ಚಾಮರಾಜನಗರ : ನಾಮಪತ್ರ ಸಲ್ಲಿಸುವ ಕೊನೆಯ ಕ್ಷಣದಲ್ಲಿ ಪಕ್ಷವೇ ಘೋಷಣೆ ಮಾಡಿದ್ದ ಅಭ್ಯರ್ಥಿ ಬದಲಾವಣೆಯಾಗಿದ್ದು, ನಿವೃತ್ತ ತಹಸೀಲ್ದಾರ್ ಸಿ.ಮಹದೇವಯ್ಯ ಬದಲು ಎಂ.ಕೃಷ್ಣಮೂರ್ತಿ ಕೊನೆಯ ಕ್ಷಣದಲ್ಲಿ ನಾಮಪತ್ರ ಸಲ್ಲಿಸಿದ್ದಾರೆ.
ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ಬಹುಜನ ಸಮಾಜ ಪಕ್ಷದಿಂದ ನಿವೃತ್ತ ತಹಸೀಲ್ದಾರ್ ಸಿ.ಮಹದೇವಯ್ಯ ಅಭ್ಯರ್ಥಿ ಎಂದು ಕೊನೆಯ ಕ್ಷಣದವರೆಗೂ ಅನಿಸಿದ್ದರೂ, ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಗುರುವಾರ ಎಂ.ಕೃಷ್ಣಮೂರ್ತಿ ಅವರು ಬಿಎಸ್ಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.
ಅದಕ್ಕೂ ಮುನ್ನ ಶ್ರೀಚಾಮರಾಜೇಶ್ವರ ದೇವಸ್ಥಾನದ ಮುಂಭಾಗದ ಉದ್ಯಾನವನದ ಬಳಿ ಜಮಾಯಿಸಿದ ಬಿಎಸ್ಪಿ ಕಾರ್ಯಕರ್ತರು ಪಕ್ಷದ ಬಾವುಟಗಳನ್ನು ಹಿಡಿದು, ವಿವಿಧ ಘೋಷಣೆಗಳನ್ನು ಕೂಗಿ ಅಲ್ಲಿಂದ ಮೆರವಣಿಗೆ ಮೂಲಕ ಶ್ರೀಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿ ರಸ್ತೆ ಮಾರ್ಗವಾಗಿ ಸಾಗಿ ಜಿಲ್ಲಾಡಳಿತ ಭವನಕ್ಕೆ ತೆರಳಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಸಿ.ಟಿ.ಶಿಲ್ಪಾನಾಗ್ ಅವರಿಗೆ ಉಮೇದುವಾರಿಕೆ ಸಲ್ಲಿಸಿದರು.
ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹ.ರಾ.ಮಹೇಶ್, ಜಿಲ್ಲಾಧ್ಯಕ್ಷ ಎನ್.ನಾಗಯ್ಯ, ನಿವೃತ್ತ ತಹಸೀಲ್ದಾರ್ ಸಿ.ಮಹದೇವಯ್ಯ ಅವರು ಅಭ್ಯರ್ಥಿ ಎಂ.ಕೃಷ್ಣಮೂರ್ತಿ ಅವರಿಗೆ ಸಾಥ್ ನೀಡಿದರು.
ರಾತ್ರೋರಾತ್ರಿ ಅಭ್ಯರ್ಥಿ ಬದಲಾವಣೆ
ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರಕ್ಕೆ ಬಿಎಸ್ಪಿ ಅಭ್ಯರ್ಥಿ ಎಂದು ನಿವೃತ್ತ ತಹಸೀಲ್ದಾರ್ ಸಿ.ಮಹದೇವಯ್ಯ ಅವರ ಹೆಸರನ್ನು ಪಕ್ಷವೇ ಘೋಷಣೆ ಮಾಡಿ ಚುನಾವಣಾ ಕಣಕ್ಕಿಳಿಸಿತ್ತು.
