ಮಂಡ್ಯ: ತಾಲೂಕಿನ ಕಾಗೆ ಮಂಟಿ ಬೋರೆಗುಡ್ಡದ ಚಾರ್ವಾಕ ವೈಚಾರಿಕ ಮಹಾಮನೆಯಲ್ಲಿ ಜು.28ರಂದು ‘ದಮನಿತರ ಬಂಗಾರದ ದಿನ’ ಶೀರ್ಷಿಕೆಯಡಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಅಭಿನಂದನಾ ಸಮಾರಂಭ ಆಯೋಜಿಸಲಾಗಿದೆ ಎಂದು ಚಾರ್ವಾಕ ಸಂಸ್ಥೆ ಅಧ್ಯಕ್ಷ ಗಿರೀಶ್ ಮಾಚಳ್ಳಿ ತಿಳಿಸಿದರು.
ಅಂದು ಬೆಳಗ್ಗೆ 11.30ಕ್ಕೆ ಆಯೋಜಿಸಿರುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಾಮರಾಜನಗರ ಸಂಸದ ಸುನೀಲ್ ಬೋಸ್ ವಹಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ, ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮುಖ್ಯಅತಿಥಿಯಾಗಿ ಭಾಗವಹಿಸಲಿದ್ದು, ಕೊಳ್ಳೇಗಾಲ ಜೇತವನದ ಮನೋರಖ್ಖಿತ ಬಂತೇ ವೈಚಾರಿಕ ಧಮ್ಮ ಭಾಷಣ ಮಾಡಲಿದ್ದಾರೆ. ಅಂತೆಯೇ ಹಲವು ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಅಂತೆಯೇ ಗಿರೀಶ್ ಮಾಚಳ್ಳಿ ರಚಿಸಿ ನಿರ್ದೇಶಿಸಿರುವ ಮನುಸ್ಮತಿ ವರ್ಸಸ್ ಭಾರತ ಸಂವಿಧಾನ ನಾಟಕ ಪ್ರದರ್ಶನವಿರಲಿದೆ. ಇದು ಎರಡು ಗಂಟೆಯ ಪ್ರದರ್ಶನವಾಗಿದೆ. ಮಾತ್ರವಲ್ಲದೆ ತಮಟೆ, ನಗಾರಿ ಮದ್ದಳೆಗಳ ಸಂಭ್ರಮ, ಭಾವಾಭಿನಂದನ ಕಾರ್ಯಕ್ರಮ ಹಾಗೂ ಮಧ್ಯಾಹ್ನ 2.30ಕ್ಕೆ ಅವರೆಕಾಳು ಮುದ್ದೆ ಪಾಯಸದೂಟದ ವ್ಯವಸ್ಥೆ ಮಾಡಲಾಗಿದೆ ಎಂದು ವಿವರಿಸಿದರು.
ಮಾನವ ಬಂಧುತ್ವ ವೇದಿಕೆ ಅಧ್ಯಕ್ಷ ದೇವರಾಜು ಕೊಪ್ಪ, ಶಿವಲಿಂಗಯ್ಯ ಚಿಕ್ಕರಸಿನಕೆರೆ, ಜಯಸುಧಾ ಇದ್ದರು.