ಜಿಲ್ಲೆ

ಕಸಾಪ ಸಂವಾದ, ದತ್ತಿ ಉಪನ್ಯಾಸ

ಸೌಮ್ಯ ಆರ್

ಕುಂಬಳೆ: ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕ ಆಶ್ರಯದಲ್ಲಿ ದತ್ತಿ ಉಪನ್ಯಾಸ, ಸಂವಾದ ಕಾರ್ಯಕ್ರಮ ಕೀಕಾನದಲ್ಲಿರುವ ಧ್ವನಿ ಸಾರ್ವಜನಿಕ ಗ್ರಂಥಾಲಯ ಪರಿಸರದಲ್ಲಿ ನಡೆಯಿತು. ನಿವೃತ್ತ ಮುಖ್ಯಶಿಕ್ಷಕ ಸಿ.ಸುಬ್ರಾಯ ಉದ್ಘಾಟಿಸಿದರು. ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕ ಅಧ್ಯಕ್ಷ ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಅಧ್ಯಕ್ಷತೆ ವಹಿಸಿದರು.

ನಿವೃತ್ತ ಜಿಲ್ಲಾ ಶಿಕ್ಷಣ ಉಪನಿರ್ದೇಶಕ ನಂದಿಕೇಶನ್ ಎನ್ ‘ಕನ್ನಡಕ್ಕೆ ಹೊಸದುರ್ಗದ ಕೊಡುಗೆ’ಎನ್ನುವ ವಿಷಯದ ಕುರಿತು ಉಪನ್ಯಾಸ ನೀಡಿ, ಹೊಸದುರ್ಗ ತಾಲೂಕಿನಲ್ಲಿ ಕನ್ನಡ ಮನೆಮಾತಿನವರು ತುಂಬಾ ಸಂಖ್ಯೆಯಲ್ಲಿದ್ದಾರೆ. ಮನೆಮಾತು ಕನ್ನಡವಲ್ಲದ ಕನ್ನಡಿಗರೂ ಸಾಕಷ್ಟಿದ್ದಾರೆ. ಎಲ್ಲ ಕನ್ನಡಿಗರೂ ಒಂದಾಗಿ ಹೊಸದುರ್ಗದಲ್ಲಿ ಕನ್ನಡ ಉಳಿಸಲು ಕೈ ಜೋಡಿಸಬೇಕು ಹೇಳಿದರು.

ಬೇಕಲ ಉಪಜಿಲ್ಲಾ ಶಿಕ್ಷಣಾಧಿಕಾರಿ ಅರವಿಂದ ಕೆ, ಮಂಜೇಶ್ವರ ಉಪಜಿಲ್ಲಾ ಶಿಕ್ಷಣಾಧಿಕಾರಿ ರಾಜಗೋಪಾಲ ಕೆ. ಮುಖ್ಯ ಅತಿಥಿಯಾಗಿದ್ದರು. ನಿವೃತ್ತ ಮುಖ್ಯಶಿಕ್ಷಕಿ ಶಶಿಕಲಾ ಎಂ, ನಿವೃತ್ತ ಪ್ರಾಧ್ಯಾಪಕ ಚಂದ್ರಹಾಸ ಪಿ, ರಾಜೇಶ್ ಕೀಕಾನ ಉಪಸ್ಥಿತರಿದ್ದರು. ಉಪನ್ಯಾಸದ ಬಳಿಕ ಹೊಸದುರ್ಗದ ಕನ್ನಡಿಗರ ಸಮಸ್ಯೆ ಕುರಿತು ಸಂವಾದ ಕಾರ್ಯಕ್ರಮ ನಡೆಯಿತು. ಉಪನ್ಯಾಸಕ ಬಾಲಕೃಷ್ಣ ಕೆ, ದಿವಾಕರ ಕೆ.ಪಿ., ನಾಗರಾಜ ಎಚ್.ಪಿ. ಪಾಲ್ಗೊಂಡರು. ಪ್ರಜ್ಞಾ ಪ್ರಕಾಶ್ ಪ್ರಾರ್ಥನೆ ಹಾಡಿದರು. ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶೆಟ್ಟಿ ಬೇಳ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ ಕಾರ್ಯಕ್ರಮ ನಿರೂಪಿಸಿದರು. ಕಲ್ಲಕಟ್ಟ ಶಾಲಾ ಶಿಕ್ಷಕಿ ನಿರೀಕ್ಷಾ ವಂದಿಸಿದರು.