ಅಭ್ಯರ್ಥಿ ಸಿ.ಮಹದೇವಯ್ಯ ಅವರು ಕೂಡ ಪಕ್ಷದ ತೀರ್ಮಾನದಂತೆ ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲೂ ಸಂಚಾರ ಮಾಡಿ, ಹಲವಾರು ಪತ್ರಿಕಾಗೋಷ್ಠಿಯನ್ನು ನಡೆಸಿ ನಾನೇ ಅಭ್ಯರ್ಥಿ ಎಂದು ಪರಿಚಯಿಸಿಕೊಂಡು ಕಾರ್ಯಕರ್ತರನ್ನು ಒಗ್ಗೂಡಿಸುವ ಪ್ರಯತ್ನ ಮಾಡುತ್ತಿದ್ದರು. ನಾಮಪತ್ರ ಸಲ್ಲಿಸಲು ಒಂದು ದಿನ ಉಳಿದಿರುವಾಗಲೂ ಬಿಎಸ್ಪಿ ಅಭ್ಯರ್ಥಿ ಸಿ.ಮಹದೇವಯ್ಯ ಎಂದು ಹೇಳಲಾಗುತ್ತಿತ್ತು. ಆದರೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಬುಧವಾರ ತಡರಾತ್ರಿಯಲ್ಲಿ ಸಭೆ ನಡೆಸಿ ಅಭ್ಯರ್ಥಿಯನ್ನು ಬದಲಾವಣೆ ಮಾಡಿದ್ದಾರೆ. ಕೊನೆಯದಾಗಿ ಬಿಎಸ್ಪಿಯಲ್ಲಿ ಹಲವಾರು ಮುಖಂಡರ ಹೆಸರುಗಳು ಕೇಳಿಬಂದರೂ ಬಿಎಸ್ಪಿ ರಾಜ್ಯ ಉಸ್ತುವಾರಿ ಮತ್ತು ಸಂಯೋಜಕ ಎಂ.ಕೃಷ್ಣಮೂರ್ತಿ ಅವರನ್ನು ಅಂತಿಮಗೊಳಿಸಿ ಕಣಕ್ಕಿಳಿಸಲಾಗಿದ್ದು, ಈ ಮೂಲಕ ಬಿಎಸ್ಪಿ ಅಚ್ಚರಿ ಮೂಡಿಸಿದೆ.
ಬದಲಾಗಿದ್ದು ಯಾಕೇ?:
ಬಿಎಸ್ಪಿ ಅಭ್ಯರ್ಥಿ ಎಂದೇ ಬಿಂಬಿತವಾಗಿದ್ದ ನಿವೃತ್ತ ತಹಸೀಲ್ದಾರ್ ಸಿ.ಮಹದೇವಯ್ಯ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ಇದ್ದು, ಅದು ಇತ್ಯರ್ಥವಾಗದ ಕಾರಣದಿಂದ ಅಭ್ಯರ್ಥಿಯನ್ನು ಬದಲಾವಣೆ ಮಾಡಲಾಗಿದೆ ಎಂದು ಪಕ್ಷದ ಮುಖಂಡರು ತಿಳಿಸಿದರು.
