ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ
ಗುಜ್ಜಾಡಿ ಗ್ರಾಮದ ನಾಯಕವಾಡಿ ಸಮೀಪ ತ್ರಾಸಿ-ಗಂಗೊಳ್ಳಿ ಮುಖ್ಯರಸ್ತೆಯಲ್ಲಿರುವ ಗಂಗೊಳ್ಳಿ ಪೊಲೀಸ್ ಠಾಣೆಯ ಚೆಕ್‌ಪೋಸ್ಟ್ ಸ್ಥಗಿತಗೊಂಡಿದ್ದು, ಪುನರಾರಂಭಿಸಬೇಕೆಂಬ ಆಗ್ರಹ ಕೇಳಿ ಬಂದಿದೆ. ಸುಮಾರು ಮೂರು ವರ್ಷಗಳಿಂದ ಚೆಕ್‌ಪೋಸ್ಟ್ ಬಾಗಿಲು ಮುಚ್ಚಿದ್ದು, ಕಟ್ಟಡವೂ ಪಾಳು ಬಿದ್ದಿದೆ. ಉಡುಪಿ ಜಿಲ್ಲೆಯ ಅತಿ ಸೂಕ್ಷ್ಮ ಪ್ರದೇಶವಾದ ಗಂಗೊಳ್ಳಿಯಲ್ಲಿ ಗೋಕಳ್ಳತನ ಸಹಿತ ಕಾನೂನು ಬಾಹಿರ ಚಟುವಟಿಕೆ ಅಲ್ಲಲ್ಲಿ ನಡೆಯುತ್ತಿರುವುದರಿಂದ ಇದನ್ನು ನಿಗ್ರಹಿಸಲು ನಾಯಕವಾಡಿ ಪೊಲೀಸ್ ಚೆಕ್‌ಪೋಸ್ಟ್ ಕಾರ್ಯಾರಂಭ ಅವಶ್ಯ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
2014ರಲ್ಲಿ ಗಂಗೊಳ್ಳಿಯಲ್ಲಿ ನಡೆದ ಕೋಮುಗಲಭೆ ಹಾಗೂ ಬೆಂಕಿ ಪ್ರಕರಣದ ಬಳಿಕ ಅಹಿತಕರ ಘಟನೆ ತಡೆಯುವ ನಿಟ್ಟಿನಲ್ಲಿ 2015ರಲ್ಲಿ ಗುಜ್ಜಾಡಿ ಗ್ರಾಮದ ನಾಯಕವಾಡಿ ಸಮೀಪ ಪೊಲೀಸ್ ಚೆಕ್‌ಪೋಸ್ಟ್ ಆರಂಭಿಸಲಾಗಿತ್ತು. ಅಂದಿನ ಗಂಗೊಳ್ಳಿ ಪೊಲೀಸ್ ಠಾಣೆ ಉಪನಿರೀಕ್ಷಕ ಸುಬ್ಬಣ್ಣ ಅವರು ಚೆಕ್‌ಪೋಸ್ಟ್‌ನಲ್ಲಿ ಸಿಸಿ ಟಿವಿ, ವಿದ್ಯುತ್ ಸಂಪರ್ಕ ಸಹಿತ ಪೊಲೀಸ್ ಸಿಬ್ಬಂದಿಗೆ ಅಗತ್ಯವುಳ್ಳ ಮೂಲಭೂತ ಸೌಲಭ್ಯ ಒದಗಿಸುವ ಪ್ರಯತ್ನ ನಡೆಸಿದ್ದರು.
