಕ ಸಭೆಯಲ್ಲಿ 2 ಬಾರಿ ಸಚಿವರಿಗೆ ದೂರು ನೀಡಿದ್ದಾರೆ. ರಾಜಕಾಲುವೆಯನ್ನು ಪರಿಶೀಲಿಸಿ ಸರ್ವೇ ಮಾಡುವಂತೆ ಸಚಿವ ಲಾಡ್ ಸೂಚಿಸಿದ್ದರು. ಲೋಕೋಪಯೋಗಿ ಇಲಾಖೆಯವರು ಭೇಟಿ ನೀಡಿ ಪರಿಶೀಲಿಸಿದ್ದರು. ಆದರೆ, ರಾಜಕಾಲುವೆ ನಿರ್ಮಾಣ ಯಾವ ಇಲಾಖೆಯ ಸುಪರ್ದಿಗೆ ಬರುತ್ತದೆ ಎಂಬ ಗೊಂದಲ ಏರ್ಪಟ್ಟು ಸಮಸ್ಯೆ ಮುಂದುವರಿದಿದೆ.

ಮತ್ತೊ0ದೆಡೆ ಈ ಪ್ರದೇಶ ಚಿಕ್ಕಮಲ್ಲಿಗವಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುತ್ತದೆ. ಹೂಳು ಎತ್ತುವ ಕಾಮಗಾರಿ ಕೈಗೊಳ್ಳುವಂತೆ ಪಂಚಾಯಿತಿಯವರಿಗೆ ಹಲವು ಬಾರಿ ಆಗ್ರಹಿಸಿದ್ದರೂ ಪ್ರಯೋಜವಾಗಿಲ್ಲ. ಇದರಿಂದ ಬೇಸತ್ತ ನಿವಾಸಿಗಳು ಕೈಗಾರಿಕಾ ಪ್ರದೇಶದ ಕಂಪನಿಯ ಸಿಎಸ್‌ಆರ್ ಅನುದಾನದಡಿ ಹೂಳೆತ್ತುವ ಕಾಮಗಾರಿ ಕೈಗೊಂಡಿದ್ದಾರೆ.

ಸಾಧುನವರ ಲೇಔಟ್, ಗುರುಕೃಪಾನಗರ, ಹಿರೇಮಠ ಲೇಔಟ್, ಬಸವ ಕಾಲನಿ, ಶಿರಡಿನಗರ, ಮನೋರಮಾ ಲೇಔಟ್‌ಗಳು ಈ ವರ್ಷವೂ ಜಲಾವೃತವಾಗುವ ಸಾಧ್ಯತೆ ಇದೆ. ಆದ್ದರಿಂದ ಕೆಲಗೇರಿ ಕೆರೆಯಿಂದ ಆರಂಭವಾಗುವ ರಾಜಕಾಲುವೆಗುಂಟ ಬೆಳೆದ ಕಸ ತೆಗೆದು ಹೂಳೆತ್ತಿ ಆಳ ಹೆಚ್ಚಿಸಬೇಕು. ಅಲ್ಲಲ್ಲಿ ಇರುವ ಸೇತುವೆಗಳಿಗೆ ದೊಡ್ಡ ಪೈಪ್ ಅಳವಡಿಸಬೇಕು ಎಂದು ನಿವಾಸಿಗಳು ಆಗ್ರಹಿಸಿದ್ದಾರೆ.

ಕೆಲಗೇರಿ ಕೆರೆಗೆ ಚರಂಡಿ ನೀರು ಸೇರುವುದನ್ನು ತಪ್ಪಿಸಿರುವುದು ಒಳ್ಳೆಯ ಕೆಲಸ. ಈ ಚರಂಡಿ ನೀರು ಸರಾಗವಾಗಿ ಹರಿದುಹೋಗುವಂತೆ ರಾಜಕಾಲುವೆ ಮಾಡಿಲ್ಲ. ಕಲುಷಿತ ನೀರು ರಾಸಾಯನಿಕ ನೊರೆಯಾಗಿ ಮಾರ್ಪಟ್ಟು 4- 5 ಪ್ರದೇಶಗಳ ನಿವಾಸಿಗಳ ನಿದ್ದೆಗೆಡಿಸಿದೆ. ಕಾಲುವೆಯಲ್ಲಿ ಕಸ ಬೆಳೆದು ಹೂಳು ತುಂಬಿದ್ದು, ಅತಿಯಾದ ಮಳೆಯಾದರೆ ಈ ವರ್ಷವೂ ಜಲಾವೃತವಾಗುವ ಭೀತಿ ಇದೆ. ಈ ಪ್ರದೇಶದಲ್ಲಿನ ರಸ್ತೆಗಳು ಹದಗೆಟ್ಟಿದ್ದು, 24*7 ಕುಡಿಯುವ ನೀರಿನ ಕಾಮಗಾರಿ ಅರೆಬರೆಯಾಗಿದೆ. ಸಂಬ0ಧಪಟ್ಟವರು ಇತ್ತ ಗಮನಿಸಿ ಸಮಸ್ಯೆ ಪರಿಹರಿಸಬೇಕು.

- ಎಂ.ಎಂ. ಹಿರೇಮಠ, ಗುರುಕೃಪಾನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