ನಿವೃತ್ತ ತಹಸೀಲ್ದಾರ್ ಸಿ.ಮಹದೇವಯ್ಯ ವಿಜಯವಾಣಿ ಜತೆಗೆ ಮಾತನಾಡಿ, ನಾನು ಸುಮಾರು 20-25 ವರ್ಷಗಳ ಕಾಲ ಪಕ್ಷಕ್ಕಾಗಿ ದುಡಿದಿದ್ದೇನೆ. ಅಭ್ಯರ್ಥಿ ಆಗುವುದು, ಬಿಡುವುದು ಬೇರೆಯ ವಿಚಾರ. ಆದರೆ ಪಕ್ಷದ ಮುಖಂಡರು ಅದನ್ನು ಪರಿಗಣಿಸಲಿಲ್ಲ ಎಂಬುದು ನನಗೆ ನೋವಾಗಿದೆ. ನಾನು ಅಧಿಕಾರಕ್ಕಾಗಿ ಎಂದು ಆಸೆಪಟ್ಟಿಲ್ಲ, ಆದರೆ ಸೇವೆಯನ್ನೇ ಅಧಿಕಾರ ಎಂದು ಭಾವಿಸಿ ಸಾಗಿದ್ದೇವೆ. ನಾನು ಯಾವುದೇ ತಪ್ಪು ಮಾಡಿಲ್ಲ, ಆದರೂ ಕ್ರಿಮಿನಲ್ ಪ್ರಕರಣ ಇದೆ ಎಂಬ ಕಾರಣಕ್ಕೆ ನಾನು ಹಿಂದೆ ಸರಿದಿದ್ದೇನೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮತ ಸೆಳೆಯಬಲ್ಲ ಆನೆ:
ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಬಹುಜನ ಸಮಾಜ ಪಕ್ಷ ತನ್ನದೇ ನಿಷ್ಠಾವಂತ ಕಾರ್ಯಕರ್ತರನ್ನು ಹೊಂದಿದ್ದು, ಆನೆಯ ಗುರುತು ಸಾಕಷ್ಟು ಮತಗಳನ್ನು ಸೆಳೆಯಬಹುದಾಗಿದೆ. ಈ ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಬಿಎಸ್ಪಿಯಿಂದ ಸ್ಪರ್ಧಿಸಿದ್ದ ಡಾ.ಶಿವಕುಮಾರ್ ಅವರು 87,631 ಮತಗಳನ್ನು ಪಡೆದುಕೊಳ್ಳುವ ಮೂಲಕ ಶೇ.6.9 ರಷ್ಟು ಮತವನ್ನು ಪಡೆದುಕೊಂಡಿದ್ದರು. ಚಾಮರಾಜನಗರ ಲೋಕಸಭಾ ಕ್ಷೇತ್ರದ 8 ಕ್ಷೇತ್ರಗಳಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ದಲಿತರ ಮತಗಳನ್ನು ಬಿಎಸ್ಪಿ ಪಡೆದುಕೊಳ್ಳಬಹುದು ಎಂದು ಹೇಳಲಾಗುತ್ತಿದೆ. ಅದರಲ್ಲೂ ಈವರೆಗೂ ಪಕ್ಷದಲ್ಲಿ ಪ್ರಾಮಾಣಿಕವಾಗಿ ಗುರುತಿಸಿಕೊಂಡಿರುವ ಎಂ.ಕೃಷ್ಣಮೂರ್ತಿ ಅವರು ಅಭ್ಯರ್ಥಿಯಾಗಿರುವುದು ಇನ್ನು ಹೆಚ್ಚಿನ ಪ್ರಮಾಣದಲ್ಲೇ ಮತಗಳು ಆನೆಯತ್ತಾ ಬರಬಹುದು ಎಂದು ಹೇಳಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ನಾಮಪತ್ರ ಸಲ್ಲಿಸಿದ ಬಳಿಕ ಬಿಎಸ್ಪಿ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ನೇತೃತ್ವದಲ್ಲಿ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯನ್ನು ನಡೆಸಿದ್ದು, ಚುನಾವಣಾ ಪ್ರಚಾರಕ್ಕೆ ಸಿದ್ಧತೆ ಮಾಡಿಕೊಳ್ಳುವ ಬಗ್ಗೆ ಚರ್ಚಿಸಲಾಗಿದೆ.
