ಜಿಲ್ಲೆ

ಟಿಡಿಆರ್ ಆರೋಪಪಟ್ಟಿ ಸಲ್ಲಿಕೆ; 28 ಆರೋಪಿಗಳ ವಿರುದ್ಧ 6,500 ಪುಟಗಳ ಚಾರ್ಜ್​ಶೀಟ್

Mandara

ಬೆಂಗಳೂರು: ಅಭಿವೃದ್ದಿ ಹಕ್ಕು ವರ್ಗಾವಣೆ (ಟಿಡಿಆರ್) ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಸರ್ಕಾರಿ ಅಧಿಕಾರಿಗಳೂ ಸೇರಿ 28 ಮಂದಿ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳು ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

ಮಾ.16ರಂದು 6,500 ಪುಟಗಳ (ದಾಖಲೆಗಳ ಸಹಿತ) ದೋಷಾರೋಪ ಪಟ್ಟಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಕೆಲ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಲು ಅಭಿಯೋಜನಾ ಮಂಜೂರಾತಿ ಸಿಗಬೇಕಿದ್ದು, ಅನುಮತಿ ದೊರೆತ ಕೂಡಲೇ ಅವರ ವಿರುದ್ಧವೂ ಚಾರ್ಜ್ ಶೀಟ್ ಸಲ್ಲಿಸಲು ಎಸಿಬಿ ಮುಂದಾಗಿದೆ. ಟಿಡಿಆರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸಿಬಿಯಲ್ಲಿ ಒಟ್ಟು 7

ಎಫ್​ಐಆರ್ ದಾಖಲಾಗಿದ್ದು, ಇದೀಗ 1 ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತ್ರ ಚಾರ್ಜ್​ಶೀಟ್ ಸಲ್ಲಿಸಲಾಗಿದೆ. ಬಾಕಿ ಇರುವ 6 ಪ್ರಕರಣಗಳು ತನಿಖಾ ಹಂತದಲ್ಲಿವೆ. ಅಕ್ರಮವಾಗಿ ಪಡೆದಿರುವ ಎರಡು ಡಿಆರ್​ಸಿ ನಂಬರ್​ಗಳನ್ನು ರದ್ದುಪಡಿಸುವಂತೆ ಎಸಿಬಿ ಅಧಿಕಾರಿಗಳು ಬಿಬಿಎಂಪಿ ಆಯುಕ್ತರಿಗೆ ಈಗಾಗಲೇ ಪತ್ರದ ಮೂಲಕ ತಿಳಿಸಿದ್ದಾರೆ.

