ಜಿಲ್ಲೆ

ಮಠಮಂದಿರಗಳಿಂದ ಧರ್ಮ, ಸತ್ಯ, ಶಾಂತಿ ಉಳಿವು

Davangere - Desk - Ganesh M K

ಚನ್ನಗಿರಿ: ಸಮಾಜದಲ್ಲಿ ಸತ್ಯ, ಧರ್ಮ, ಶಾಂತಿ ಉಳಿಯಬೇಕಾದರೆ ದೇವಸ್ಥಾನ, ಮಠಗಳ ಅವಶ್ಯಕತೆ ಇದೆ. ಭಕ್ತರು ಗುರುಗಳ ಆಶ್ರಯದಲ್ಲಿದ್ದಾಗ ಸರಿದಾರಿಯಲ್ಲಿ ನಡೆಯಲು ಸಾಧ್ಯ ಎಂದು ಚನ್ನಗಿರಿ ಹಿರೇಮಠದ ಶ್ರೀ ಕೇದಾರಲಿಂಗ ಶಿವಶಾಂತವೀರ ಶ್ರೀಗಳು ತಿಳಿಸಿದರು.

ತಾಲೂಕಿನ ಬೆಳ್ಳಿಗನೂಡು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಚೌಡೇಶ್ವರಿ ದೇವಾಲಯ ಪ್ರವೇಶ ಹಾಗೂ ಶಿಲಾಮೂರ್ತಿ ಪ್ರತಿಷ್ಠಾಪನೆ ನೆರವೇರಿಸಿ ಮಂಗಳವಾರ ಮಾತನಾಡಿದರು.

ಬೆಳಗ್ಗೆ ಎದ್ದು ಸಂಧ್ಯಾವಂದನೆ ಮುಗಿಸಿ ನಿಮ್ಮ ಕೆಲಸಗಳಿಗೆ ಹೋದಾಗ ನೀವು ಮಾಡುವಂತ ಕೆಲಸಗಳಲ್ಲಿ ಯಶಸ್ಸು ಕಾಣಲು ಸಾಧ್ಯ. ಇತ್ತೀಚಿನ ದಿನದಲ್ಲಿ ಯುವಜನತೆ ದೇವಾಲಯ, ಮಠ ಮಾನ್ಯಗಳಿಗೆ ಹೋದರೆ ಸಮಯ ನಷ್ಟ ಹಾಗೂ ಹೋಗದಿರುವುದು ಹೊಸ ಪ್ಯಾಷನ್ ಎಂದುಕೊಂಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಹಿಂದಿನ ಕಾಲದಲ್ಲಿ ದೇವರನ್ನು ಕಾಣಲು ಭಕ್ತರು ಯಾತ್ರೆಗಳಿಗೆ ಹೋಗುತ್ತಿದ್ದರು. ಗುರುಗಳು ಇರುವಂತ ಜಾಗ ಹುಡುಕಿಕೊಂಡು ಬರುತ್ತಿದ್ದರು. ಅವರಲ್ಲಿ ಭಕ್ತಿ, ಸಂಸ್ಕಾರ ಕಾಣುತ್ತಿತ್ತು. ಇಂದಿನ ದಿನಮಾನಗಳಲ್ಲಿ ಅಂತಹ ಸನ್ನಿವೇಶಗಳು ಕಡಿಮೆಯಾಗಿದೆ ಎಂದರು.

ದೇವಸ್ಥಾನದ ಉದ್ಘಾಟನೆ ಅಂಗವಾಗಿ ಗಂಗಾಪೂಜೆ, ಸಂಕಲ್ಪ ಪೂಜೆ, ಮಹಾಗಣಪತಿ ಪೂಜೆ, ವಾಸ್ತು ಕಲಶ ಪೂಜೆ, ದ್ವಾರಪಾಲಕ ಪೂಜೆ, ಗೋಮಾತಾ ಪೂಜೆ ನಡೆಸಲಾಯಿತು. ಗ್ರಾಮದಲ್ಲಿ ಬಾಳೆಕಂದು, ಮಾವಿನಸೊಪ್ಪು, ಹೂ ಹಾಗೂ ದೀಪಾಲಂಕಾರ ಮಾಡಲಾಗಿತ್ತು.

ಸಮಾರಂಭದಲ್ಲಿ ಗ್ರಾಮದ ಮುಖಂಡರಾದ ದೇವರಾಜ್, ತಿಪ್ಪಣ್ಣ, ವೀರಭದ್ರಸ್ವಾಮಿ, ನಾಗರಾಜಪ್ಪ, ನಿರಂಜನ ಮೂರ್ತಿ ಇದ್ದರು.