ವಿಜಯವಾಣಿ ಸುದ್ದಿಜಾಲ ಧಾರವಾಡ
ಶೀಗೆ ಹುಣ್ಣಿಮೆ ಅಂಗವಾಗಿ ರೈತರು ಗುರುವಾರ ಭೂತಾಯಿಗೆ ಚರಗದ ನೈವೇದ್ಯ ಅರ್ಪಿಸಿದರು. ಕೆಲ ದಿನಗಳಿಂದ ಮಳೆ ಸುರಿಯುತ್ತಿರುವುದರಿಂದ ಹಿಂಗಾರು ಬಿತ್ತನೆ ಇನ್ನೂ ಆರಂಭಗೊ0ಡಿಲ್ಲ. ಆದಾಗ್ಯೂ ಪದ್ಧತಿಯಂತೆ ಹಬ್ಬ ಆಚರಿಸಿದರು.
ಮಳೆ ಬಿಡುವಿದ್ದ ವೇಳೆಯಲ್ಲಿ ಹೊಲಗಳಿಗೆ ತೆರಳಿದ ಜನ ಭೂಮಿ ತಾಯಿಗೆ ಪೂಜೆ ಸಲ್ಲಿಸಿದರು. ಹೋಳಿಗೆ, ಕಡುಬು, ವಡೆ ಮತ್ತು ಪಾಯಸದ ನೈವೇದ್ಯ ಅರ್ಪಿಸಿದರು. ಹಿಂಗಾರು ಬೆಳೆ ಉತ್ತಮವಾಗಿ ಕೈಸೇರಲಿ ಎಂದು ಪ್ರಾರ್ಥಿಸಿದರು.
ಕೆಲವೆಡೆ ಕುಟುಂಬ ಸಮೇತರಾಗಿ ಜಮೀನುಗಳಿಗೆ ತೆರಳಿ ಹಬ್ಬ ಆಚರಿಸಲಾಯಿತು. ಶಾಲೆಗಳಿಗೆ ರಜೆ ಇದ್ದುದರಿಂದ ಮಕ್ಕಳು ಪಾಲಕರೊಂದಿಗೆ ತೆರಳಿದ್ದರು. ಪೂಜೆಯ ನಂತರ ಜಮೀನುಗಳಲ್ಲಿ ಪರಿವಾರ ಸಮೇತ ಹಬ್ಬದೂಟ ಸವಿದರು.