ಅಕ್ರಮವಾಗಿ ಲಾಭ: ಹಳೆಯ ಮಾರ್ಗಸೂಚಿ ದರದ ಪ್ರಕಾರ ಕೌದೇನಹಳ್ಳಿ ಗ್ರಾಮದ ಪ್ರತಿ ಎಕರೆ ಕೃಷಿ ಭೂಮಿಯ ಮಾರ್ಗಸೂಚಿ ದರ 75 ಲಕ್ಷ ರೂ.ಗೆ ನಿಗದಿಯಾಗಿದ್ದು, ಈ ಮಾರ್ಗಸೂಚಿ ದರವನ್ನು 1.5 ಕೋಟಿ ರೂ.ಗೆ ಪರಿಷ್ಕರಣೆ ಮಾಡಲಾಗಿತ್ತು. 2013ರಲ್ಲಿ ಬ್ರೋಕರ್​ಗಳು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಪಡೆದಿದ್ದ ಟಿಡಿಆರ್ ಖಾಲಿ ಅರ್ಜಿ ನಮೂನೆ ಭರ್ತಿ ಮಾಡಿ ಬಿಬಿಎಂಪಿ ಮಹದೇವಪುರ ವಲಯದ ಟಿಡಿಆರ್ ವಿಭಾಗದಲ್ಲಿ ಸ್ವೀಕರಿಸಿದಂತೆ ಸುಳ್ಳು ದಾಖಲೆಗಳನ್ನು ಸೃಷ್ಟಿಸಿದ್ದರು. ವಾಸ್ತವವಾಗಿ ಅರ್ಹವಿದ್ದ ಡಿಆರ್​ಸಿ ವಿಸ್ತೀರ್ಣಕ್ಕಿಂತ 2 ಪಟ್ಟು ಹೆಚ್ಚು ವಿಸ್ತೀರ್ಣದ ಡಿಆರ್​ಸಿಗಳನ್ನು ವಿತರಿಸಿಸುವ ಮೂಲಕ ಅಧಿಕಾರಿಗಳು ಬ್ರೋಕರ್​ಗಳಿಗೆ ಅಕ್ರಮವಾಗಿ ಲಾಭ ಮಾಡಿಕೊಟ್ಟಿರುವುದು ತನಿಖೆಯಲ್ಲಿ ದೃಢಪಟ್ಟಿದೆ. ಜಿಪಿಎ ಪಡೆದ ಬ್ರೋಕರ್​ಗಳಾದ ಬಿ.ಎಸ್ ಸುರೇಂದ್ರನಾಥ್, ಕೆ.ಗೌತಮ್ ಕೆ. ಸುರೇಶ ಹಾಗೂ ವಾಲ್ಮಾರ್ಕ್ ಕಂಪನಿ ಸಿಬ್ಬಂದಿ ಬಿಬಿಎಂಪಿ ಅಧಿಕಾರಿಗಳೊಂದಿಗೆ ಅಕ್ರಮ ಒಡಂಬಡಿಕೆ ಮಾಡಿಕೊಂಡಿದ್ದರು. ಕೌದೇನಹಳ್ಳಿ ಸರ್ವೆ ನಂ.132ರಲ್ಲಿ ಸಾರ್ವಜನಿಕರು ಸೈಟ್ ಖರೀದಿಸಿ, ಸ್ವಾಧೀನಾನುಭವದಲ್ಲಿದ್ದ ವಿಷಯ ಮರೆಮಾಚಿ ಆರೋಪಿ ಬಿಬಿಎಂಪಿ ಅಧಿಕಾರಿಗಳಾದ ಕೃಷ್ಣಲಾಲ್, ಎಂ.ಎನ್ ದೇವರಾಜ್, ಕೆ.ಎನ್ ರಮೇಶ್, ರಾಮೇಗೌಡ, ಈಶ್ವರಪ್ರಸನ್ನಯ್ಯ, ಜಗನ್ನಾಥ ರೆಡ್ಡಿ, ಚಂದ್ರಶೇಖರ್ ಹಾಗೂ ಇತರ ಬಿಬಿಎಂಪಿ ಅಧಿಕಾರಿಗಳು ಬಿಬಿಎಂಪಿಯಲ್ಲಿ ಖಾತೆ ಹೊಂದಿರುವ ಸ್ವತ್ತುಗಳನ್ನು ಕೃಷಿ ಜಮೀನೆಂದು ಸುಳ್ಳಾಗಿ ಪರಿಗಣಿಸಿದ್ದರು. ಕಟ್ಟಡಗಳ ಮೌಲ್ಯವನ್ನು ಡಿಆರ್​ಸಿ ವಿಸ್ತೀರ್ಣಕ್ಕೆ ಪರಿವರ್ತಿಸುವಾಗ 7 ಪಟ್ಟು ಹೆಚ್ಚು ವಿಸ್ತೀರ್ಣವನ್ನು ಅಕ್ರಮವಾಗಿ ವಿತರಿಸುವ ಉದ್ದೇಶದಿಂದ ಸುಳ್ಳು ದಾಖಲೆ ಹಾಗೂ ಸುಳ್ಳು ವರದಿಗಳನ್ನು ತಯಾರಿಸಿರುವುದು ತನಿಖೆಯಲ್ಲಿ ಕಂಡು ಬಂದಿದೆ.

ಏನಿದು ಪ್ರಕರಣ?: ಬಿಬಿಎಂಪಿ ಆಯುಕ್ತರು 2009ರಲ್ಲಿ ಟಿ.ಸಿ. ಪಾಳ್ಯ ಮುಖ್ಯ ರಸ್ತೆ ಮತ್ತು ಹೊರಮಾವು ಮುಖ್ಯ ರಸ್ತೆ ವಿಸ್ತರಣೆ ಮಾಡುವ ಬಗ್ಗೆ ನೋಟಿಫಿಕೇಷನ್ ಹೊರಡಿಸಿದ್ದರು. ಅದರಂತೆ ಕೌದೇನಹಳ್ಳಿ ಗ್ರಾಮದ ಸರ್ವೆ ನಂ.132 ರಲ್ಲಿ 1989ರ ನಂತರದಲ್ಲಿ ರೆವಿನ್ಯೂ ಬಡಾವಣೆ ನಿರ್ವಿುಸಿ, ಸೈಟ್​ಗಳನ್ನು ವಿಂಗಡಿಸಿ ಹಿಂದಿನ ಭೂ ಮಾಲೀಕರಾದ ಮುನಿರಾಜಪ್ಪ ಅವರು ಸಾರ್ವಜನಿಕರಿಗೆ ನೋಂದಾಯಿತ ಕ್ರಯಪತ್ರದ ಮೂಲಕ ಮಾರಾಟ ಮಾಡಿದ್ದರು. ಖರೀದಿ ಮಾಡಿದ್ದ ಜನ ಅಲ್ಲಿ ಮನೆ ಕಟ್ಟಿ ಬಿಬಿಎಂಪಿಗೆ ಸಮಯಕ್ಕೆ ಸರಿಯಾಗಿ ಕಂದಾಯ ಪಾವತಿಸುತ್ತಿದ್ದರು.

