ಜಿಲ್ಲೆ

ಜಾತ್ಯಾತೀತ ಸಾಮ್ರಾಜ್ಯ ನಿರ್ಮಿಸಿದ್ದ ಶಿವಾಜಿ: ವಿವೇಕ ವಿದ್ಯಾವಾಹಿನಿ ಟ್ರಸ್ಟ್ ಅಧ್ಯಕ್ಷ ಪ್ರಭಾಂಜನ್ ಬಣ್ಣನೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಛತ್ರಪತಿ ಶಿವಾಜಿ ಮಹಾರಾಜರು ತನ್ನ ಆಡಳಿತದಲ್ಲಿ ಯುರೋಪಿಯನ್ನರು ಸೇರಿದಂತೆ ಎಲ್ಲ ಜಾತಿ ಮತ್ತು ಧರ್ಮಗಳ ಜನರನ್ನು ನೇಮಿಸಿಕೊಂಡು ಜಾತ್ಯಾತೀತ ಸಾಮ್ರಾಜ್ಯ ನಿರ್ಮಾಣ ಮಾಡಿದ್ದರು. ಮಾತ್ರವಲ್ಲದೆ ಸಮರ್ಥ ರಾಜನಾಗಿ ಇಡೀ ಹಿಂದು ಸಮಾಜವನ್ನು ಒಗ್ಗೂಡಿಸಿದ್ದರು ಎಂದು ವಿವೇಕ ವಿದ್ಯಾವಾಹಿನಿ ಟ್ರಸ್ಟ್ ಅಧ್ಯಕ್ಷ ಪ್ರಭಾಂಜನ್ ಹೇಳಿದರು.

ನಗರದ ಕರ್ನಾಟಕ ಸಂಘದ ಕೆ.ವಿ.ಶತಮಾನೋತ್ಸವ ಭವನದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಛತ್ರಪತಿ ಶಿವಾಜಿ ಜಯಂತ್ಯುತ್ಸವದಲ್ಲಿ ಪ್ರಧಾನ ಭಾಷಣ ಮಾಡಿದ ಅವರು, ನಮ್ಮ ಭಾರತದಲ್ಲಿ ಸತ್ಯ ಹಾಗೂ ಧರ್ಮಕ್ಕೆ ಕುತ್ತು ಉಂಟಾಗುವ ಸಂದರ್ಭದಲ್ಲಿ ಮಹಾಪುರುಷರು ಜನಿಸಿದ್ದಾರೆ. ಅವರಲ್ಲಿ ಶಿವಾಜಿ ಮಹಾರಾಜರು ಕೂಡ ಒಬ್ಬರು. ಅನೇಕ ವರ್ಷಗಳ ಹಿಂದೆ ಮೊಘಲರು, ಗ್ರೀಕರು, ಡಚ್ಚರು, ಪೋರ್ಚುಗೀಸರು, ಬ್ರಿಟಿಷರ ಆಕ್ರಮಣದಿಂದ ನಮ್ಮ ದೇಶ ತತ್ತರಿಸಿ ಅವನತಿಯ ಅಂಚಿನಲ್ಲಿತ್ತು. ಅಂತಹ ಸಂದರ್ಭದಲ್ಲಿಯೇ ಶಕ್ತಿಗಿಂತ ಯುಕ್ತಿಯನ್ನು ಬಳಸಿಕೊಂಡು ಶಿವಾಜಿಯು ತನ್ನದೇ ಆದ ಸ್ವತಂತ್ರೃ ಸಾಮ್ರಾಜ್ಯವನ್ನು ಕಟ್ಟಿದನು ಎಂದು ವಿವರಿಸಿದರು.

