ಜಿಲ್ಲೆ

ಮಹಿಳಾ ದಿನಾಚರಣೆಯಲ್ಲಿ ಅವ್ಯವಸ್ಥೆ

ಗಂಗಾಧರ ಬಿ ವಿ

* ಇಬ್ಬರಿಗೆ ಗಾಯ

* ರೋಸಿಹೋದ ನಾರಿಯರು

*ಕುಳಿತುಕೊಳ್ಳಲು ಆಸನಕ್ಕಾಗಿ ಪರದಾಟ

ರಾಮನಗರ ಮಹಿಳಾ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿ ಆಗಬೇಕಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ಆಯೋಜಕರ ಅಸಮರ್ಪಕ ನಿರ್ವಹಣೆಯಿಂದಾಗಿ ಮಹಿಳೆಯರಿಬ್ಬರು ಗಾಯಗೊಳ್ಳುವ ಜತೆಗೆ ಹಲವು ಮಂದಿ ತೊಂದರೆ ಎದುರಿಸುವಂತಾಯಿತು. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಕೌಶಲಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆ, ಎನ್‌ಆರ್‌ಎಲ್‌ಎಂ - ಸಂಜೀವಿನಿ ವತಿಯಿಂದ ಗುರುವಾರ ವಿಶ್ವ ಮಹಿಳಾ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು. ಆದರೆ, ಕಾರ್ಯಕ್ರಮ ಆಯೋಜಕರು ಮತ್ತು ನಿರ್ವಹಣೆ ಜವಾಬ್ದಾರಿ ಹೊತ್ತವರ ಬೇಜವಾಬ್ದಾರಿ ಪರಿಣಾಮ ಮಹಿಳೆಯರು ಪರದಾಡಿದರು.

ಕುರ್ಚಿ ಸಿಗಲಿಲ್ಲ:

ನಿರೀಕ್ಷೆಗಿಂತ ಹೆಚ್ಚಿನ ಮಹಿಳೆಯರು ಕಾರ್ಯಕ್ರಮಕ್ಕೆ ಆಗಮಿಸಿದ ಕಾರಣ ಜಿಲ್ಲಾ ಕ್ರೀಡಾಂಗಣದ ಮೇಲ್ಭಾಗದ ಜಾಗ ಕಿರಿದಾಗಿದ್ದರಿಂದ ಮಹಿಳೆಯರಿಗೆ ಖುರ್ಚಿಗಳೇ ಸಿಗಲಿಲ್ಲ. ಕೆಲವರು ನಿಂತೇ ಕಾರ್ಯಕ್ರಮ ವೀಕ್ಷಣೆ ವಾಡಿದರೆ, ಮತ್ತೆ ಕೆಲವರು ಗೇಟಿನ ಹೊರಭಾಗದ ಸಂಚಾರಿ ಠಾಣೆ ಮತ್ತು ಖಾಸಗಿ ನರ್ಸಿಂಗ್ ಹೋಂ ಮುಂಭಾಗ ರಸ್ತೆ ಅಕ್ಕಪಕ್ಕದಮರಗಳ ನೆರಳಿನಲ್ಲಿ ಕುಳಿತಿದ್ದರೆ, ಕೆಲವು ಮಹಿಳೆಯರು ಬಿಸಿಲಲ್ಲೇ ರಸ್ತೆಯಲ್ಲಿ ನಿಂತಿದ್ದ ದೃಶ್ಯಗಳು ದೃಶ್ಯ ಕಂಡುಬಂದವು. ಬಯಲೇ ಶೌಚಗೃಹ:

ಜಿಲ್ಲಾ ಕ್ರೀಡಾಂಗಣದ ಕೆಳಭಾಗದಲ್ಲಿ ತಾತ್ಕಾಲಿಕ ಶೌಚಗೃಹ ವ್ಯವಸ್ಥೆ ವಾಡಲಾಗಿತ್ತು. ಆದರೆ, ಕೆಳ ಭಾಗಕ್ಕೆ ಹೋಗುವ ಗೇಟುಗಳನ್ನು ಮುಚ್ಚಿ, ಶೌಚಗೃಹ ಇರುವ ಬಗ್ಗೆಯೇ ಆಯೋಜಕರು ಮಾಹಿತಿ ನೀಡದ ಕಾರಣದಿಂದಾಗಿ ಕ್ರೀಡಾ ಇಲಾಖೆ ಕಚೇರಿ ಮುಂಭಾಗ ಇರುವ ಬಾಗಿಲಿಲ್ಲದ ಕಟ್ಟಡದಲ್ಲೇ ಜಲಬಾಧೆ ತೀರಿಸಿಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗಿತ್ತು. ಶೌಚಗೃಹ ವ್ಯವಸ್ಥೆ ಇದ್ದೂ ಇಲ್ಲದಂತಾದ ಸನ್ನಿವೇಶ ಕಂಡುಬಂತು.