ಆದರೆ, ಬಿಬಿಎಂಪಿ ಅಧಿಕಾರಿಗಳು ಹಾಗೂ ಬ್ರೋಕರ್​ಗಳು 2013ರಲ್ಲಿ ಹಳೆ ಭೂ ಮಾಲೀಕರಾದ ಮುನಿರಾಜಪ್ಪ ತಮ್ಮ ಮಕ್ಕಳ ಹೆಸರಿಗೆ ಸರ್ವೆ ನಂ.132ರ ಖಾತೆಯನ್ನು ಅಕ್ರಮವಾಗಿ ವರ್ಗಾವಣೆ ಮಾಡಿಸಿದ್ದರು. ಮುನಿರಾಜಪ್ಪ ಅವರ ಮಕ್ಕಳಿಂದ ಅಕ್ರಮವಾಗಿ ಟಿಡಿಆರ್ ಪಡೆಯಲು ಸೇಲ್ ಅಗ್ರಿಮೆಂಟ್ ಹಾಗೂ ಜಿಪಿಎ ಪಡೆದಿದ್ದರು ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ದಲ್ಲಾಳಿಗಳಿಂದ ಸುಳ್ಳು ವರದಿ ಸೃಷ್ಟಿ: ಅಸ್ತಿತ್ವದಲ್ಲಿಯೇ ಇಲ್ಲದ ಕಟ್ಟಡಗಳ ಹೆಸರಿನಲ್ಲಿ ಹಾಗೂ ರಸ್ತೆ ವಿಸ್ತರಣೆಗೆ ಒಳಪಡದ ಕಟ್ಟಡಗಳ ಹೆಸರಿನಲ್ಲಿ 1 ಮಹಡಿ ಕಟ್ಟಡವನ್ನು ಮೂರು ಮಹಡಿಯ ಕಟ್ಟಡಗಳೆಂದು ಸುಳ್ಳು ಸ್ಥಳ ಪರಿಶೀಲನೆ ಮತ್ತು ಕಟ್ಟಡಗಳ ಮೌಲ್ಯಮಾಪನ ವರದಿಯನ್ನು ತಯಾರಿಸಿ ಅಕ್ರಮವಾಗಿ 5,64,592 ಚದರಡಿ ವಿಸ್ತೀರ್ಣದ ಟಿಡಿಆರ್ ವಿತರಣೆ ಮಾಡಿರುವುದು ತನಿಖೆಯಲ್ಲಿ ಕಂಡುಬಂದಿದೆ. ನಿಜಾಂಶ ಮರೆಮಾಚಿ, ಬಿಬಿಎಂಪಿ ಸುತ್ತೋಲೆಗಳಿಗೆ ವ್ಯತ್ತಿರಿಕ್ತವಾಗಿ ಕಟ್ಟಡಗಳ ಮೌಲ್ಯಮಾಪನ ವರದಿ ತಯಾರಿಸಿ, ರಸ್ತೆ ವಿಸ್ತರಣೆಗೆ ಒಳಪಡದ ಹಲವು ಕಟ್ಟಡಗಳನ್ನು ರಸ್ತೆ ವಿಸ್ತರಣೆಗೆ ಒಳಪಡುವುದಾಗಿ ಸುಳ್ಳು ದಾಖಲೆ ಸೃಷ್ಟಿಸಲಾಗಿತ್ತು. ನೆಲ ಮತ್ತು 1 ಮಹಡಿ ಇರುವ ಕಟ್ಟಡಗಳನ್ನು ನೆಲ ಮತ್ತು 3 ಮಹಡಿಯ ಕಟ್ಟಡಗಳೆಂದು ಸುಳ್ಳು ವರದಿಗಳನ್ನು ತಯಾರಿಸಿ, 2014ನೇ ಸಾಲಿನಲ್ಲಿ ಬಿಬಿಎಂಪಿಯಿಂದ ಆರೋಪಿ ಟಿಡಿಆರ್ ಬ್ರೋಕರ್​ಗಳು 27 ಕೋಟಿ ರೂ.ಗೂ ಅಧಿಕ ಬೆಲೆಗೆ ಇತರೆ ರಿಯಲ್​ಎಸ್ಟೇಟ್ ಕಂಪನಿಗಳಿಗೆ ಮಾರಾಟ ಮಾಡಿರುವುದು ತನಿಖೆಯಲ್ಲಿ ದೃಢಪಟ್ಟಿದೆ. ಟಿಡಿಆರ್ ವಿತರಣೆ ಮಾಡಿರುವ ಜಾಗವನ್ನು ಬಿಬಿಎಂಪಿಯವರು 6 ವರ್ಷ ಕಳೆದರೂ ಸ್ವಾಧೀನ ಪಡಿಸಿಕೊಂಡಿಲ್ಲ. ರಸ್ತೆ ವಿಸ್ತರಣೆಯನ್ನೂ ಮಾಡಿಲ್ಲ ಎಂಬುದು ತನಿಖೆಯಲ್ಲಿ ದೃಢಪಟ್ಟಿದೆ.