ಜಿಲ್ಲೆ

ಕಟ್ಟೆ ಒತ್ತುವರಿ ಪ್ರದೇಶ ಪರಿಶೀಲನೆ

ರೇಷ್ಮೆ ನಗರ ಡೆಸ್ಕ್

ಉಪ ತಹಸೀಲ್ದಾರ್, ಪುರಸಭೆ ಅಧಿಕಾರಿಗಳಿಂದ ಮಾಹಿತಿ ಸಂಗ್ರಹ

ಬಿಡದಿ : ಸಾರ್ವಜನಿಕರಿಂದ ಸರ್ಕಾರಿ ಕಟ್ಟೆಗಳನ್ನು ಮುಚ್ಚಿರುವ ದೂರುಗಳು ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಅಧಿಕಾರಿಗಳು ಕೆಂಚನಕುಪ್ಪೆ ಗ್ರಾಮದ ಎರಡು ಕಟ್ಟೆಗಳ ಜಾಗಕ್ಕೆ ಶುಕ್ರವಾರ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಪುರಸಭೆ ವ್ಯಾಪ್ತಿಯ 4ನೇ ವಾರ್ಡ್ ಕೆಂಚನಕುಪ್ಪೆಯ ಎರಡು ಕಟ್ಟೆಗಳನ್ನು ಒತ್ತುವರಿ ಮಾಡಿ, ಕಟ್ಟೆಯ ಮೂಲ ಸ್ವರೂಪವನ್ನು ಮುಚ್ಚಿ ಅನ್ಯ ಕಟ್ಟಡ ನಿರ್ಮಾಣ ಮಾಡಿಕೊಂಡಿದ್ದರು. ಈ ಬಗ್ಗೆ ಗ್ರಾಮದ ಸುರೇಶ್ ಎಂಬುವವರು, ರಾಮನಗರ ತಹಸೀಲ್ದಾರ್ ತೇಜಸ್ವಿನಿಗೆ ದಾಖಲೆಗಳ ಸಮೇತ ದೂರು ನೀಡಿದ್ದರು.
ದೂರಿನ ಹಿನ್ನೆಲೆಯಲ್ಲಿ ತಹಸೀಲ್ದಾರ್ ನಿರ್ದೇಶನ ಮೇರೆಗೆ ಉಪ ತಹಸೀಲ್ದಾರ್ ಮಲ್ಲೇಶ್, ಸರ್ವೇ ಅಧಿಕಾರಿಗಳೊಂದಿಗೆ ಶುಕ್ರವಾರ ಎರಡು ಕಟ್ಟೆಗಳ ಜಾಗಕ್ಕೆ ಭೇಟಿ ನೀಡಿ, ಪರಿಶೀಲನೆ ಮಾಡಿದರು.
ಕೆಂಚನಕುಪ್ಪೆಯ ಸರ್ವೇ ನಂಬರ್ 41/1 ರಲ್ಲಿ 6 ಗುಂಟೆ ಕುಂಬಾರಕಟ್ಟೆ ಇದೆ. ಅದೇರೀತಿ ಸರ್ವೇ ನಂಬರ್ 172/5 ಹಾಗೂ 172/11ರಲ್ಲಿ 15 ಗುಂಟೆ ಸಿದ್ದಯ್ಯನಕಟ್ಟೆ ಇದ್ದು, ಇಂದು ಅದು ತನ್ನ ಮೂಲ ಸ್ವರೂಪವನ್ನೇ ಕಳೆದುಕೊಂಡಿದೆ. ಸಂಪೂರ್ಣವಾಗಿ ಎರಡೂ ಕಟ್ಟೆಗಳನ್ನು ಮುಚ್ಚಲಾಗಿದೆ. ಅದರಲ್ಲೂ ಸಿದ್ದಯ್ಯನ ಕಟ್ಟೆಯನ್ನು ಪ್ರಬಲರು ಮುಚ್ಚಿ ಮನೆ ನಿರ್ಮಾಣ ಮಾಡಿಕೊಂಡಿದ್ದಾರೆ ಎಂಬ ಆರೋಪ ಇತ್ತು.

