ಮಳವಳ್ಳಿ : ತಾಲೂಕಿನ ಹಳದಾಸನಹಳ್ಳಿ ಗ್ರಾಮದಲ್ಲಿ ಗುರುವಾರ ರಾತ್ರಿ ಚಿರತೆ ದಾಳಿಗೆ ಮೇಕೆ ಬಲಿಯಾಗಿದೆ. ಗ್ರಾಮದ ಮರಿಸ್ವಾಮಿ ಎಂಬ ರೈತ ಸಾಕಿದ್ದ ಮೇಕೆಯನ್ನು ಚಿರತೆ ಎಳೆದೊಯ್ದು ಸಮೀಪದ ಜಮೀನಿನಲ್ಲಿ ತಿಂದುಹಾಕಿದೆ. ಹಳದಾಸನಹಳ್ಳಿ ಗ್ರಾಮಸ್ಥರಿಗೆ ಆತಂಕ ಹೆಚ್ಚಾಗಿದೆ.
ಮನೆಯ ಹಿಂಭಾಗದ ಕೊಟ್ಟಿಗೆಯಲ್ಲಿ ಕುರಿಗಳೊಂದಿಗೆ ಮೇಕೆಯನ್ನು ಕೂಡಿ ಹಾಕಲಾಗಿತ್ತು. ಗುರುವಾರ ರಾತ್ರಿ ಕೊಟ್ಟಿಗೆಗೆ ನುಗ್ಗಿದ ಚಿರತೆಯು ಮೇಕೆಯನ್ನು ಕಚ್ಚಿಕೊಂಡು ಪರಾರಿಯಾಗಿ ಜೋಳದ ಬೆಳೆಯ ನಡುವೆ ಭಕ್ಷಿಸಿದೆ. ಶುಕ್ರವಾರ ಬೆಳಗ್ಗೆ ಹೊಲದಲ್ಲಿ ಮೇಕೆಯ ಮೂಳೆ, ಮಾಂಸ ಪತ್ತೆಯಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಅವರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಪಶು ಸಂಗೋಪನೆ ಇಲಾಖೆ ವೈದ್ಯಾಧಿಕಾರಿ ವರದಿ ದಾಖಲಿಸಿದ್ದಾರೆ. ಇಲಾಖೆಯಿಂದ ಸೂಕ್ತ ಪರಿಹಾರ ಕೊಡಿಸುವ ಭರವಸೆಯನ್ನು ನೊಂದ ರೈತನಿಗೆ ನೀಡಿದ್ದಾರೆ.