ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯ ರನ್ನು ಪರಿಚಯಿಸಿಕೊಂಡು ಪ್ರೀತಿಸುವುದಾಗಿ ನಂಬಿಸಿ, ಅವರಿಂದಲೇ ಖಾಸಗಿ ದೃಶ್ಯ ತರಿಸಿಕೊಂಡು ಬ್ಲಾ್ಯಕ್ವೆುೕಲ್ ಮಾಡುವ ಪ್ರಕರಣಗಳು ದಿನೇದಿನೆ ಹೆಚ್ಚುತ್ತಿವೆ.
ಈ ವಿಚಾರವಾಗಿ ‘ಪರಿಹಾರ್’ ಕೇಂದ್ರದಲ್ಲಿ ಕಳೆದ ಏಪ್ರಿಲ್ನಲ್ಲಿ 418 ಪ್ರಕರಣಗಳು ದಾಖಲಾಗಿದ್ದವು. ಮೇನಲ್ಲಿ ಈ ಸಂಖ್ಯೆ 803ಕ್ಕೆ ಏರಿಕೆಯಾಗಿತ್ತು. ಆದರೆ, ಜೂನ್ನಲ್ಲಿ 1,014 ಮಹಿಳಾ ದೌರ್ಜನ್ಯ ಪ್ರಕರಣ ದಾಖಲಾಗಿದ್ದು, ಇದರಲ್ಲಿ 80ಕ್ಕೂ ಅಧಿಕ ಕೇಸ್ಗಳು ಸೈಬರ್ ಅಪರಾಧಗಳಿಗೆ ಸಂಬಂಧಿಸಿವೆ. ಆರೋಪಿಗಳ ಬಲೆಗೆ ಬಿದ್ದ ಮಹಿಳೆಯರು ಮಾನಕ್ಕೆ ಅಂಜಿ ಪೇಚಿಗೆ ಸಿಲುಕುತ್ತಿದ್ದಾರೆ. ಅಂಥ ಕೆಲವು ಕೇಸ್ಗಳ ವಿವರ ಇಲ್ಲಿದೆ.
ಅಪ್ಲೋಡ್ ಮಾಡುವ ಬೆದರಿಕೆ: ನಗರದ ಕಾಲೇಜೊಂದರಲ್ಲಿ ದ್ವಿತೀಯ ಪಿಯು ವ್ಯಾಸಂಗ ಮಾಡುತ್ತಿದ್ದ 19 ವರ್ಷದ ಯುವತಿಗೆ ಬೆಂಗಳೂರಿನಲ್ಲಿ ಚಾರ್ಟೆರ್ಡ್ ಅಕೌಂಟೆಂಟ್ ವ್ಯಾಸಂಗ ಮಾಡುತ್ತಿರುವ 23 ವರ್ಷದ ಯುವಕ 3 ತಿಂಗಳ ಹಿಂದೆ ಇನ್ಸ್ಟಾಗ್ರಾಂನಲ್ಲಿ ಪರಿಚಯವಾಗಿದ್ದ. ಇಬ್ಬರ ನಡುವೆ ಸಲುಗೆ ಬೆಳೆದು ಮೊಬೈಲ್ ನಂಬರ್ ವಿನಿಮಯ ಮಾಡಿಕೊಂಡಿದ್ದರು. ವಿಡಿಯೋ ಕರೆ ಮಾಡುತ್ತಿದ್ದ ಯುವಕ ಖಾಸಗಿ ದೃಶ್ಯ ಕಳುಹಿಸುವಂತೆ ಪೀಡಿಸುತ್ತಿದ್ದುದರಿಂದ ಯುವತಿ ಕಳುಹಿಸಿದ್ದಳು. ಯುವಕ ಇತ್ತೀಚೆಗೆ ಆಕೆಯನ್ನು ನಿರ್ಲಕ್ಷಿಸಿದ್ದ. ಈ ಬಗ್ಗೆ ಪ್ರಶ್ನಿಸಿದಾಗ, ‘ನೀನು ಕಳುಹಿಸಿದ ಖಾಸಗಿ ವಿಡಿಯೋ ಗಳನ್ನು ಅಪ್ಲೋಡ್ ಮಾಡುತ್ತೇನೆ’ ಎಂದು ಬೆದರಿಸಿದ್ದ. ಯುವತಿ ಪರಿಹಾರ ಕೇಂದ್ರದ ಮೊರೆ ಹೋಗಿದ್ದು, ಸಿಬ್ಬಂದಿ ಯುವಕನನ್ನು ಕರೆಸಿ ಎಚ್ಚರಿಕೆ ಕೊಟ್ಟು ಕಳುಹಿಸಿದ್ದಾರೆ.
