ಜಿಲ್ಲೆ

ಚರಣ್ ಶೆಟ್ಟಿ ಆತ್ಮಹತ್ಯೆ ಪ್ರಕರಣ, ಕಾಲೇಜು ವಿದ್ಯಾರ್ಥಿಗಳ ಪ್ರತಿಭಟನೆ

Udupi

ಹೆಬ್ರಿ: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿ.ಕಾಂ. ವಿದ್ಯಾರ್ಥಿ ಚರಣ್ ಶೆಟ್ಟಿ ಆತ್ಮಹತ್ಯೆಗೆ ಕಾಲೇಜಿನ ನಾಲ್ವರು ಉಪನ್ಯಾಸಕರೇ ಹೊಣೆ ಎಂದು ಆರೋಪಿಸಿದ್ದು ಮೃತ ವಿದ್ಯಾರ್ಥಿಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿ ಕಾಲೇಜು ಆವರಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ ಚರಣ್‌ಗೆ ಇತ್ತೀಚೆಗೆ ಕಾಲೇಜಿನ ಸಮಾರಂಭದಲ್ಲಿ ನಡೆದ ಸಣ್ಣ ಘಟನೆಯೊಂದನ್ನೇ ನೆಪವಾಗಿಟ್ಟುಕೊಂಡು ಕಾಲೇಜಿನ ಶಿಕ್ಷಕರು ಪ್ರತಿದಿನಮಾನಸಿಕ ಕಿರುಕುಳ ಹಾಗೂ ಅವಮಾನ ಮಾಡುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದರು.

ಇತ್ತೀಚೆಗೆ ನಡೆದ ಪಾಲಕರ ಸಭೆಯಲ್ಲೂ ವಿದ್ಯಾರ್ಥಿಗೆ ಅವಮಾನ ಮಾಡಿದ್ದು, ಸರ್ಕಾರದಿಂದ ವಿದ್ಯಾರ್ಥಿಗಳಿಗೆ ನೀಡಲಾದ ಉಚಿತ ಲ್ಯಾಪ್‌ಟಾಪ್‌ನ್ನು ಚರಣ್‌ಗೆ ನೀಡಿಲ್ಲ. ಶಿಕ್ಷಕರ ನಿರಂತರ ಅವಮಾನ, ಮಾನಸಿಕ ಕಿರುಕುಳದಿಂದ ಬೇಸತ್ತು ಚರಣ್ ಆತ್ಮಹತ್ಯೆ ಮಾಡಿಕೊಂಡಿದ್ದು, ಇದಕ್ಕೆ ಪ್ರಾಂಶುಪಾಲರು ಮತ್ತು ಕೆಲವು ಉಪನ್ಯಾಸಕರು ಕಾರಣ ಎಂದು ಡೆತ್ ನೋಟ್‌ನಲ್ಲಿ ಬರೆಯಲಾಗಿದೆ. ಈ ಕುರಿತು ತನಿಖೆ ನಡೆಸಿ ಅಪರಾಧಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ವಿದ್ಯಾರ್ಥಿಗಳು ಒತ್ತಾಯಿಸಿದರು. ಬಳಿಕ ಪೊಲೀಸ್, ಕಾಲೇಜು ಆಡಳಿತ ಮಂಡಳಿಗೆ ಮನವಿ ಸಲ್ಲಿಸಿದರು.

ಚರಣ್ ಆತ್ಮಹತ್ಯೆ ನಂತರ ಕಾಲೇಜಿನಲ್ಲಿ ವಿದ್ಯಾರ್ಥಿಗಳನ್ನು ಕರೆಸಿ ವಿಶ್ವಾಸಕ್ಕೆ ತೆಗೆದುಕೊಂಡು ಗೌರವಪೂರ್ವಕವಾಗಿ ಶ್ರದ್ಧಾಂಜಲಿ ಸಭೆನಡೆಸಿಲ್ಲ ಎಂದು ಕಾಲೇಜಿನ ವಿದ್ಯಾರ್ಥಿ ನಾಯಕ ಸುಮಂತ್, ಸುಧಾಕರ್ ಮೊದಲಾದವರು ಪ್ರತಿಭಟನಾ ಸ್ಥಳದಲ್ಲಿ ಹಾಜರಿದ್ದ ಉಪನ್ಯಾಸಕಿ ಆಶಾಲತಾ ಅವರಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆ ಬಳಿಕ ಮೃತ ವಿದ್ಯಾರ್ಥಿಯ ಭಾವಚಿತ್ರಕ್ಕೆ ದೀಪ ಬೆಳಗಿ ಮೌನ ಪ್ರಾರ್ಥನೆ ಸಲ್ಲಿಸಿ, ಶ್ರದ್ಧಾಂಜಲಿ ಅರ್ಪಿಸಲಾಯಿತು.

ವಿದ್ಯಾರ್ಥಿ ಆತ್ಮಹತ್ಯೆಯಿಂದ ಎಲ್ಲರಿಗೂ ನೋವಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಈ ಕುರಿತು ಯಾವುದೇ ಹೇಳಿಕೆ ನೀಡಲು ಸಾಧ್ಯವಿಲ್ಲ. ವಿದ್ಯಾರ್ಥಿಗಳು ನೀಡಿದ ಮನವಿಯನ್ನು ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಗುವುದು.

-ಆಶಾಲತಾ, ಉಪನ್ಯಾಸಕಿ