ಮಡಿಕೇರಿ: ಚೆಕ್ಕೆರ ತ್ಯಾಗರಾಜ ಅವರ ಕಲಾ ಸೇವೆ ಅಪಾರವಾಗಿದೆ ಎಂದು ಕೊಡಗು ಕಲಾವಿದರ ಸಂಘದ ಅಧ್ಯಕ್ಷ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ಹೇಳಿದರು.
ಕೊಡಗು ಕಲಾವಿದರ ಸಂಘದ ವತಿಯಿಂದ ಮೈಸೂರು ಕೊಡವ ಸಮಾಜದಲ್ಲಿ ಇತ್ತೀಚೆಗೆ ಕೊಡವ ಸಾಹಿತ್ಯ ರಚನೆಕಾರ, ಸಂಗೀತ ನಿರ್ದೇಶಕ, ಹಾಡುಗಾರ, ಹಿರಿಯ ಕಲಾವಿದ ಚೆಕ್ಕೆರ ತ್ಯಾಗರಾಜ ಅಪ್ಪಯ್ಯ ಅವರಿಗೆ ನಡೆದ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಲಾವಿದರ ಕಲಾ ಸೇವೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಸನ್ಮಾನ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಚೆಕ್ಕೆರ ತ್ಯಾಗರಾಜ ಅವರ ಕಲಾ ಸೇವೆ ಅಪಾರವಾಗಿದ್ದು, ಇತರರಿಗೆ ಮಾದರಿಯಾಗಿದೆ ಎಂದರು.
ಸಂಘದ ವತಿಯಿಂದ ಮೊದಲ ಬಾರಿಗೆ ಚೆಕ್ಕೆರ ತ್ಯಾಗರಾಜ ಅವರನ್ನು ಗುರುತಿಸಿ ಸನ್ಮಾನಿಸಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಸಾಧಕರನ್ನು ಗುರುತಿಸಿ ಸನ್ಮಾನಿಸಿ ಗೌರವಿಸಲಾಗುವುದು. ಈ ಕಾರ್ಯಕ್ರಮ ನಿರಂತರವಾಗಿ ನಡೆಯಲಿದ್ದು, ಇದಕ್ಕೆ ಸರ್ವ ಕಲಾಭಿಮಾನಿಗಳು ಸಹಕರಿಸಬೇಕೆಂದು ಮನವಿ ಮಾಡಿದರು.
ಹಿರಿಯ ಕಲಾವಿದ ಹಾಗೂ ಆಯೋಜಕ ನೆರವಂಡ ಉಮೇಶ್ ಮಾತನಾಡಿ, ತ್ಯಾಗರಾಜ ಅವರಂತೆ ಅವರ ತಂದೆ ಅಪ್ಪಯ್ಯ ಅವರು ಕೂಡ ಕಲಾ ಕ್ಷೇತ್ರಕ್ಕೆ ದೊಡ್ಡ ಕೊಡುಗೆಯನ್ನೇ ನೀಡಿದ್ದಾರೆ. ಕೊಡಗಿನಿಂದ ಮದ್ರಾಸ್ ವರೆಗೆ ಪಯಣ ಬೆಳೆಸಿ ಕಲಾ ಸೇವೆ ಮಾಡಿದ್ದಾರೆ ಎಂದು ಬಣ್ಣಿಸಿದರು.
ಚೆಕ್ಕೆರ ತ್ಯಾಗರಾಜ ಅವರು ಸಂಗೀತವನ್ನೇ ಉಸಿರಾಗಿಸಿಕೊಂಡಿದ್ದು, ೧೮ ವರ್ಷಗಳ ಭಾರತೀಯ ಸೇನಾ ಸೇವೆಯ ನಂತರ ಕಲಾ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಯಶಸ್ವೀ ಕಲಾವಿದರೆನಿಸಿಕೊಂಡಿದ್ದಾರೆ. ಸೇನೆ ಮತ್ತು ಕಲಾ ಸೇವೆಯಲ್ಲಿ ತೊಡಗಿಸಿಕೊಂಡ ತ್ಯಾಗರಾಜ ಅವರನ್ನು ಸನ್ಮಾನಿಸುವುದೇ ಹೆಮ್ಮೆಯ ವಿಚಾರವೆಂದರು.
ಬೆಂಗಳೂರಿನ ಉದ್ಯಮಿ ಪೊನ್ನಚೆಟ್ಟಿರ ರಮೇಶ್ ಮಾತನಾಡಿ, ಕಲಾವಿದರ ಸಂಘದ ಸದಸ್ಯತ್ವವನ್ನು ಹೆಚ್ಚಿಸಬೇಕು. ಈ ರೀತಿಯ ಅರ್ಥಪೂರ್ಣ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕು. ಇದೇ ಜೂನ್ ತಿಂಗಳಿನಲ್ಲಿ ಬೆಂಗಳೂರು ಕೊಡವ ಸಮಾಜದಲ್ಲಿ ಕಲಾ ಸಂಗಮ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಸರ್ವರು ಕೈ ಜೋಡಿಸುವಂತೆ ಕೋರಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ತ್ಯಾಗರಾಜ ಅವರು. ಕೊಡಗು ಕಲಾವಿದರ ಸಂಘ ಎಲೆಮರೆಯ ಕಾಯಿಗಳನ್ನು ಗುರುತಿಸಿ ಸಮಾಜಕ್ಕೆ ಪರಿಚಯ ಮಾಡುವ ಮತ್ತು ಸನ್ಮಾನಿಸುವ ಮಹಾಕಾರ್ಯ ಮಾಡುತ್ತಿದೆ. ಮಂದ್ ಲ್ ತಕ್ಕಾರ ಕಿಂಜಿ ಸಂದ್ ಲ್ ತಕ್ಕಾರಕ್ ಬೆಲೆ ಜಾಸ್ತಿ, ನನ್ನನ್ನು ಗುರುತಿಸಿ ಮೈಸೂರಿಗೆ ಬಂದು ಸನ್ಮಾನಿಸಿ ಗೌರವಿಸಿರುವುದರಿಂದ ಹೃದಯ ತುಂಬಿ ಬಂದಿದೆ ಎಂದು ಭಾವುಕರಾದರು.
ಅಲ್ಲಾರಂಡ ರಂಗ ಚಾವಡಿಯ ಅಧ್ಯಕ್ಷ ವಿಠಲ್ ನಂಜಪ್ಪ, ಸೃಷ್ಟಿ ಕೊಡವ ರಂಗದ ನಿರ್ದೇಶಕಿ ಅಡ್ಡಂಡ ಸಿ.ಅನಿತಾ ಕಾರ್ಯಪ್ಪ, ಮೈಸೂರು ಕೊಡವ ಸಮಾಜದ ಉಪಾಧ್ಯಕ್ಷ ಮಾಚಿಮಾಡ ನಾಣಯ್ಯ ಹಾಗೂ ಕಾರ್ಯದರ್ಶಿ ಕೇಟೋಳಿರ ರವಿ ಮಾತನಾಡಿದರು.
ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಈರಮಂಡ ಹರಿಣಿ ವಿಜಯ್, ಕಾಡ್ಯಾಮಡ ಸುಮನ್, ತಾತಂಡ ಪ್ರಭಾ ನಾಣಯ್ಯ, ಚೆರುವಾಳಂಡ ಸುಜಲ ನಾಣಯ್ಯ, ಕಾಳಿಮಾಡ ದಿನೇಶ್ ನಾಚಪ್ಪ, ಪೊಡಮಾಡ ಭವಾನಿ ನಾಣಯ್ಯ, ಈರಮಂಡ ವಿಜಯ್ ಮತ್ತಿತರರು ಇದ್ದರು.