ಶಿವಾಜಿಯ ತಾಯಿ ಜೀಜಾಬಾಯಿ ತನ್ನ ಮಗನನ್ನು ಬೆಳೆಸಿದ ರೀತಿ ಅದ್ಭುತ. ಬಾಲ್ಯದಿಂದಲೇ ಶಿವಾಜಿಗೆ ಧರ್ಮ, ಸತ್ಯ ಹಾಗೂ ನಿಷ್ಠೆಯಂತಹ ಮೌಲ್ಯಗಳನ್ನು ತಿಳಿಸಿ ಆತನನ್ನು ಮಹಾನ್ ವೀರನನ್ನಾಗಿ ರೂಪಿಸಿದರು. ಶಿವಾಜಿಯ ಬಾಲ್ಯ ಜೀವನದಲ್ಲಿಯೇ ತಪ್ಪು ಮಾಡಿದವರಿಗೆ ಶಿಕ್ಷೆ ನೀಡುವುದರ ಮೂಲಕ ನ್ಯಾಯವನ್ನು ದೊರಕಿಸಿಕೊಡುತ್ತಿದ್ದರು. ಮಾನವೀಯತೆಯ ಗುಣ ಚಿಕ್ಕಂದಿನಲ್ಲಿಯೇ ಎದ್ದು ಕಾಣುತ್ತಿತ್ತು. ಪ್ರಸ್ತುತ ದಿನಗಳಲ್ಲಿ ಮಕ್ಕಳಲ್ಲಿ ಸಂಸ್ಕಾರ ಹಾಗೂ ಮೌಲ್ಯವಿಲ್ಲ. ಆದ್ದರಿಂದ ಶಿವಾಜಿ ಅವರಂತಹ ಮಹಾನ್ ಶ್ರೇಷ್ಠ ಸಾಧಕರನ್ನು ಪರಿಚಯಿಸುವುದರ ಮೂಲಕ ಮಕ್ಕಳಲ್ಲಿ ಸಂಸ್ಕಾರವನ್ನು ಬೆಳೆಸಬೇಕು. ಮೌಲ್ಯಯುತ ಶಿಕ್ಷಣ ಕೊಡಿಸುವುದರ ಜತೆಗೆ ಪ್ರತಿ ತಾಯಿಯು ಜೀಜಾಬಾಯಿ ಅವರಂತೆ ತಮ್ಮ ಮಕ್ಕಳಿಗೆ ಉತ್ತಮ ಮಾರ್ಗದರ್ಶನ ನೀಡಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎನ್.ಉದಯ್‌ಕುಮಾರ್ ಮಾತನಾಡಿ, ಕೊಂಕಣ ಭಾಗದ ಇಡೀ ಪಶ್ಚಿಮಭಾರತವನ್ನು ತಮ್ಮ ಆಳ್ವಿಕೆಗೆ ತಂದಂತಹ ಶಿವಾಜಿಯ ಶೌರ್ಯ, ಸಾಹಸ, ರಾಷ್ಟ್ರಭಕ್ತ ಆಡಳಿತಗಾರರಿಗೆ ಎಂದೆಂದಿಗೂ ಪ್ರೇರಣದಾಯಿ. ಪ್ರತಿ ಮನೆಯಲ್ಲಿಯೂ ಶಿವಾಜಿಯಂತಹ ವೀರರು ಹುಟ್ಟಬೇಕು ಎಂದರು.

ಛತ್ರಪತಿ ಶಿವಾಜಿ ಅವರು ಸ್ವಾಭಿಮಾನಿ ರಾಷ್ಟ್ರ ನಿರ್ಮಾಣಕ್ಕೆ ಹೋರಾಡಿದವರು. ಹಿಂದುಸ್ತಾನವನ್ನು ಒಗ್ಗೂಡಿಸಲು ಬಹಳ ಶ್ರಮಿಸಿದ್ದಾರೆ. ಇಂತಹ ವೀರ ಶಿವಾಜಿಯ ಜಯಂತಿಯನ್ನು ಮಾಡುತ್ತಿರುವುದು ಪುಣ್ಯದ ಕೆಲಸ. ಪ್ರಸ್ತುತ ಜನರು ದೇಶಕ್ಕೆ ಹಾಗೂ ನಾಡಿಗೆ ಕೊಡುಗೆ ನೀಡಿದಂತಹ ಮಹಾನ್ ವ್ಯಕ್ತಿಗಳ ತ್ಯಾಗ, ಬಲಿದಾನ, ಸಾಧನೆ ಹಾಗೂ ಅವರ ಜೀವನ ಚರಿತ್ರೆಯನ್ನು ಮುಂದಿನ ಪೀಳಿಗೆಗೆ ತಿಳಿಸುವಂತಹ ಕೆಲಸವಾಗಬೇಕು ಎಂಬ ಉದ್ದೇಶದಿಂದ ಜಯಂತಿಯನ್ನು ಆಚರಿಸಲಾಗುತ್ತಿದೆ ಎಂದು ಹೇಳಿದರು.

ಸ್ವಾತಂತ್ರ್ಯ ಹೋರಾಟಗಾರ ಶಂಕರ್, ಮರಾಠ ಸಮಾಜದ ಅಧ್ಯಕ್ಷ ಸುರೇಶ್‌ರಾವ್, ಉಪಾಧ್ಯಕ್ಷ ಚಂದ್ರಶೇಖರ್, ಮುಖಂಡರಾದ ನಾಗೇಂದ್ರರಾವ್, ಅಂಬಾಜಿರಾವ್, ನಂದೀಶ್ ಇತರಿದ್ದರು.