ವಿಡಿಯೋ ಕಳಿಸಿ ಪೇಚಿಗೆ ಸಿಕ್ಕ ಲೇಡಿ: ರಾಜಸ್ಥಾನ ಮೂಲದ 36 ವರ್ಷದ ವಿವಾಹಿತೆಗೆ ಬೆಂಗಳೂರಿನ 23 ವರ್ಷದ ಮೆಕಾನಿಕ್ 6 ತಿಂಗಳ ಹಿಂದೆ ಫೇಸ್ಬುಕ್ ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದ. ಆತ ಕಳುಹಿಸುತ್ತಿದ್ದ ಸಂದೇಶಗಳಿಗೆ ಮಹಿಳೆ ಪ್ರತಿಕ್ರಿಯಿಸುತ್ತಿದ್ದಳು. ಕ್ರಮೇಣ ಇಬ್ಬರೂ ಅಶ್ಲೀಲ ಚಾಟ್ ಆರಂಭಿಸಿದ್ದರು. ಅಲ್ಲದೆ ಯುವಕನ ಒತ್ತಾಯದ ಮೇರೆಗೆ ಮಹಿಳೆ ಹಲವು ಬಾರಿ ತನ್ನ ಖಾಸಗಿ ದೃಶ್ಯವನ್ನು ಫೇಸ್ಬುಕ್ನಲ್ಲಿ ಕಳುಹಿಸಿದ್ದಳು. ಮಹಿಳೆಯ ಪತಿ ರಾಜಸ್ಥಾನದಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿದ್ದು, ಲಾಕ್ಡೌನ್ ಹಿನ್ನೆಲೆಯಲ್ಲಿ ಮನೆಯಲ್ಲೇ ಇರುತ್ತಿದ್ದರು. ಆಗ ಚಾಟ್ ಮಾಡಲು ಆಗಿರಲಿಲ್ಲ. ಈ ಬಗ್ಗೆ ಪ್ರಶ್ನಿಸಿದ ಯುವಕ, ‘ನನ್ನೊಂದಿಗೆ ಮಾತನಾಡದಿದ್ದರೆ ಖಾಸಗಿ ವಿಡಿಯೋ ಅಪ್ಲೋಡ್ ಮಾಡುತ್ತೇನೆ’ ಎಂದಿದ್ದ. ಆಗ ಮಹಿಳೆ ರಾಜಸ್ಥಾನದಿಂದಲೇ ಪರಿಹಾರ ಕೇಂದ್ರದ ಆಪ್ತ ಸಮಾಲೋಚಕರಿಗೆ ಕರೆ ಮಾಡಿ ದೂರಿದ್ದಾಳೆ. ಪರಿಹಾರ ಕೇಂದ್ರ ಸಿಬ್ಬಂದಿ ಯುವಕನಿಗೆ ಬುದ್ಧಿ ಹೇಳಿ, ಜೈಲಿಗೆ ಕಳುಹಿಸುವುದಾಗಿ ಎಚ್ಚರಿಕೆ ನೀಡಿ ಪ್ರಕರಣ ಇತ್ಯರ್ಥ ಪಡಿಸಿದ್ದಾರೆ.
24 ಗಂಟೆ ಸೇವೆ: ಕರೊನಾ ಭೀತಿಯಿಂದ ಮನೆಯಲ್ಲೇ ಇರುವವರ ಸಂಖ್ಯೆ ಹೆಚ್ಚಾಗಿದೆ. ಇದರಿಂದ ದಿನೇದಿನೆ ಮಹಿಳಾ ದೌರ್ಜನ್ಯಗಳ ಪ್ರಕರಣಗಳೂ ಏರಿಕೆಯಾಗುತ್ತಿವೆ. ಹೀಗಾಗಿ ‘ಪರಿಹಾರ್’ ಇದೀಗ ದಿನದ 24 ಗಂಟೆಯೂ ದೂರವಾಣಿ ಸಂಪರ್ಕದ ಮೂಲಕ ಆಪ್ತಸಮಾಲೋಚಕರನ್ನು ಸಂರ್ಪಸಲು ಅವಕಾಶ ಕಲ್ಪಿಸಿದೆ.
ಜಾಲತಾಣಗಳಲ್ಲಿ ಪರಿಚಯ ವಾಗುವ ಅಪರಿಚಿತರ ಜತೆ ಮಾತನಾಡುವಾಗ ಮಹಿಳೆಯರು ಎಚ್ಚರಿಕೆ ವಹಿಸಬೇಕು. ದೌರ್ಜನ್ಯಕ್ಕೆ ಒಳಗಾಗುತ್ತಿರುವ ಮಹಿಳೆಯರು ‘ಪರಿಹಾರ್’ ಕೇಂದ್ರದ ಮೂಲಕ ಸಮಸ್ಯೆ ಪರಿಹರಿಸಿಕೊಳ್ಳಬಹುದು. | ರಾಣಿ ಶೆಟ್ಟಿ ಉಸ್ತುವಾರಿ, ಪರಿಹಾರ ಕೌಟುಂಬಿಕ ಸಲಹಾ ಕೇಂದ್ರ
| ಅವಿನಾಶ ಮೂಡಂಬಿಕಾನ