ಕೊಟ್ಟೂರು: ಡಿಎಂಎಫ್‌ನಿಂದ ರುದ್ರಭೂಮಿ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಿ ಕಂದಾಯ ಇಲಾಖೆಯಿಂದ ಲಭ್ಯವಿರುವ ಸೌಲಭ್ಯಗಳನ್ನು ಒದಗಿಸಿಕೊಡುವುದಾಗಿ ತಹಸೀಲ್ದಾರ್ ಎಂ.ಕುಮಾರಸ್ವಾಮಿ ಭರವಸೆ ನೀಡಿದರು.
ತಾಲೂಕಿನ ಚಪ್ಪರದಹಳ್ಳಿಯಲ್ಲಿ ಸ್ಮಶಾನ ಭೂಮಿ ಬುಧವಾರ ಲೋಕಾರ್ಪಣೆಗೊಳಿಸಿ ಮಾತನಾಡಿದರು. ಖಾಸಗಿ ವ್ಯಕ್ತಿಯ ಹೆಸರಿನಲ್ಲಿರುವ ಗ್ರಾಮದ ಸರ್ಕಾರಿ ಶಾಲೆಯ ಭೂಮಿಯ ದಾಖಲೆಗಳನ್ನು ಪರಿಶೀಲಿಸಿ ಸರ್ಕಾರಿ ಭೂಮಿ ಎಂದು ಪಹಣಿಯಲ್ಲಿ ಸೇರಿಸುವುದಾಗಿ ಹೇಳಿದರು. ಗ್ರಾಮದ ಮುಖಂಡ ಅಂಬಳಿ ಕೊಟ್ರಪ್ಪ ಮಾತನಾಡಿ, ನಮ್ಮ ಊರಿಗೆ ರುದ್ರಭೂಮಿ ಇರಲಿಲ್ಲ. ಯಾರಾದರೂ ಸಾವಿಗೀಡಾದರೆ ಶವ ಸಂಸ್ಕಾರ ಮಾಡುವುದು ಕಷ್ಟವಾಗಿತ್ತು. ಕೊನೆಗೂ ಗ್ರಾಮಸ್ಥರ 10 ವರ್ಷಗಳ ಹೋರಾಟಕ್ಕೆ ಗೆಲುವು ಸಿಕ್ಕಂತಾಗಿದೆ ಎಂದರು.
ಕೆ. ಅಯ್ಯನಹಳ್ಳಿ ಗ್ರಾಪಂ ಅಧ್ಯಕ್ಷೆ ಶ್ರೀಮತಿ ರೂಪಾ ಸುರೇಶ, ಗ್ರಾಪಂ ಮಾಜಿ ಅಧ್ಯಕ್ಷ ಕೊಟ್ರೇಶಪ್ಪ, ಗ್ರಾಪಂ ಸದಸ್ಯೆ ಓಬಳೇಶ ಇದ್ದರು.
ವಿವಿಧ ಪೂಜೆ: ನಿಯೋಜಿತ ರುದ್ರಭೂಮಿಯಲ್ಲಿ ಕೊಟ್ಟೂರು ಚಾನುಕೋಟಿ ಮಠದ ಸಿದ್ದಲಿಂಗ ಸ್ವಾಮೀಜಿ ಮಾರ್ಗದರ್ಶನದಲ್ಲಿ ಮಂಗಳವಾರ ರಾತ್ರಿ ವಿಶೇಷ ಪೂಜೆ, ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಇದೇ ಸಂದರ್ಭ ವಾಲ್ಮೀಕಿ ಸಮುದಾಯ ಕೂಡ ಪ್ರತ್ಯೇಕವಾಗಿ ಧಾರ್ಮಿಕ ಕಾರ್ಯಗಳನ್ನು ಪೂರೈಸಿತು. ರುದ್ರಭೂಮಿಯ ನಾಲ್ಕು ದಿಕ್ಕಿಗೂ ಲಿಂಗಮುದ್ರೆ ಕಲ್ಲುಗಳನ್ನು ಸ್ಥಾಪಿಸಲಾಯಿತು. ಪ್ರಮುಖರಾದ ಜಿ.ವೀರನಗೌಡ, ಜಿ.ಗಿರೀಶ, ಜಿ.ಮಹೇಶಪ್ಪ, ಎನ್. ಬಸವರಾಜ, ಎನ್. ಭೀಮೇಶ, ರೇಣುಕಪ್ಪ, ಓಬಳೇಶ ಇದ್ದರು.