ವಿಧಾನಸಭೆಯಲ್ಲಿ ಛಾಪು ಮೂಡಿಸಿದ್ದ ಬಿಎಸ್ಪಿ
ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ಒಳಪಡುವ ಕೊಳ್ಳೇಗಾಲ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಎನ್.ಮಹೇಶ್ ಅವರು ಬಿಎಸ್ಪಿ ಪಕ್ಷದಿಂದ ಸ್ಪರ್ಧಿಸಿ ಗೆಲುವನ್ನು ದಾಖಲಿಸಿ, ರಾಜ್ಯ ಸಂಪುಟದಲ್ಲಿ ಶಿಕ್ಷಣ ಸಚಿವರು ಆಗಿದ್ದರು. ಈ ಮೂಲಕ ವಿಧಾನಸಭೆಯಲ್ಲಿ ಆನೆ ಛಾಪು ಮೂಡಿಸಿತ್ತು. ಆದರೆ ಬದಲಾದ ದಿನಗಳಲ್ಲಿ ಎನ್.ಮಹೇಶ್ ಅವರು ಬಿಜೆಪಿ ಪಕ್ಷಕ್ಕೆ ಸೇರಿಕೊಂಡರು. ಹಿಂದಿನ ಚುನಾವಣೆಯಲ್ಲಿ ಕೊಳ್ಳೇಗಾಲ ಕ್ಷೇತ್ರದಿಂದ ಅಭ್ಯರ್ಥಿಯನ್ನು ಹಾಕದೆ ಕಾಂಗ್ರೆಸ್‌ಗೆ ಬೆಂಬಲ ಸೂಚಿಸಲಾಗಿತ್ತು. ಈ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಎ.ಆರ್.ಕೃಷ್ಣಮೂರ್ತಿ ಗೆಲುವು ದಾಖಲಿಸಿದ್ದರು. ಚಾಮರಾಜನಗರ ಕ್ಷೇತ್ರದಲ್ಲೂ ಹ.ರಾ.ಮಹೇಶ್ ಅವರು ಅಭ್ಯರ್ಥಿಯಾಗಿ ಸಾಕಷ್ಟು ಚರ್ಚೆಗಳನ್ನು ಹುಟ್ಟುಹಾಕಿದ್ದರು. ಇಂದಿಗೂ 8 ವಿಧಾನಸಭಾ ಕ್ಷೇತ್ರಗಳಲ್ಲೂ ಬಿಎಸ್ಪಿಯ ಸಾಕಷ್ಟು ಕಾರ್ಯಕರ್ತರು ಇದ್ದು ಚಾಮರಾಜನಗರ ಲೋಕಸಭಾ ಚುನಾವಣೆ ಈ ಮೂಲಕ ರಂಗೇರುತ್ತಿದೆ.
ನನಗೆ ಇದು ಅಚ್ಚರಿಯ ಆಯ್ಕೆಯಾಗಿದೆ. ಅನಿವಾರ್ಯ ಅಭ್ಯರ್ಥಿಯಾಗಿ ನಾನು ಬಂದಿದ್ದೇನೆ. ನಿಯೋಜಿತ ಅಭ್ಯರ್ಥಿ ಸಿ.ಮಹದೇವಯ್ಯ ಕೆಲವು ತಾಂತ್ರಿಕ ಕಾರಣಗಳಿಂದಾಗಿ ಹಿಂದೆ ಸರಿದಿದ್ದಾರೆ. ಪಕ್ಷದ ಎಲ್ಲ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಆಶಯದಂತೆ ನಾನು ಅಭ್ಯರ್ಥಿಯಾಗಿದ್ದೇನೆ.ಎಂ.ಕೃಷ್ಣಮೂರ್ತಿ, ಅಭ್ಯರ್ಥಿ, ಬಿಎಸ್ಪಿ, ಚಾಮರಾಜನಗರ ಕ್ಷೇತ್ರ ನಿವೃತ್ತ ತಹಸೀಲ್ದಾರ್ ಸಿ.ಮಹದೇವಯ್ಯ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ಇತ್ಯರ್ಥಪಡಿಸಿಕೊಳ್ಳಲು ಸಮಯ ತೆಗೆದುಕೊಂಡಿದ್ದರು. ಅದನ್ನು ಬಗೆಹರಿಸಿಕೊಳ್ಳದ ಹಿನ್ನೆಲೆಯಲ್ಲಿ ಅಭ್ಯರ್ಥಿಯನ್ನು ಬದಲಾವಣೆ ಮಾಡಬೇಕಾಯಿತು. ಈ ತೀರ್ಮಾನವನ್ನು ಅವರು ಒಪ್ಪಿಕೊಂಡ ಬಳಿಕವೇ ಈ ನಿರ್ಧಾರ ಕೈಗೊಳ್ಳಲಾಗಿದೆ.ಎನ್.ನಾಗಯ್ಯ, ಜಿಲ್ಲಾಧ್ಯಕ್ಷ, ಬಿಎಸ್ಪಿ, ಚಾಮರಾಜನಗರ