ಶೃಂಗೇರಿ: ಶೃಂಗೇರಿ ಶ್ರೀ ಶಾರದಾಪೀಠದ ಜಗದ್ಗುರು ಶ್ರೀ ಭಾರತೀತೀರ್ಥ ಸ್ವಾಮೀಜಿ ಹಾಗೂ ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ಕೈಗೊಂಡ ಚಾತುರ್ಮಾಸ್ಯ ಶುಕ್ರವಾರ ಸಮಾಪನಗೊಳಿಸಿ ಸೀಮೋಲ್ಲಂಘನ ಮಾಡಿದರು. ಮಠಕ್ಕೆ ಆಗಮಿಸಿ ಶ್ರೀ ಶಾರದಾಂಬೆ, ಶ್ರೀ ಶಕ್ತಿಗಣಪತಿ ಹಾಗೂ ಹೊರಪ್ರಾಂಗಣದ ಶ್ರೀ ವಿದ್ಯಾಶಂಕರ, ಶ್ರೀ ಜನಾರ್ದನಸ್ವಾಮಿ, ಶ್ರೀ ಆಂಜನೇಯ, ಶ್ರೀ ಶಂಕರಾಚಾರ್ಯ, ಶ್ರೀ ವಿದ್ಯಾಶಂಕರ ಹಾಗೂ ತೋರಣಗಣಪತಿ ದೇವಾಲಯಗಳಿಗೆ ಭೇಟಿ ನೀಡಿ ವಿಶೇಷ ಪೂಜೆಯಲ್ಲಿ ಭಾಗಿಯಾದರು.
ಪಟ್ಟಣದ ಮಧ್ಯದಲ್ಲಿರುವ ಶ್ರೀ ಮಲಹಾನಿಕರೇಶ್ವರಸ್ವಾಮಿ ಸನ್ನಿಧಿಗೆ ಆಗಮಿಸಿ ಶ್ರೀ ಸ್ತಂಭಗಣಪತಿ, ಶ್ರೀ ಭವಾನಿ ಹಾಗೂ ಶ್ರೀ ಮಲಹಾನಿಕರೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು.
ಸೆ.18ರಂದು ಪ್ರಾರಂಭಗೊಂಡ ವಾಕ್ಯಾರ್ಥ ಸಭೆ ಶನಿವಾರ ಮುಕ್ತಾಯಗೊಂಡಿತು. ವಾಕ್ಯಾರ್ಥ ಸಭೆ ಜಗದ್ಗುರು ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ಅಧ್ಯಕ್ಷತೆಯಲ್ಲಿ ನಡೆಯಿತು. ಪ್ರತಿ ದಿನ ವೇದಾಂತ, ಮೀಮಾಂಸಾ, ನ್ಯಾಯ ಮತ್ತು ವ್ಯಾಕರಣ ಶಾಸಗಳಲ್ಲಿ ಶಾಸಾರ್ಥ ಚರ್ಚೆ ನಡೆಸಿದ ಬಳಿಕ ಶ್ರೀ ಸಭಾಗಣಪತಿಗೆ ಮಹಾಮಂಗಳಾರತಿ, ಅಷ್ಟಾವಧಾನ ಸೇವೆ ಜರುಗಿತು. ಶನಿವಾರ ನಡೆದ ಸಭೆಯಲ್ಲಿ ಶಾಸ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡ ವಿದ್ಯಾರ್ಥಿಗಳಿಗೆ ಪ್ರಶಸ್ತಿಪತ್ರ ವಿತರಣೆ, ಹಿರಿಯ ನಾಲ್ಕು ವಿದ್ವಾಂಸರಿಗೆ ಸ್ವರ್ಣಾಂಗುಲೀಯಕ ಪ್ರದಾನ, ವಾಕ್ಯಾರ್ಥ ನಡೆಸಿದ ವಿದ್ವಾಂಸರಿಗೆ ಸನ್ಮಾನ ಮಾಡಲಾಯಿತು.