ಜಿಲ್ಲೆ

ಗ್ರಾಹಕನ ಕುಟುಂಬಕ್ಕೆ ಪರಿಹಾರ ಚೆಕ್ ವಿತರಣೆ

ಲಲಾಟಾಕ್ಷ ಎಸ್

ಅರಸೀಕೆರೆ ಗ್ರಾಮಾಂತರ: ಅಕಾಲಿಕ ಮರಣಕ್ಕೆ ತುತ್ತಾದ ತಾಲೂಕಿನ ಜಾಜೂರು ಕರ್ನಾಟಕ ಬ್ಯಾಂಕ್ ಗ್ರಾಹಕ ವೆಂಕಟೇಶ್ ಅವರ ಕುಟುಂಬಕ್ಕೆ ಬ್ಯಾಂಕಿನ ಕೆಬಿಎಲ್ ಸುರಕ್ಷಾ ವಿಮೆಯಡಿ 10 ಲಕ್ಷ ರೂ.ಗಳ ಪರಿಹಾರ ಚೆಕ್ ಅನ್ನು ಪತ್ನಿ ರೇಣುಕಮ್ಮ ಅವರಿಗೆ ವಿತರಿಸಲಾಯಿತು.


ಕರ್ನಾಟಕ ಬ್ಯಾಂಕ್ ಹಾಸನ ಕ್ಲಸ್ಟರ್ ಮುಖ್ಯಸ್ಥ ಉಮೇಶ್ ಭಟ್ ಮಾತನಾಡಿ, ಗ್ರಾಹಕರಿಗೆ ಜೀವ ತುಂಬಲಾಗದಿದ್ದರೂ ಅವರ ಕುಟುಂಬದ ಸುರಕ್ಷತೆಗಾಗಿ ವಿಮಾ ಯೋಜನೆ ಒದಗಿಸಿದ್ದೇವೆ. ಪರಿಹಾರದ ಹಣವನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.


ಶಾಖೆಯ ಪ್ರಬಂಧಕ ಪಿ.ಆರ್.ಪುರುಷೋತ್ತಮ ಮಾತನಾಡಿ, ಬ್ಯಾಂಕ್‌ನಲ್ಲಿ ಮಾಡಿಸಿದ್ದ ಕೆಬಿಎಲ್ ಸುರಕ್ಷಾ ಜೀವ ವಿಮೆ ಇಂದು ನಿಮಗೆ ಈ ಮೊತ್ತವನ್ನು ಪಡೆಯುವಂತೆ ಮಾಡಿದೆ. ಕೆಬಿಎಲ್ ಸುರಕ್ಷಾ ಜೀವ ವಿಮೆಗೆ ವಾರ್ಷಿಕ 300 ರೂ. ಪಾವತಿಸಿ 18 ರಿಂದ 80 ವರ್ಷದೊಳಗಿನವರು ಸೌಲಭ್ಯ ಪಡೆದುಕೊಳ್ಳಬಹುದು ಎಂದರು.


ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆಯಡಿ ದೇಶದ ಯಾವುದೇ ಬ್ಯಾಂಕ್‌ನಲ್ಲಿ 18 ರಿಂದ 50 ವರ್ಷದೊಳಗಿನವರು ವಾರ್ಷಿಕ 436 ರೂ. ಪಾವತಿಸಿ ವಿಮೆ ಮಾಡಿಸಬಹುದು. ಗ್ರಾಹಕ ಯಾವುದೇ ಕಾರಣದಿಂದ ಮೃತಪಟ್ಟರೂ 2 ಲಕ್ಷ ರೂ.ವಿಮೆ ನಾಮಿನಿಗೆ ದೊರೆಯುತ್ತದೆ. ಪಿಎಂಎಸ್‌ಬಿವೈ ಯೋಜನೆಯಡಿ 18 ರಿಂದ 70 ವರ್ಷದೊಳಗಿನವರು ವಾರ್ಷಿಕ 20 ರೂ. ನೀಡಿ ವಿಮೆ ಮಾಡಿಸಬಹುದು. ಇದು ಅಪಘಾತದಿಂದ ಮರಣ ಹೊಂದಿದ್ದಲ್ಲಿ 2 ಲಕ್ಷ ರೂ. ಪರಿಹಾರ ಹಣ ಸಿಗಲಿದೆ ಎಂದರು.
ಅಕ್ಷತ್, ದಿವ್ಯಾ, ಬಿಂದು, ಚಂದ್ರಶೇಖರ ಉಪಸ್ಥಿತರಿದ್ದರು.