ಚೇಳೂರು: ರೈತಾಪಿ ಜನರ ಜಮೀನಿನ ಪೌತಿ ಖಾತೆ, ತಿದ್ದುಪಡಿ, ನೋಂದಣಿಯಾದ ಕ್ರಯ ಪತ್ರಗಳ ಖಾತೆಗಳನ್ನು ಇನ್ನು ಮುಂದೆ ಚೇಳೂರು ತಾಲೂಕು ಕಚೇರಿಯಲ್ಲೇ ಮಾಡಲಾಗುತ್ತದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಹೇಳಿದರು.
ಚೇಳೂರು ತಾಲೂಕು ಕಚೇರಿ ಮಿನಿ ವಿಧಾನಸೌಧ ಕಟ್ಟಡ ನಿರ್ಮಾಣಕ್ಕೆ ಪುಲಗಲ್ ಕ್ರಾಸ್‌ನಲ್ಲಿ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಚೇಳೂರು ನೂತನ ತಾಲೂಕು ರಚನೆಯಾಗಿ ವರ್ಷಗಳೇ ಕಳೆದಿವೆ. ಆರು ತಿಂಗಳಿಂದ ಸ್ಥಗಿತವಾಗಿದ್ದ ಕಚೇರಿ ಕೆಲಸಗಳು ಇನ್ನು ಮುಂದೆ ಶುರುವಾಗಲಿದ್ದು, ರೈತರಿಗೆ ಅನೂಕೂಲವಾಗಲಿದೆ ಎಂದರು.
ಚೇಳೂರು ತಾಲೂಕಿಗೆ ಚಿಂತಾಮಣಿ ತಾಲೂನ ಚಿಲಕಲನೇರ್ಪು, ಏನಿಗದಲೆ, ಟಿ.ಗೊಲ್ಲಹಳ್ಳಿ, ಬುರುಡಗುಂಟೆ ಕಂದಾಯ ವೃತ್ತಗಳ ಗ್ರಾಮಗಳು, ಬಾಗೇಪಲ್ಲಿ ತಾಲೂಕಿನ ನಾರೇಮದ್ದೇಪಲ್ಲಿ, ಕುರುಬರಹಳ್ಳಿ, ಸೋಮನಾಥಪುರ, ಪೋಲನಾಯಕನಹಳ್ಳಿ 4 ಕಂದಾಯ ವೃತ್ತಗಳ ಗ್ರಾಮಗಳು ಹಾಗೂ ಚೇಳೂರು ಹೋಬಳಿಯ 9 ಕಂದಾಯ ವೃತ್ತಗಳ ಗ್ರಾಮಗಳನ್ನು ಭೂಮಿ ತಂತ್ರಾಂಶದಲ್ಲಿ ಅಳವಡಿಸಲು ಚಿಂತಾಮಣಿ ತಾಲೂಕನ್ನು ವಿಭಜಿಸಿ ಸೇರಿಸಲಾಗಿದೆ ಎಂದರು.
ಆದರೆ, ಇಷ್ಟು ಸಮಯ ಭೂಮಿ ತಂತ್ರಾಂಶದ ಕೆಲಸ ಸ್ಥಗಿತಗೊಂಡಿತ್ತು. ಆರು ತಿಂಗಳಿಂದ ಜಮೀನು, ನಿವೇಶನ, ಮನೆಗಳ ನೋಂದಣಿ ಮತ್ತು ಪೌತಿ ಖಾತೆ ವಿಭಾಗಗಳು, ನೋಂದಣಿ ಖಾತೆ ಮಾಡುತ್ತಿರಲಿಲ್ಲ. ಇನ್ನು ಮುಂದೆ ಜನರಿಗೆ ಅನೂಕೂಲವಾಗಲಿದೆ ಎಂದರು.
ಚೇಳೂರಲ್ಲೇ ಸೌಧ ನಿರ್ಮಾಣವಾಗಲಿ
ತಾಲೂಕು ಕಚೇರಿ ಕಟ್ಟಡದ ಸ್ಥಳವನ್ನು ಚೇಳೂರಿಗಿಂತ ದೂರದ ಪ್ರದೇಶದಲ್ಲಿ ನೋಡುತ್ತಿದ್ದು, ಜಿಂಕಪಲ್ಲಿ ಗ್ರಾಮದ ಸರ್ವೇ ನಂ.2 ರಲ್ಲಿ 9.38 ಎಕರೆ ಜಮೀನಿಗೆ ಆದೇಶ ಬಂದಿದೆ ಎನ್ನಲಾಗಿದೆ. ಆದರೆ, ಇದು ಜನವಿರೋಧಿಯಾಗಿದೆ. ಚೇಳೂರು ಸರ್ವೇ ನಂ. 53 ಮತ್ತು ಷೇರ್‌ಖಾನ್ ಕೋಟೆ ಸರ್ವೇ ನಂ. 48 ರಲ್ಲಿ 9.10 ಎಕರೆ ಭೂಮಿ ಇದೆ. ಅಲ್ಲದೆ, ಚೇಳೂರಿನಲ್ಲಿರುವ ವಿದ್ಯುತ್ ಕಚೇರಿಯನ್ನು ಪುಲಗಲ್ ಕ್ರಾಸ್‌ಗೆ ವರ್ಗಾಯಿಸಿ ಗ್ರಾಮದ ಮಧ್ಯದಲ್ಲಿ ತಾಲೂಕು ಸೌಧ ನಿರ್ಮಿಸಬೇಕೆಂದು ನಾಗರಿಕರು ಜಿಲ್ಲಾಧಿಕಾರಿಗೆ ಮನವಿ ಮಾಡಿದರು. ಈ ವೇಳೆ ಡಿಸಿ ರವೀಂದ್ರ ಮನವಿ ಕುರಿತಂತೆ ಉನ್ನತ ಮಟ್ಟದಲ್ಲಿ ಸಮಾಲೋಚಿಸಲಾಗುವುದು ಎಂದರು.