ಬ್ರಹ್ಮಾವರ/ಉಡುಪಿ: ನೀಲಾವರ ಶಾಖಾ ಮಠದಲ್ಲಿ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಮ್ಮ 33ನೇ ಚಾತುರ್ಮಾಸ್ಯ ವ್ರತವನ್ನು ಬುಧವಾರ ಸಮಾಪ್ತಿಗೊಳಿಸಿದರು.
ಗೋಶಾಲೆಯ ಪುಷ್ಕರಿಣಿಯಲ್ಲಿ ಚಾತುರ್ಮಾಸ್ಯ ಮೃತ್ತಿಕಾ ವಿಸರ್ಜನೆ ಬಳಿಕ ಮಹಿಳಾ ವೃಂದದ ಭಜನೆ, ವಿದ್ಯಾರ್ಥಿಗಳ ಮಂತ್ರಘೋಷಗಳೊಂದಿಗೆ ಶಿಷ್ಯರೊಡಗೂಡಿ ಗೋಶಾಲೆಯಿಂದ ಸೀತಾನದಿ ತೀರಕ್ಕೆ ಆಗಮಿಸಿದರು. ಸಾಲಂಕೃತ ದೋಣಿಯಲ್ಲಿ ಕುಳಿತು ಸಾಂಕೇತಿಕವಾಗಿ ಸೀಮೋಲ್ಲಂಘನ ನಡೆಸಿ ಗೋಶಾಲೆಯ ಅಶ್ವವನ್ನೇರಿ ಗ್ರಾಮದೇವತೆ ಮಹಿಷಮರ್ಧಿನಿ ದರ್ಶನ ಪಡೆದರು.
ಆಡಳಿತ ಮಂಡಳಿ ಮುಖ್ಯಸ್ಥ ರಘುರಾಮ್ ಮಧ್ಯಸ್ಥ, ಪ್ರಧಾನ ಅರ್ಚಕ ಕೃಷ್ಣ ಅಡಿಗರಿದ್ದರು. ಬಳಿಕ ಉಡುಪಿ ಕೃಷ ಮಠಕ್ಕೆ ತೆರಳಿ ಮುಖ್ಯಪ್ರಾಣರ ದರ್ಶನ ಪಡೆಯುವುದರೊಂದಿಗೆ ವ್ರತ ಸಮಾಪ್ತಿಗೊಂಡಿತು.
ವಿಶೇಷ ಚಾತುರ್ಮಾಸ್ಯ: ಶ್ರೀ ವಿಶ್ವೇಶತೀರ್ಥರ ಕಾಲಾನಂತರ ಪೇಜಾವರ ಮಠದ ಉತ್ತರಾಧಿಕಾರಿಯಾಗಿ ವಿಶ್ವಪ್ರಸನ್ನ ತೀರ್ಥರಿಗೆ ಇದು ಮೊದಲ ಚಾತುರ್ಮಾಸ್ಯ. ಉಡುಪಿಯ ಮಠಾಧೀಶರು ಉತ್ತರದ ಬ್ರಹ್ಮಾವರದ ಆಸುಪಾಸಿನ ಈ ಪ್ರದೇಶಗಳಲ್ಲಿ ಚಾತುರ್ಮಾಸ್ಯ ವ್ರತ ನಡೆಸಿರುವುದು ಇದೇ ಮೊದಲು.
ಅಷ್ಟಮಠದ ಇತರ ಯತಿಗಳು: ಮಧ್ವಚಾರ್ಯ ಪ್ರತಿಷ್ಠಾಪಿತ ಅಷ್ಟ ಮಠದ ಕೆಲವು ಯತಿಗಳು ಚಾತುರ್ಮಾಸ್ಯ ವ್ರತವನ್ನು ಬುಧವಾರ ಸಮಾಪ್ತಿಗೊಳಿಸಿದರು. ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಸ್ವಾಮೀಜಿ ಮಧ್ವ ಸರೋವರದಲ್ಲಿ ಮೃತ್ತಿಕೆ ದಂಡವನ್ನು ವಿಸರ್ಜಿಸುವ ಮೂಲಕ ಚಾತುರ್ಮಾಸ್ಯ ವ್ರತವನ್ನು ಕೃಷ್ಣನಿಗೆ ಅರ್ಪಿಸಿದರು. ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ, ಕಿರಿಯ ಯತಿ ವಿದ್ಯಾರಾಜೇಶ್ವರ ತೀರ್ಥ ಸ್ವಾಮೀಜಿ ಪಲಿಮಾರು ಮೂಲಮಠಕ್ಕೆ ಸೀಮೋಲ್ಲಂಘನ ಮಾಡಿದರು. ಕಾಣಿಯೂರು ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಪಾಜಕ ಕ್ಷೇತ್ರಕ್ಕೆ, ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಸುರತ್ಕಲ್ ಹೊಸಬೆಟ್ಟು ರಾಘವೇಂದ್ರ ಮಠಕ್ಕೆ, ಕೃಷ್ಣಾಪುರ ಮಠ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಕೃಷ್ಣಾಪುರ ಮೂಲಮಠಕ್ಕೆ ಸೀಮೋಲ್ಲಂಘನ ಮಾಡುವ ಮೂಲಕ ವ್ರತ ಸಮಾಪ್ತಿಗೊಳಿಸಿದರು.