ಚಿಕ್ಕಬಳ್ಳಾಪುರ: ವಿಟಮಿನ್ ಮತ್ತು ಪ್ರೊಟೀನ್ ಯುಕ್ತ ಸಮತೋಲಿತ ಆಹಾರ ಸೇವನೆಯಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಎಸ್. ಮಹೇಶ್ ಕುಮಾರ್ ಸಲಹೆ ನೀಡಿದ್ದಾರೆ.
ಚಿಕ್ಕಬಳ್ಳಾಪುರ ನಗರದ ವಾಪಸಂದ್ರ ಬಾಲಕಿಯರ ಪ್ರೌಢಶಾಲೆಯಲ್ಲಿ
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾ ಘಟಕವು ಕೈಗೊಂಡಿದ್ದ "ವಿಶ್ವ ಅಯೋಡಿನ್ ದಿನ ಹಾಗೂ ಸಪ್ತಾಹ ದಿನಾಚರಣೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ಆಯೋಡಿನ್ ಕೊರತೆಯಿಂದ ಗರ್ಭಿಣಿಯರಲ್ಲಿ ಗರ್ಭಪಾತ, ಪ್ರಸವ ಪೂರ್ವ ಸಾಯುವ ಮಕ್ಕಳ ಪ್ರಮಾಣ ಹೆಚ್ಚಾಗುತ್ತದೆ. ಮಕ್ಕಳಲ್ಲಿ ಬುದ್ದಿಮಾಂದ್ಯತೆ, ದೈಹಿಕ ಕುಂಠಿತ ಬೆಳವಣಿಗೆ, ಕಲಿಕೆಯಲ್ಲಿ ಹಿಂದುಳಿಯುವಿಕೆ, ಕಿವುಡು, ಮೂಕತನ, ಮೆಳ್ಳೆಗಣ್ಣು ಸೇರಿದಂತೆ ಇತರ ನ್ಯೂನತೆಯನ್ನು ಕಾಣಬಹುದಾಗಿದೆ. ನಿಶ್ಯಕ್ತಿ, ಗಳಗಂಡ ರೋಗ, ಕೆಲಸದಲ್ಲಿ ಆಲಸ್ಯ ಇಂತಹ ಕಾಯಿಲೆಗಳು ಆಯೋಡಿನ್ ಕೊರತೆಯಿಂದಾಗಿ ವಯಸ್ಕರಲ್ಲಿ ಹೆಚ್ಚಾಗಿ ಕಂಡು ಬರುತ್ತದೆ ಎಂದರು.
ಮಾನಸಿಕ ಹಾಗೂ ದೈಹಿಕ ವಿಕಲತೆ ತಡೆಗಟ್ಟಲು ಅಯೋಡಿನ್‌ಯುಕ್ತ ಉಪ್ಪನ್ನೇ ಬಳಸಬೇಕು. ಉಪ್ಪಿನ ಪ್ಯಾಕೆಟ್ ಖರೀದಿಸುವ ಮೊದಲು ಆಯೋಡಿನ್ ಅಂಶ ಇದೆಯೇ? ಎಂಬುದನ್ನು ಖಚಿತ ಪಡಿಸಿಕೊಳ್ಳಬೇಕು. ಪ್ರಮುಖವಾಗಿ ಸೂರ್ಯ ಮಾರ್ಕಿನ ಚಿಹ್ನೆಯನ್ನು ಗಮನಿಸಬೇಕು ಎಂದರು. ಆಯೋಡಿನ್‌ಯುಕ್ತ ಉಪ್ಪನ್ನ ಪ್ರತಿನಿತ್ಯ ಆಹಾರದಲ್ಲಿ ಉಪಯೋಗಿಸುವುದರಿಂದ ಅಯೋಡಿನ್ ಕೊರತೆಯಿಂದ ಬರುವ ರೋಗಗಳನ್ನು ತಡೆಗಟ್ಟಬಹುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಜಿ. ಹರೀಶ್, ತಾಲೂಕು ಆರೋಗ್ಯಾಧಿಕಾರಿ ಡಾ ಮಂಜುಳಾ ಮತ್ತಿತರರು ಇದ್ದರು.
*ಅರಿವು ಕಾರ್ಯಕ್ರಮ*
ದೇಹಕ್ಕೆ ಅಯೋಡಿನ್ ಅವಶ್ಯಕತೆ ಬಗ್ಗೆ ಮತ್ತು ಇಲಿ ಜ್ವರ ನಿಯಂತ್ರಣ ಸೇರಿದಂತೆ ಆರೋಗ್ಯಕರ ಚಟುವಟಿಕೆಯ ಬಗ್ಗೆ ಅರಿವು ಮೂಡಿಸಲಾಯಿತು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಾಲಾ ಸಿಬ್ಬಂದಿ, ಆಶಾ ಕಾರ್ಯರ್ತೆಯರು, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಾಯಿತು.