ಜಿಲ್ಲೆ

ಅಕ್ಷರಜಾತ್ರೆಯಲ್ಲಿ ತೆರೆಯಲಿವೆ 855 ಮಳಿಗೆ: ಶಾಸಕ ಪಿ.ಎಂ.ನರೇಂದ್ರಸ್ವಾಮಿ ಮಾಹಿತಿ

ಕೆ.ಎನ್.ರಾಘವೇಂದ್ರ

ಮಂಡ್ಯ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಕಲ ರೀತಿಯಲ್ಲಿ ಸಜ್ಜುಗೊಂಡಿದ್ದೇವೆ. 64 ಎಕರೆ ಪ್ರದೇಶದಲ್ಲಿ ಮುಂಜಾಗ್ರತಾ ಕ್ರಮದೊಂದಿಗೆ ವೇದಿಕೆ ನಿರ್ಮಾಣವಾಗುತ್ತಿದ್ದು, ಮೂರು ದಿನದೊಳಗೆ ಪೂರ್ಣಗೊಳ್ಳಲಿದೆ ಎಂದು ಮಳವಳ್ಳಿ ಶಾಸಕರೂ ಆದ ಸಮ್ಮೇಳನದ ವೇದಿಕೆ ನಿರ್ವಹಣಾ ಸಮಿತಿ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ಹೇಳಿದರು.

ನಗರದ ಸ್ಯಾಂಜೊ ಆಸ್ಪತ್ರೆ ಹಾಗೂ ಅಮರಾವತಿ ಹೋಟೆಲ್ ಹಿಂಭಾಗದಲ್ಲಿ ವೇದಿಕೆ ನಿರ್ಮಾಣವಾಗುತ್ತಿರುವ ಸ್ಥಳದ ಸಿದ್ಧತೆಯನ್ನು ಪರಿಶೀಲನೆ ನಡೆಸಿ ಬಳಿಕ ಮಾತನಾಡಿದ ಅವರು, ಪ್ರಧಾನ ವೇದಿಯಲ್ಲಿ ಸುಮಾರು 40 ಸಾವಿರ ಜನರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. 450 ಪುಸ್ತಕ ಮಳಿಗೆ, 350 ವಾಣಿಜ್ಯ ಮಳಿಗೆ, 55 ಸರ್ಕಾರಿ ಮಳಿಗೆ ನಿರ್ಮಿಸಲಾಗಿದೆ. ಊಟದ ವ್ಯವಸ್ಥೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ. ಜನದಟ್ಟಣೆಯಾಗದಂತೆ ತಡೆಯಲು ಪ್ರತ್ಯೇಕ ಫುಡ್ ಕೌಂಟರ್ ತೆರೆಯಲಾಗಿದೆ. ನೋಂದಾಯಿತ ಪ್ರತಿನಿಧಿಗಳಿಗೆ 40, ಜನಸಾಮಾನ್ಯರಿಗೆ 120 ಫುಡ್ ಕೌಂಟರ್‌ಗಳ ಜತೆಗೆ ಮಾಧ್ಯಮದ, ವಿಐಪಿಗಳಿಗೆ ಪ್ರತ್ಯೇಕ ಕೌಂಟರ್ ಮಾಡಲಾಗಿದೆ ಎಂದು ವಿವರಿಸಿದರು.

ಸಹಸ್ರಾರು ಸಂಖ್ಯೆಯಲ್ಲಿ ಜನ ಸೇರುವುದರಿಂದ ಶುಚಿತ್ವಕ್ಕೆ ಮತ್ತು ಶೌಚಗೃಹಕ್ಕೆ ಪ್ರಾಧಾನ್ಯತೆ ನೀಡಲಾಗಿದೆ. 250 ಶೌಚಗೃಹ, ಅಡುಗೆ ಸಿಬ್ಬಂದಿಗೆ 50 ಸ್ನಾನದಗೃಹದ ವ್ಯವಸ್ಥೆ ಮಾಡಲಾಗಿದೆ. ವಿದ್ಯು ಅಡಚಣೆಯಿಂದ ತೊಂದರೆ ಆಗದಂತೆ ಜನರೇಟರ್ ಸೌಲಭ್ಯವಿರಲಿದೆ. ಅಗ್ನಿ ದುರಂತ ಸಂಭವಿಸದಂತೆ ಮುಂಜಾಗ್ರತಾ ಕ್ರಮ ಕೈಗೊಂಡಿದ್ದು, ಸಮ್ಮೇಳನ ಬಹಳ ವಿಜೃಂಭಣೆ ಹಾಗೂ ವೈಭವೋಪೇತದಿಂದ ಕೂಡಿರಲಿದೆ. ಜಿಲ್ಲಾಡಳಿತ ಸಾಕಷ್ಟು ಮುತುವರ್ಜಿಯಿಂದ ಕಾರ್ಯನಿರ್ವಹಿಸುತ್ತಿದೆ. ಸಾರ್ವಜನಿಕರು, ನೋಂದಾಯಿತ ಪ್ರತಿನಿಧಿಗಳು, ಗಣ್ಯರಿಗೆ ತೊಂದರೆಯಾಗದಂತೆ ಕ್ರಮವಹಿಸಲಾಗಿದೆ. ಪೊಲೀಸ್, ಅಗ್ನಿಶಾಮಕ ಸಿಬ್ಬಂದಿ ನೇಮಿಸಲಾಗಿದೆ. ಸಮ್ಮೇಳನದ ಅಂಗವಾಗಿ ಮಳವಳ್ಳಿಯಲ್ಲಿ ಡಿ.18ರಂದು ನಾನಾ ಸಂಘಟನೆಗಳ ವತಿಯಿಂದ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಅತಿಥಿ ಸತ್ಕಾರಕ್ಕೆ ಹೆಸರಾಗಿರುವ ಮಂಡ್ಯ ಜಿಲ್ಲೆಗೆ ಎಲ್ಲೂ ಚ್ಯುತಿ ಬಾರದ ರೀತಿಯಲ್ಲಿ ಮಂಡ್ಯದ ಹಿರಿಮೆ, ಗರಿಮೆ ಎತ್ತಿಯಿಡುವ ನಿಟ್ಟಿನಲ್ಲಿ ಸಾಹಿತ್ಯ ಸಮ್ಮೇಳನ ಆಯೋಜಿಸಿ ಜಿಲ್ಲೆಗೆ ಕೀರ್ತಿ ತರಲಾಗುವುದು. ಇದಕ್ಕೆ ಎಲ್ಲರ ಸಹಕಾರ, ಸಹಭಾಗಿತ್ವ ಕೂಡ ಮುಖ್ಯವಾಗಿದ್ದು ಸಮ್ಮೇಳನದ ಯಶಸ್ವಿಗೆ ಎಲ್ಲರೂ ಕೈಜೋಡಿಸಬೇಕೆಂದು ಮನವಿ ಮಾಡಿದರು.

ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಸಮ್ಮೇಳನದಲ್ಲಿ ಲಕ್ಷಾಂತರ ಜನರು ಊಟ ಮಾಡುವುದರಿಂದ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆಹಾರದ ಗುಣಮಟ್ಟ ಪರಿಶೀಲನೆಗಾಗಿ 10 ಜನರ ಆಹಾರ ತಜ್ಞರ ತಂಡ ರಚನೆ ಮಾಡಲಾಗಿದೆ. ಮೂರು ದಿನವೂ ಆ ತಂಡ ಆಹಾರದ ಗುಣಮಟ್ಟದ ಪರಿಶೀಲನೆ ನಡೆಸಿ ವರದಿ ನೀಡಲಿದೆ. ನೀರಿನ ವ್ಯವಸ್ಥೆಗೆ ಕ್ರಮಕೈಗೊಳ್ಳಲಾಗಿದೆ. ಒಟ್ಟು ಮೂರು ಬೋರ್‌ವೆಲ್ಗಳಿದ್ದು ನೀರು ಪೂರೈಕೆಗೆ 5.8 ಕಿ.ಮೀ. ಉದ್ದದ ಪೈಪ್‌ಲೈನ್ ವ್ಯವಸ್ಥೆ ಮಾಡಲಾಗಿದೆ. ಓವರ್‌ಹೆಡ್ ಟ್ಯಾಂಕ್‌ನಿಂದ ಆಹಾರ ತಯಾರಿಕಾ ಸ್ಥಳ, ಶೌಚಗೃಹಕ್ಕೆ ನೀರು ಪೂರೈಕೆ ಆಗಲಿದೆ. 3 ಕಡೆ ಆರ್‌ಒ ಪ್ಲಾಂಟ್ ನಿರ್ಮಿಸಲಾಗಿದೆ. ನೀರಿನ ಶುದ್ಧತೆ ಕೂಡ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದರು.

24 ಎಕರೆ ಜಾಗವನ್ನು ಪಾರ್ಕಿಂಗ್‌ಗೆಂದು ನಿಗದಿಗೊಳಿಸಲಾಗಿದೆ. ನಗರದಿಂದ ಉಚಿತ ಬಸ್ ಸಂಚಾರ ಇರಲಿದೆ. ಸಮ್ಮೇಳನಕ್ಕೆ ಆಗಮಿಸುವವರಿಗೆಂದು ತಾಲೂಕು ಕೇಂದ್ರಗಳಿಂದ ಕೂಡ ಬಸ್ ವ್ಯವಸ್ಥೆ ಮಾಡಲಾಗಿದೆ. 6 ಸಾವಿರ ನೋಂದಾಯಿತ ಪ್ರತಿನಿಧಿಗಳಿಗೆ ಅರ್ಧ ಕೆ.ಜಿ ಬೆಲ್ಲ, ಅರ್ಧ ಕೆ.ಜಿ ಸಕ್ಕರೆ, ಬ್ರೆಶ್, ಪೇಸ್ಟ್, ಸೋಪು, ಬೆಡ್‌ಶೀಟ್ ಒಳಗೊಂಡ ಲೇದರ್‌ಬ್ಯಾಗ್ ಕಿಟ್ ನೀಡಲಾಗುವುದು ಎಂದರು.

ಲೋಕೋಪಯೋಗಿ ಇಲಾಖೆ ಇಇ ಹರ್ಷ, ಉಸ್ತುವಾರಿ ಸಚಿವ ಮಾಧ್ಯಮ ಕಾರ್ಯದರ್ಶಿ ಸೋಮಶೇಖರ್ ಕೆರಗೋಡು, ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಎಂ.ಎಸ್.ಚಿದಂಬರ್ ಇತರರಿದ್ದರು.