ಜಿಲ್ಲೆ

ಗೋಕರ್ಣದ ವಿಷ್ಣುಗುಪ್ತ ವಿವಿ ಪರಿಸರದಲ್ಲಿ ರಾಘವೇಶ್ವರ ಶ್ರೀಗಳ ಚಾತುರ್ಮಾಸ್ಯ ಜು. 3ರಿಂದ

ಗೋಕರ್ಣ: ಹಿಂದು ಸಮಾಜವನ್ನು ಒಗ್ಗೂಡಿಸುವ ಉದ್ದೇಶದಿಂದ ಈ ವರ್ಷ ಶ್ರೀರಾಮಚಂದ್ರಾಪುರ ಮಠದ ಪೀಠಾಧೀಶ್ವರ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಅವರ ಚಾತುರ್ಮಾಸ್ಯ ಮಹಾಪರ್ವಕ್ಕೆ ‘ಸಂಘಟನಾ ಚಾತುರ್ಮಾಸ್ಯ’ ಎಂಬ ಅಭಿನಾಮದೊಂದಿಗೆ ಜು. 3ರಿಂದ ಸೆ. 29ರವರೆಗೆ ಆಚರಿಸಲಾಗುತ್ತಿದೆ ಎಂದು ಶ್ರೀಮಠದ ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಯು.ಎಸ್. ಗಣೇಶ ಭಟ್ಟ ತಿಳಿಸಿದರು.


ಅಶೋಕೆಯ ವಿಷ್ಣುಗುಪ್ತ ವಿಶ್ವದ್ಯಾಪೀಠದ ವಿದ್ಯಾಭವನದಲ್ಲಿ ಗುರುವಾರ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.


ಈ ವರ್ಷ ಮೂರು ಮಾಸ ಪರ್ಯಂತ ಸಂಘಟನೆ, ಸಮರ್ಪಣೆ ಮತ್ತು ಸಮಾಧಾನ ಎಂಬ ಪ್ರಧಾನ ಅಂಶಗಳಿಂದ ಕೇಂದ್ರಿತವಾದ ಶ್ರೀಗಳ ಚಾತುರ್ಮಾಸ್ಯದ ಪೂರ್ಣ ಮಾಹಿತಿ ನೀಡಿದರು.
ಚಾತುರ್ಮಾಸ್ಯ ನಿಮಿತ್ತ ಜು. 1ರಂದು ಪೂರ್ವಭಾವಿಯಾಗಿ ರಾಜ್ಯದ ಮೂಲೆ ಮೂಲೆಗಳಿಂದ ಶಿಷ್ಯ ಭಕ್ತರು ಸಮರ್ಪಿಸಿದ ಸುವಸ್ತುಗಳ ಧಾನ್ಯಲಕ್ಷ್ಮೀ ಪೂಜೆಯನ್ನು ಶ್ರೀಗಳು ನೆರವೇರಿಸುವರು.

ಜು. 2ರಂದು ಮಧ್ಯಾಹ್ನ 12ಗಂಟೆಗೆ ಆಯೋಜಿಸಲಾದ ಅನ್ನಪೂರ್ಣೇಶ್ವರಿ ಪೂಜೆಯೊಂದಿಗೆ ಚಾತುರ್ಮಾಸ್ಯಕ್ಕೆ ಆಗಮಿಸಲಿರುವ ಲಕ್ಷಾಂತರ ಭಕ್ತರಿಗೆ ಅನ್ನದಾನ ಮಹಾಸಮಾರಂಭ ಪ್ರಾರಂಭವಾಗುವುದು.

ಜು. 3ರಂದು ಚಾತುರ್ಮಾಸ್ಯ ವ್ರತಾರಂಭ ನಿಮಿತ್ತ ಬೆಳಗ್ಗೆ ಶ್ರೀಗಳಿಂದ ಶ್ರೀವ್ಯಾಸಮಹರ್ಷಿಗಳ ಪೂಜೆ ನಂತರ ಆಯೋಜಿಸಲಾದ ಧರ್ಮಸಭೆಯಲ್ಲಿ ಶ್ರೀಗಳು ಚಾತುರ್ಮಾಸ್ಯ ದಿವ್ಯ ಸಂದೇಶ ದಯಪಾಲಿಸುವರು. . ಇದೇ ಸಭೆಯಲ್ಲಿ ಬಿ.ಎಲ್. ನಾಗರಾಜ ರಚಿಸಿರುವ ಶ್ರೀಮದಾತ್ಮಲಿಂಗ ವೈಭವಮ್ ಕೃತಿ ಲೋಕಾರ್ಪಣೆ ಮಾಡಲಾಗುವುದು ಎಂದರು.


ಚಾತುರ್ಮಾಸ್ಯದಲ್ಲಿ ಜು. 6ರಂದು ಶ್ರೀ ವರ್ಧಂತಿ, ಸೆ. 9ರಂದು ಶ್ರೀಕೃಷ್ಣ ಜನ್ಮಾಷ್ಟಮಿ, ಸೆ. 18ರಂದು ಶ್ರೀ ಗಣೇಶ ಚತುರ್ಥಿ ಮತ್ತು ಚಾತುರ್ಮಾಸ್ಯದ ಕೊನೆಯ ದಿನ ಸೆ. 29ರಂದು ಸೀಮೋಲ್ಲಂಘನ ಮತ್ತು ಚಾತುರ್ಮಾಸ್ಯ ಪ್ರಶಸ್ತಿ ಪ್ರದಾನ ಜರುಗಲಿದೆ.

