ಜಿಲ್ಲೆ

ಕಡೂರಲ್ಲಿ ಗಂಡು ಚಿರತೆ ಸಾವು

Haveri

ರಟ್ಟಿಹಳ್ಳಿ: ತಾಲೂಕಿನ ಕಡೂರ ಗ್ರಾಮದ ಹೊರವಲಯದಲ್ಲಿರುವ ತುಂಗಾ ಮೇಲ್ದಂಡೆಯ ಮುಖ್ಯ ಕಾಲುವೆಯ ಬಳಿ ಗುರುವಾರ 4 ವರ್ಷದ ಗಂಡು ಚಿರತೆ ಮೃತಪಟ್ಟಿದೆ.

ಬೆಳಗ್ಗೆ 10 ಗಂಟೆಯ ಸುಮಾರಿಗೆ ಕಾಲುವೆ ಬಳಿ ಬಿದ್ದುಕೊಂಡಿದ್ದ ಚಿರತೆ ಬಾಯಿಯಲ್ಲಿ ರಕ್ತ ಸುರಿದಿತ್ತು. ಇದನ್ನು ಕಂಡ ಗ್ರಾಮಸ್ಥರು ತಕ್ಷಣವೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು. ಸ್ಥಳಕ್ಕೆ ವಲಯ ಅರಣ್ಯಾಧಿಕಾರಿ ಹೇಮಗಿರಿ ಅಂಗಡಿ ಮತ್ತು ಉಪವಲಯ ಅರಣ್ಯಾಧಿಕಾರಿ ಪ್ರವೀಣ ಕಾನಳ್ಳಿ ಆಗಮಿಸಿ, ಪಶು ವೈದ್ಯಾಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಪರೀಕ್ಷಿಸಿದರು. ನಂತರ ರಟ್ಟಿಹಳ್ಳಿ ಪಶು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.

ರೋಗಗ್ರಸ್ಥವಾದಾಗ ಮತ್ತು ನಾಯಿ, ಇತರ ಪ್ರಾಣಿ ತಿಂದ ಸಂದರ್ಭದಲ್ಲಿ ಪ್ರಾಣಿಗಳ ಕೂದಲು ಸಿಲುಕಿ ಜೀರ್ಣಕ್ರಿಯೆಗೆ ತೊಂದರೆಯಾಗುತ್ತದೆ. ಇದೇ ಕಾರಣದಿಂದ ಚಿರತೆ ಮೃತಪಟ್ಟಿದೆ ಎಂದು ಪಶು ವೈದ್ಯಾಧಿಕಾರಿ ಡಾ.ಬಿ.ಕೆ. ಸುಮಂತಕುಮಾರ ತಿಳಿಸಿದರು.