ವಿಜಯವಾಣಿ ಸುದ್ದಿಜಾಲ ಉಡುಪಿ
ಪೌರಾಣಿಕವಷ್ಟೇ ಅಲ್ಲದೆ ರಾಜರ ಕಾಲದಲ್ಲೂ ಸಂಗೀತಕ್ಕೆ ಅಪಾರ ಮನ್ನಣೆ ಇತ್ತು. ಮೈಸೂರು ಅರಸರು ಸಂಗೀತದ ಬೆಳವಣಿಗೆಗೆ ಹಾಗೂ ಕಲಾವಿದರಿಗೆ ರಾಜಾಶ್ರಯ ನೀಡಿದ್ದರು. ಸಾಮವೇದಕ್ಕೆ ಸಮನಾದ ಗಾಂಧರ್ವ ವಿದ್ಯೆ ಸಂಗೀತ. ಈ ವಿದ್ಯೆಯು ಶ್ರುತಿ, ಸ್ಮೃತಿ, ಶಾಸ್ತ್ರದೊಡನೆ ಮನೋರಂಜನೆಯನ್ನೂ ನೀಡಿ ಸಮಾಜದ ಸ್ವಾಸ್ಥ್ಯ ವೃದ್ಧಿಸಲಿ ಎಂದು ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಿಸಿದರು.
ಉಡುಪಿಯ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಕಲಾಸ್ಪಂದನ ಕಲಾಶಾಲೆಯ 29ನೇ ವಾರ್ಷಿಕೋತ್ಸವದ ನಿಮಿತ್ತ ಇತ್ತೀಚೆಗೆ ಆಯೋಜಿಸಿದ್ದ ಛಾತ್ರ ವೀಣಾ-ಯಕ್ಷ ವೀಣಾ ಎಂಬ ಶಾಸ್ತ್ರೀಯ ವೀಣಾ ವಾದನದೊಂದಿಗೆ ಜಾನಪದ ಯಕ್ಷಗಾನ ಪ್ರಯೋಗದ ವಿಶಿಷ್ಟ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಂಸ್ಥೆಯ ವಿದ್ಯಾರ್ಥಿಗಳಾದ ಶಶಿಕಲಾ ಭಟ್, ಡಾ.ರಾಮಕೃಷ್ಣನ್ ಎಸ್., ಡಾ. ಅರ್ಜುನ್ ಮುದ್ಲಾಪುರ, ಡಾ.ಕೌಸ್ತುಭಾ ಪಿ. ರಾವ್ ಅವರು ವೀಣಾ ವಾದನ ಕಾರ್ಯಕ್ರಮ ನಡೆಸಿಕೊಟ್ಟರು. ಬಳಿಕ ಯಕ್ಷ ಆರಾಧನಾ ಕಿದಿಯೂರು ಟ್ರಸ್ಟ್ (ರಿ.)ನ ಕೆ.ಜೆ. ಗಣೇಶ್ ಸಾರಥ್ಯದಲ್ಲಿ ಸಾಲ್ವ ಶೃಂಗಾರ ಯಕ್ಷಗಾನ ಪ್ರಸಂಗ ಭಾಗ ಪ್ರದರ್ಶಿಸಲಾಯಿತು.
ದೀಪ್ತ ಆಚಾರ್ಯ ಸಾಲ್ವನಾಗಿ ಮತ್ತು ಅನನ್ಯಾ ಭಟ್ ಅಂಬೆಯಾಗಿ ಉತ್ತಮ ಅಭಿನಯದೊಂದಿಗೆ ಪ್ರಸಂಗ ಪ್ರಸ್ತುತ ಪಡಿಸಿದರು. ಜನಪದ ಪ್ರಾಕಾರ ಯಕ್ಷಗಾನದೊಂದಿಗೆ ಶಾಸ್ತ್ರೀಯ ವೀಣಾ ವಾದನದ ಪ್ರಯೋಗ ವಿಶೇಷತೆಯಾಗಿತ್ತು. ವಿದುಷಿ ಪವನಾ ಬಿ. ಆಚಾರ್ ಮತ್ತು ಡಾ.ಬಾಲಚಂದ್ರ ಆಚಾರ್ ಶಾಸ್ತ್ರೀಯ ವಿಭಾಗದಲ್ಲಿ ಸಹಕರಿಸಿದರು.
ಡಾ.ಪಳ್ಳತ್ತಡ್ಕ ಕೇಶವ ಭಟ್ ಮೆಮೋರಿಯಲ್ ಟ್ರಸ್ಟ್ನ ಅಧ್ಯೆ ದೇವಕಿ ಕೆ. ಭಟ್ ಉಪಸ್ಥಿತರಿದ್ದರು. ಅಮಿತಾಂಜಲಿ ಕಿರಣ್ ಕಾರ್ಯಕ್ರಮ ನಿರ್ವಹಿಸಿದರು.