ಅಧಿಕಾರಿಗಳಲ್ಲೇ ಗೊಂದಲ
ಒತ್ತುವರಿ ತೆರವುಗೊಳಿಸುವಂತೆ ತಹಸೀಲ್ದಾರ್ ಸೂಚಿಸಿದ್ದರೂ ಬಿಡದಿ ಪುರಸಭೆ ಅಧಿಕಾರಿಗಳು ಹಾಗೂ ಉಪ ತಹಸೀಲ್ದಾರ್ ಜಂಟಿಯಾಗಿ ಸ್ಥಳಕ್ಕೆ ಹೋಗಿ ಕಟ್ಟೆಗಳ ಜಾಗ ತೆರವು ಮಾಡುವ ಕಾರ್ಯಕ್ಕೆ ಮುಂದಾಗಲೇ ಇ್ಲ. ಪುರಸಭೆಯಿಂದ ಜೆಸಿಜಿ ಯಂತ್ರ ಬಳಸಿ ತೆರವು ಮಾಡಿ ಎಂಬ ಆದೇಶವಿದ್ದರೂ ಪುರಸಭೆ ಅಧಿಕಾರಿಗಳು ಮಾತ್ರ ಕೈ ಬೀಸಿಕೊಂಡು ಬಂದಿದ್ದರು. ಉಪ ತಹಸೀಲ್ದಾರ್ ಈ ಬಗ್ಗೆ ಪ್ರಶ್ನೆ ಮಾಡಿದರೆ ನಮ್ಮಿಂದ ತೆರವು ಮಾಡಲು ಬರಲ್ಲ, ನಿಮ್ಮ ಇಲಾಖೆಯಿಂದಲೇ ತೆರವು ಮಾಡಿ ಎಂದು ಸಬೂಬು ಹೇಳಿ ಕಾಲ ಹರಣ ಮಾಡಿದರು.

ನೋಟಿಸ್ ನೀಡಿ ತೆರವು ಮಾಡಿ
ಸಿದ್ದಯ್ಯನ ಕಟ್ಟೆ ಜಾಗದಲ್ಲಿ ಮನೆಗಳನ್ನು ಕಟ್ಟಲಾಗಿದೆ. ಹಾಗಾಗಿ ನೋಟಿಸ್ ನೀಡಿ, ತೆರವು ಮಾಡಿ ಎಂದು ಪುರಸಭೆಯ ಸದಸ್ಯರಾದ ಸೋಮಶೇಖರ್, ರಮೇಶ್ ಉಪತಹಸೀಲ್ದಾರ್ ಮಲ್ಲೇಶ್ ಅವರಿಗೆ ಮನವಿ ಮಾಡಿದರು. ಉಪ ತಹಸೀಲ್ದಾರ್ ಭೇಟಿ ವೇಳೆ, ಕಟ್ಟೆಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಮನೆ ನಿರ್ಮಾಣ ಮಾಡಿರುವ ಮಾಲೀಕರು ಸ್ಥಳದಲ್ಲಿ ಇರಲಿಲ್ಲ. ಈ ವೇಳೆ ಪುರಸಭೆ ಅಧ್ಯಕ್ಷ ಹರಿಪ್ರಸಾದ್, ಸದಸ್ಯರಾದ ಸೋಮಶೇಖರ್, ರಮೇಶ್, ಸರ್ವೆಯರ್ ಪ್ರಭಾಕರ್ ಸೇರಿದಂತೆ ಸಿಬ್ಬಂದಿ ಉಪಸ್ಥಿತರಿದ್ದರು.

ನಮ್ಮ ಗ್ರಾಮದಲ್ಲಿ ನಮ್ಮ ಮುತ್ತಾತರ ಕಾಲದಲ್ಲಿ ಜನ ಜಾನುವಾರುಗಳ ಉಪಯೋಗಕ್ಕೆ ಇದ್ದ ಕಟ್ಟೆಗಳನ್ನು ಉಳ್ಳವರು ಮುಚ್ಚಿದ್ದರು. ನಾನು ಹಾಗೂ ನಮ್ಮ ಸ್ನೇಹಿತರು ಸೇರಿ ದಾಖಲೆಗಳನ್ನು ಕಲೆಹಾಕಿ ತಹಸೀಲ್ದಾರ್‌ಗೆ ದೂರು ನೀಡಿದ್ದೆವು. ಸ್ಥಳ ಪರಿಶೀಲಿಸಲು ಬಂದ ಉಪತಹಸೀಲ್ದಾರ್ ಯಾವುದೇ ಕ್ರಮ ವಹಿಸದೆ, ಬಂದ ದಾರಿಯಲ್ಲೇ ಹಾಗೆ ಹೋಗಿರುವುದು ವಿಪರ್ಯಾಸ.- ಸುರೇಶ್, ದೂರುದಾರ, ಕೆಂಚನಕುಪ್ಪೆ
ಸರ್ವೇ ಅಧಿಕಾರಿಗಳ ತೆಗೆ ಸ್ಥಳ ಪರಿಶೀಲನೆ ಮಾಡಲಾಗಿದೆ. ಕಟ್ಟೆ ಜಾಗದಲ್ಲಿ ಮನೆ ನಿರ್ಮಾಣ ಮಾಡಿರುವ ಕಾರಣ ನೋಟಿಸ್ ನೀಡದೆ ಮನೆ ತೆರವು ಮಾಡಲು ಬರುವುದಿಲ್ಲ. ಹಾಗಾಗಿ ತಹಸೀಲ್ದಾರ್ ಅವರಿಗೆ ವರದಿ ಸಲ್ಲಿಸಿ, ನಂತರ ಸಂಬಂಧಿಸಿದವರಿಗೆ ನೋಟಿಸ್ ನೀಡಿ, ತೆರವು ಮಾಡಲಾಗುವುದು.- ಮಲ್ಲೇಶ್ಉಪ ತಹಸೀಲ್ದಾರ್