ವಿಜಯವಾಣಿ ಸುದ್ದಿಜಾಲ ಆನೇಕಲ್
ಹುಟ್ಟುಹಬ್ಬದ ದಿನ ಕರೆ ಮಾಡಿ ಶುಭಾಶಯ ಕೋರಿ ನಮ್ಮಲ್ಲಿ ಅನಾಥ ಮಕ್ಕಳಿದ್ದಾರೆ ಎಂದು ಯಾರಾದರೂ ಹಣ ಕೇಳಿದರೆ ಇನ್ಮುಂದೆ ಸ್ವಲ್ಪ ಹುಷಾರಾಗಬೇಕಿದೆ!
ಇಂತಹ ಒಂದು ಜಾಲ ಆನೇಕಲ್ ತಾಲೂಕಿನ ಚಂದಾಪುರದ ಟೀಚರ್ಸ್ ಕಾಲನಿಯಲ್ಲಿ ಬೆಳಕಿಗೆ ಬಂದಿದ್ದು, ಆಲ್ ಪೀಪಲ್ ಚಾರಿಟೆಬಲ್ ಟ್ರಸ್ಟ್ ಹೆಸರಿನಲ್ಲಿ ಮಹಿಳೆಯರಿಬ್ಬರು ಯುವತಿಯರನ್ನು ಕೆಲಸಕ್ಕೆ ನೇಮಕ ಮಾಡಿಕೊಂಡು ನಿತ್ಯ ಹುಟ್ಟುಹಬ್ಬ ಇರುವವರ ನಂಬರ್‌ಗೆ ಕರೆ ಮಾಡಿ ಯುವತಿಯರ ಮೂಲಕ ಶುಭಾಶಯ ಹೇಳಿಸುತ್ತಾರೆ. ಬಳಿಕ ನಮ್ಮಲ್ಲಿ ಅನಾಥ ಮಕ್ಕಳಿದ್ದಾರೆ ಎಂದು ಹೇಳಿ ಬೇರೆ ಯಾವುದೋ ಅನಾಥಾಶ್ರಮದಲ್ಲಿ ತೆಗೆಸಿರುವ ಒಂದಷ್ಟು ಫೋಟೋ ಮತ್ತು ವಿಡಿಯೋಗಳನ್ನು ಕಳುಹಿಸುತ್ತಾರೆ. ನಂತರ ಆನ್ಲೈನ್ ಮೂಲಕ ಸ್ಕ್ಯಾನ್ ಕಳುಹಿಸಿ ಹಣ ಹಾಕಿಸಿಕೊಳುತ್ತಾರೆ. ಇಂಥ ಜಾಲವನ್ನು ಇದೀಗ ಸೂರ್ಯ ನಗರ ಠಾಣೆ ಪೊಲೀಸರು ಭೇದಿಸಿದ್ದಾರೆ.
ಸೋಮವಾರ ಟೀಚರ್ಸ್ ಕಾಲನಿಯ ನಿವಾಸಿಯೊಬ್ಬರ ಅರಿವಿಗೆ ಇದು ಬಂದಿದ್ದು, ಬಳಿಕ ಸೂರ್ಯ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇನ್‌ಸ್ಪೆಕ್ಟರ್ ಮಹಾಜನ್ ನೇತೃತ್ವದಲ್ಲಿ ದಾಳಿ ನಡೆಸಿದಾಗ ಅಕ್ರಮ ಹಣ ಸಂಗ್ರಹ ನಡೆಸುತ್ತಿದ್ದ ಮಹಿಳೆಯರಿಬ್ಬರು ಕಚೇರಿಗೆ ಬೀಗ ಹಾಕಿಕೊಂಡು ಪರಾರಿಯಾಗಿದ್ದರು.
ಬಳಿಕ ಮನೆ ಮಾಲೀಕರನ್ನು ಸ್ಥಳಕ್ಕೆ ಕರೆಸಿಕೊಂಡ ಪೊಲೀಸರು ಮನೆಯ ಬಾಗಿಲನ್ನು ತೆಗೆದು ಒಳಗೆ ಇದ್ದ ಎರಡು ಲ್ಯಾಪ್‌ಟಾಪ್, ಅಪಾರ ಪ್ರಮಾಣದ ನಂಬರ್‌ಗಳು ಇರುವ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡು ಮನೆಗೆ ಬೀಗ ಹಾಕಿದ್ದಾರೆ.
ತಮಿಳುನಾಡಿನಿಂದ ಜುಲೈನಲ್ಲಿ ನಗರಕ್ಕೆ ಬಂದು ಬಾಡಿಗೆಗೆ ವಾಸವಿದ್ದ ಶ್ವೇತಾ ಹಾಗೂ ಕೀರ್ತಿ ಎಂಬ ಇಬ್ಬರು ಮನೆಯಲ್ಲಿ ಏಳೆಂಟು ಜನ ಯುವತಿಯರನ್ನು ಕೆಲಸಕ್ಕೆ ನೇಮಕ ಮಾಡಿಕೊಂಡು ನಿತ್ಯ ಜನರಿಗೆ ಮೊಸ ಮಾಡಿ ಹಣ ಗಳಿಸುತ್ತಿದ್ದ ಸಂಗತಿ ಬೆಳಕಿಗೆ ಬಂದಿದೆ.