ಏಕಾದಶಿ ಹೊರತುಪಡಿಸಿ ಜು. 3ರಿಂದ ಆ.19ರವರೆಗೆ ಪ್ರತಿ ಶನಿವಾರ ಮತ್ತು ಭಾನುವಾರ ಶ್ರೀಗಳು ಮಂತ್ರಾಕ್ಷತೆಯಿತ್ತು ಆಶೀರ್ವದಿಸಲಿದ್ದಾರೆ ಎಂದರು.

ಚಾತುರ್ಮಾಸ್ಯ ನಿಮಿತ್ತ ಗುರಿಕ್ಕಾರರ, ವೈದಿಕರ, ಮಾತೃಗಳ, ಯುವ ಸಮುದಾಯದ ಮತ್ತು ಕಾರ್ಯಕರ್ತರ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಚಾತುರ್ಮಾಸ್ಯದಲ್ಲಿ ಶ್ರೀಕರಾರ್ಚಿತ ದೇವರಿಗೆ ಸರ್ವಸೇವೆ ಸೇರಿ ಪಾದುಕಾ, ಸ್ವರ್ಣಪಾದುಕಾ, ಅನ್ನದಾನ , ಸುವಸ್ತು ಸಮರ್ಪಣೆ ಮುಂತಾದ ವಿವಿಧ ಸೇವೆಗಳನ್ನು ಭಕ್ತರು ಆಯೋಜಿಸಲು ಅವಕಾಶವಿದೆ. ಇದರ ಸಂಗಡ ವಿವಿಧ ಯಾಗಮಾಲಿಕೆ ಹಾಗೂ ಅಭೀಷ್ಟ ಹವನಗಳನ್ನು ಕೂಡ ಚಾತುರ್ಮಾಸ್ಯದಲ್ಲಿ ಸಲ್ಲಿಸಬಹುದಾಗಿದೆ ಎಂದರು.


ಆಸಕ್ತ ಕಲಾವಿದರಿಂದ ವಿವಿಧ ಕಲಾಪ್ರದರ್ಶನಗಳ ಸಮರ್ಪಣೆ ನಡೆಯಲಿದೆ. ಇವುಗಳ ಜತೆಗೆ ಪ್ರತಿ ದಿನ ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸಿದವರಿಗೆ, ಶ್ರೇಷ್ಠ ಸಾಧಕರಿಗೆ ಮತ್ತು ಗಣ್ಯರನ್ನು ಗೌರವಿಸಲಾಗುವುದು. ಸಂದರ್ಭದಲ್ಲಿ ಶ್ರೀಗಳ ಮಹತ್ಸಂಕಲ್ಪವಾದ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕೆ ಶಿಷ್ಯಭಕ್ತರಿಂದ ನಿಧಿ ಸಮರ್ಪಣೆ ಮತ್ತು ವಿಶೇಷವಾಗಿ ನಿರ್ಮಾಣಗೊಳ್ಳುತ್ತಿರುವ ಶ್ರೀ ಗುರುದೃಷ್ಟಿ ಸಭಾಭವನ ಲೋಕಾರ್ಪಣೆ ನೆರವೇರಲಿದೆ ಎಂದು ತಿಳಿಸಿದರು.


ಚಾತುರ್ಮಾಸ್ಯ ಸಮಿತಿಯ ಗೌರವಾಧ್ಯಕ್ಷ ಡಿ.ಡಿ. ಶರ್ಮಾ ಮಾತನಾಡಿ, ಅಶೋಕೆಯ ಪಾವನ ಪರಿಸರದಲ್ಲಿ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಅವರು ಕೈಗೊಳ್ಳುತ್ತಿರುವ ಐದನೇ ವ್ರತದೀಕ್ಷೆ ಇದಾಗಿದೆ. ಸಂಘಟನೆಯ ಮಹದುದ್ದೇಶದಿಂದ ಆಯೋಜಿತವಾಗಿರುವ ಈ ಚಾತುರ್ಮಾಸ್ಯ ಮಹಾಪರ್ವಕ್ಕೆ ವಿಶೇಷ ಮಹತ್ವವಿದ್ದು, ಸರ್ವ ಶಿಷ್ಯಭಕ್ತರು ಇದರ ಸದುಪಯೋಗ ಪಡೆದು ಶ್ರೀಗಳ ಕೃಪಾಶೀರ್ವಾದಕ್ಕೆ ಪಾತ್ರರಾಗಬೇಕು ಎಂದರು.


ಕಾರ್ಯದರ್ಶಿ ಶ್ರೀಕಾಂತ ಪಂಡಿತ, ವಿಶ್ವ ವಿದ್ಯಾಪೀಠದ ಆಡಳಿತಾಧಿಕಾರಿ ಪ್ರಸನ್ನಕುಮಾರ ಟಿ.ಜಿ., ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ. ಹೆಗಡೆ ಗೋಳಗೋಡ, ಕಾರ್ಯಾಲಯ ಕಾರ್ಯದರ್ಶಿ ಜಿ.ವಿ. ಹೆಗಡೆ ಮಾಳ್ಕೋಡ ಇದ್ದರು. ಮಾಧ್ಯಮ ವಿಭಾಗ ಸಂಯೋಜಕ ಉದಯಶಂಕರ ಭಟ್ಟ ಮಿತ್ತೂರು ನಿರ್ವಹಿಸಿದರು.