ಚೆಕ್‌ಪೋಸ್ಟ್‌ನಲ್ಲಿ ಪ್ರತಿನಿತ್ಯ ಸಿಬ್ಬಂದಿ ನೇಮಿಸಿ ಪ್ರತಿಯೊಬ್ಬರ ಚಲನವಲನದ ಮೇಲೆ ನಿಗಾ ಇಡಲಾಗಿತ್ತು. ಚೆಕ್‌ಪೋಸ್ಟ್ ಬಳಿ ಗೇಟ್ ಅಳವಡಿಸಿ ಗಂಗೊಳ್ಳಿಗೆ ಬರುವ ಹಾಗೂ ಗಂಗೊಳ್ಳಿಯಿಂದ ಹೊರ ಹೋಗುವ ವಾಹನಗಳ ತಪಾಸಣೆ ನಡೆಸುವ ಮೂಲಕ ಕಿಡಿಗೇಡಿಗಳಿಗೆ ಬಿಸಿ ಮುಟ್ಟಿಸುವ ಪ್ರಯತ್ನವೂ ನಡೆದಿತ್ತು.
ಆರಂಭದ 2 ವರ್ಷಗಳ ಕಾಲ ಸಮರ್ಪಕವಾಗಿ ಕಾರ್ಯನಿರ್ವಹಿಸಿದ ಚೆಕ್‌ಪೋಸ್ಟ್‌ನಲ್ಲಿ ದಿನಗಳೆದಂತೆ ಕಾರ್ಯವೈಖರಿಯ ತೀವ್ರತೆ ಕಡಿಮೆಯಾಗಿತ್ತು. ಅಂದಿನ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ವರ್ಗಾವಣೆಗೊಂಡ ಬಳಿಕ ಬಂದ ಎಲ್ಲ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್‌ಗಳು ನಾಯಕವಾಡಿ ಚೆಕ್‌ಪೋಸ್ಟ್ ಬಗ್ಗೆ ಗಮನ ಹರಿಸಿರಲಿಲ್ಲ. ಚೆಕ್‌ಪೋಸ್ಟ್ ನಿರ್ವಹಣೆ ವೆಚ್ಚ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮತ್ತು ಪೊಲೀಸ್ ಸಿಬ್ಬಂದಿ ನಿಯೋಜನೆ ಕೂಡ ಸರಿಯಾಗಿ ನಡೆಯದ ಕಾರಣ ಹಂತ ಹಂತವಾಗಿ ಪೊಲೀಸ್ ಚೆಕ್‌ಪೋಸ್ಟ್ ಕಾರ್ಯಚಟುವಟಿಕೆ ಸ್ಥಗಿತಗೊಂಡಿತು.
ಚೆಕ್‌ಪೋಸ್ಟ್‌ನಲ್ಲಿ ನಿಯೋಜಿಸಲು ಸಿಬ್ಬಂದಿ ಕೊರತೆ ಇದ್ದು, 2014ರ ಕೋಮುಗಲಭೆ ಬಳಿಕ ಗಂಗೊಳ್ಳಿಯಲ್ಲಿ ಯಾವುದೇ ಗಂಭೀರ ಪ್ರಕರಣ ನಡೆದಿಲ್ಲ. ಗಂಗೊಳ್ಳಿಯಲ್ಲಿ ರಾತ್ರಿ ವೇಳೆ ಪೊಲೀಸ್ ಚೆಕ್‌ಪೋಸ್ಟ್ ಕಾರ್ಯನಿರ್ವಹಿಸುತ್ತಿದೆ. ಹೀಗಾಗಿ ಚೆಕ್‌ಪೋಸ್ಟ್ ಮರು ಆರಂಭಿಸುವ ಅಗತ್ಯ ಇಲ್ಲ ಎನ್ನುವುದು ಪೊಲೀಸ್ ಇಲಾಖೆ ಅಧಿಕಾರಿಗಳ ವಾದ.
