ಜಿಲ್ಲೆ

ದತ್ತಿ ಕಾರ್ಯಕ್ರಮ ಮತ್ತು ಶರಣ ದರ್ಶನ ರಸಪ್ರಶ್ನೆ ಹಾಗೂ ಉಪನ್ಯಾಸ ಕಾರ್ಯಕ್ರಮ

ಅವಿನಾಶ್ ಜೈನಹಳ್ಳಿ

ಮೈಸೂರು: ನಗರದ ಬನ್ನೂರು ರಸ್ತೆಯಲ್ಲಿ ಇರುವ ವಿದ್ಯಾವಿಕಾಸ ಬಿ.ಇಡಿ ಕಾಲೇಜಿನಲ್ಲಿ ಶರಣ ಸಾಹಿತ್ಯ ಪರಿಷತ್ತು ಮೈಸೂರು ನಗರ ಘಟಕದ ವತಿಯಿಂದ ಗುರುವಾರ ದತ್ತಿ ಕಾರ್ಯಕ್ರಮ ಮತ್ತು ಶರಣ ದರ್ಶನ ರಸಪ್ರಶ್ನೆ ಹಾಗೂ ಉಪನ್ಯಾಸ ಕಾರ್ಯಕ್ರಮ ನಡೆಯಿತು.

‘ವಚನಕಾರರ ಜ್ಞಾನ ಮತ್ತು ಕ್ರಿಯೆಯ ಪ್ರಸ್ತುತತೆ’ ವಿಷಯ ಕುರಿತು ಉಪನ್ಯಾಸ ನೀಡಿದ ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕಿ ಡಾ.ಎಸ್.ಡಿ ಶಶಿಕಲಾ, ಲೌಕಿಕ ಮತ್ತು ಅಲೌಕಿಕ ಜ್ಞಾನವನ್ನು ಕ್ರಿಯಾ ರೂಪಕ್ಕೆ ತರದೆ ಹೋದರೆ ಜ್ಞಾನ ತನ್ನ ಅರ್ಥವನ್ನು ಕಳೆದುಕೊಳ್ಳುತ್ತದೆ. ಜ್ಞಾನ ಮತ್ತು ಕ್ರಿಯೆ ಒಂದಕ್ಕೊಂದು ಸಮತೂಕವಾಗಿ ನಡೆದಾಗ ಮಾತ್ರ ಸಮಾಜ ನಿರ್ಮಾಣ ಸುಖಕರವಾಗಲು ಸಾಧ್ಯ. ಜ್ಞಾನವಿಲ್ಲದೆ ಕ್ರಿಯೆ ಭ್ರಾಂತಿ, ಕ್ರಿಯೆ ಇಲ್ಲದ ಜ್ಞಾನ ಜಡ ಎಂದರು.

ಜ್ಞಾನವಿಲ್ಲದ ಕ್ರಿಯೆ ನಿಷ್ಪ್ರಯೋಜಕ. ಅಕ್ಷರಸ್ಥರಾದರೆ ಸಾಲದು ಕಾಯಕವೂ ಜೊತೆಯಾಗಿ ಬರಬೇಕು, ಜ್ಞಾನ ಸಂಪಾದನೆಯು ಸದ್ಭಾವನೆಗಾಗಿ ಹೊರತು ಕಿವಿಗೆ ಊದುವುದಕ್ಕಲ್ಲ, ನಡೆ-ನುಡಿ ವ್ಯತ್ಯಾಸವಿರದೆ ಮಾಡುವ ಕೆಲಸದಲ್ಲಿ ಅರಿವಿರಬೇಕು ಎಂದು ಶರಣರ ವಚನಗಳನ್ನು ಉಲ್ಲೇಖ ಮಾಡಿ ತಿಳಿಸಿದರು.

ಇದೇ ಸಂದರ್ಭದಲ್ಲಿ ರಸಪ್ರಶ್ನೆ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಸಾಪ ಅಧ್ಯಕ್ಷ ಮ. ಗು. ಸದಾನಂದಯ್ಯ ವಹಿಸಿದ್ದರು. ದತ್ತಿ ದಾಸೋಹಿ ಡಾ.ಲತಾ ರಾಜಶೇಖರ್, ಶಸಾಪ ಕಾರ್ಯದರ್ಶಿಟಿ.ಎಸ್. ಕುಮಾರಸ್ವಾಮಿ, ಸಂಚಾಲಕ ಡಾ. ಮುದ್ದುಮಲ್ಲೇಶ್, ಬಿ.ಇಡಿ ಕಾಲೇಜಿನ ಪ್ರಾಂಶುಪಾಲ ಡಾ. ರಾಜಗೋಪಾಲ, ಕಾರ್ಯಕ್ರಮದ ಆಯೋಜಕ ಪ್ರಸನ್ನ, ಉಪನ್ಯಾಸಕರಾದ ಜಗದೀಶ್, ಅನಂತರಾಮು, ಶಿವಕುಮಾರ್, ಶಿಲ್ಪ ವಸಂತಕುಮಾರಿ ಹಾಜರಿದ್ದರು.