ನಾಯಕವಾಡಿಯ ಪೊಲೀಸ್ ಚೆಕ್‌ಪೋಸ್ಟ್ ಅನ್ನು ಶಾಶ್ವತವಾಗಿ ಮುಚ್ಚಲು ಬಿಡದೆ ಹಿರಿಯ ಅಧಿಕಾರಿಗಳು ಪೊಲೀಸ್ ಚೆಕ್‌ಪೋಸ್ಟ್‌ಗೆ ಮರುಜೀವ ತುಂಬುವ ಕಾರ್ಯ ಕೈಗೊಳ್ಳಬೇಕು. ಇಲ್ಲಿ ಅಳವಡಿಸಲಾಗಿದ್ದ ಸಿಸಿ ಟಿವಿಯನ್ನು ದುರಸ್ತಿಗೊಳಿಸಿ ಇಲ್ಲಿ ನಡೆಯುವ ಪ್ರತಿಯೊಂದು ಚಟುವಟಿಕೆಗಳ ಮೇಲೆ ಇಲಾಖೆ ನಿಗಾ ಇಡಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.
ಮೂರು ವರ್ಷಗಳಿಂದ ಪೊಲೀಸ್ ಚೆಕ್‌ಪೋಸ್ಟ್ ಬಾಗಿಲು ಮುಚ್ಚಿದ್ದು, ಕಟ್ಟಡ ನಿರ್ವಹಣೆ ಇಲ್ಲದೆ ಪಾಳು ಬೀಳಲಾರಂಭಿಸಿದೆ. ಅಪರೂಪಕ್ಕೆ ಬಾಗಿಲು ತೆರೆಯುತ್ತಿದ್ದ ನಾಯಕವಾಡಿ ಚೆಕ್‌ಪೋಸ್ಟ್ ಇದೀಗ ಶಾಶ್ವತವಾಗಿ ಮುಚ್ಚುವ ಹಂತಕ್ಕೆ ತಲುಪಿದೆ. ಇಲ್ಲಿ ಅಳವಡಿಸಲಾಗಿದ್ದ ಸಿಸಿ ಟಿವಿ ಕೂಡ ಹಾಳಾಗಿದೆ. ದಾನಿಗಳ ಸಹಕಾರದಿಂದ ಲಕ್ಷಾಂತರ ರೂ. ಖರ್ಚು ಮಾಡಿ ನಿರ್ಮಿಸಿದ ಕಟ್ಟಡ ನಿರುಪಯುಕ್ತವಾಗುತ್ತಿದೆ. ಅಂದಿನ ಪೊಲೀಸ್ ಉಪನಿರೀಕ್ಷಕರ ಶ್ರಮ ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳ ಸಹಕಾರದೊಂದಿಗೆ ಆರಂಭಗೊಂಡಿದ್ದ ಪೊಲೀಸ್ ಚೆಕ್‌ಪೋಸ್ಟ್ ಶಾಶ್ವತವಾಗಿ ಮುಚ್ಚುವ ಹಂತಕ್ಕೆ ಬಂದು ನಿಂತಿದೆ.
ನಾಯಕವಾಡಿ ಪೊಲೀಸ್ ಚೆಕ್‌ಪೋಸ್ಟ್ ಆರಂಭವಾದ ಬಳಿಕ ಅಹಿತಕರ ಘಟನೆಗಳಿಗೆ ಕಡಿವಾಣ ಬಿದ್ದಿತ್ತು. ಕಿಡಿಗೇಡಿಗಳಿಗೆ ಕಂಟಕವಾಗಿದ್ದ ಈ ಚೆಕ್‌ಪೋಸ್ಟ್ ಮುಚ್ಚುವ ಹಂತಕ್ಕೆ ಬಂದಿರುವುದು ದುರದೃಷ್ಟಕರ. ನಾಯಕವಾಡಿ ಚೆಕ್‌ಪೋಸ್ಟ್ ಪುನಃ ಕಾರ್ಯಾಚರಿಸುವಂತೆ ಮಾಡಲು ಇಲಾಖೆ ಹಿರಿಯ ಅಧಿಕಾರಿಗಳು ಗಮನ ಹರಿಸಬೇಕು-ನವೀನ್ ದೊಡ್ಡಹಿತ್ಲು, ಸಾಮಾಜಿಕ ಕಾರ್ಯಕರ್ತ, ಗಂಗೊಳ್ಳಿ.