ಊಟಕ್ಕೂ ನೂಕುನುಗ್ಗಲು :

ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಬರುತ್ತಾರೆ ಎಂದು ತಿಳಿದಿದ್ದರೂ ಬೆರೆಳೆಣಿಕೆ ಕೌಂಟರ್ ಮಾಡಲಾಗಿತ್ತು. ಊಟ ಪಡೆಯಲು ಮುಗಿಬೀಳಬೇಕಾಯಿತು. ಊಟದ ಕೌಂಟರ್ ಸಮೀಪ ಶಾಮಿಯಾನ ಹಾಕಲಾಗಿತ್ತು. ಆದರೆ, ಆ ಶಾಮಿಯಾನದಲ್ಲಿ ಒಂದಷ್ಟು ಜನರು ಕೂರುವ ಸ್ಥಳ ವಾತ್ರ ಇತ್ತು, ಆ ಸ್ಥಳವೂ ಭರ್ತಿಯಾಗಿದ್ದ ಕಾರಣ ಮಹಿಳೆಯರು ಊಟ ಪಡೆದು ಬಿಸಿಲಲ್ಲೇ ತಟ್ಟೆ ಹಿಡಿದು ನಿಂತು ಊಟ ವಾಡಿ ಹಸಿವು ನೀಗಿಸಿಕೊಂಡರು. ಕುಡಿಯುವ ನೀರಿನ ವ್ಯವಸ್ಥೆಯೂ ಸರಿ ಇಲ್ಲದೆ ನೀರಿನ ಬಾಟಲಿ ಪಡೆಯಲು ಮುಗಿಬಿದ್ದರು. ನೀರು ನೀಡುತ್ತಿದ್ದ ವಾಹನದ ಸಮೀಪ ಕೈಚಾಚಿ ತಾಮುಂದು ನೀಮುಂದು ಎಂದು ನೀರು ಪಡೆಯಲು ಸಾಹಸಪಟ್ಟರು.

ಕೈ ಮುರಿಯಿತು ಬಾಗಿನ!

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರತಿ ಮಹಿಳೆಗೆ ಸೀರೆ ಸಹಿತವಾಗಿ ಬಾಗಿನ ನೀಡುವುದಾಗಿ ಶಾಸಕ ಇಕ್ಬಾಲ್ ಹುಸೇನ್ ೋಷಣೆ ಮಾಡಿದ್ದರು. ಇದಕ್ಕಾಗಿ 5 ಕೌಂಟರ್ ತೆರೆಯಲಾಗಿತ್ತು. ಆದರೆ, ಸರಿಯಾದ ವ್ಯವಸ್ಥೆ ಇಲ್ಲದ ಕಾರಣ, ಬಾಗಿನ ಪಡೆಯುವ ನೂಕು ನುಗ್ಗಲಿನಲ್ಲಿ ಮಹಿಳೆಯೊಬ್ಬರು ಕೈ ಮುರಿದುಕೊಂಡರೆ, ಮತ್ತೊಬ್ಬರಿಗೆ ಗಾಯಗಳಾಗಿವೆ. ಬಾಗಿನ ನೀಡುವ ವೇಳೆ, ಕ್ರೀಡಾಂಗಣದ ಮೂರು ಬಾಗಿಲುಗಳನ್ನು ಹಾಕಿಸಿ ಸೀರೆ ನೀಡುವ ಕ್ರೀಡಾಂಗಣದ ಕೌಂಟರ್‌ಗೆ ತೆರಳುವ ಒಂದು ಗೇಟ್ ವಾತ್ರ ತೆರೆದ ಕಾರಣ ಸೀರೆ ಪಡೆಯಲು ಮಹಿಳೆಯರು ಗೇಟಿನಲ್ಲಿ ನುಗ್ಗಿದರು. ಈ ವೇಳೆ ರಾಮನಗರ ತಾಲೂಕಿನ ಶ್ಯಾನುಭೋಗನಹಳ್ಳಿ ಗ್ರಾಮದ ಮಹಾಲಕ್ಷ್ಮೀ (45)ಎಂಬ ಮಹಿಳೆ ನೆಲಕ್ಕೆ ಬಿದ್ದು ಕಾಲ್ತುಳಿತ ಉಂಟಾಗಿ ಕೈಗೆ ತೀವ್ರ ಪೆಟ್ಟಾಯಿತು. ನಂತರ ಸಾಕಮ್ಮ ಎಂಬ ಮಹಿಳೆಗೆ ಗಾಯವಾದವು. ಸಮೀಪದಲ್ಲೇ ಇದ್ದ ವೈದ್ಯರು ಆಗಮಿಸಿ ಪ್ರಥಮ ಚಿಕಿತ್ಸೆ ನೀಡಿ ಆಂಬುಲೆನ್ಸ್‌ನಲ್ಲಿ ಜಿಲ್ಲಾಸ್ಪತ್ರೆಗೆ ಗಾಯಾಳು ಮಹಿಳೆಯನ್ನು ಕರೆದೊಯ್ದರು.

ಪೊಲೀಸ್ ಸಿಬ್ಬಂದಿ ಕಡಿಮೆ

ಜಿಲ್ಲಾ ಕ್ರೀಡಾಂಗಣ ತುಂಬುವಷ್ಟು ಮಹಿಳೆಯರು ಕಾರ್ಯಕ್ರಮಕ್ಕೆ ಆಗಮಿಸಿದ್ದರೂ ಪೊಲೀಸರ ಸಂಖ್ಯೆ ಬಹಳ ಕಡಿಮೆ ಇತ್ತು ಎನ್ನಲಾಗಿದೆ. ಇದರಿಂದ ಸೀರೆ ಹಂಚುವ ಸ್ಥಳ, ಗೇಟುಗಳನ್ನು ಬಂದ್ ವಾಡಿದ ಕಾರಣ, ಗೇಟಿನಲ್ಲಿ ಸುರಕ್ಷತೆ ದೃಷ್ಟಿಯಿಂದ ಪೊಲೀಸರು ಮತ್ತು ಮಹಿಳಾ ಪೊಲೀಸರನ್ನು ಹೆಚ್ಚು ನಿಯೋಜನೆ ವಾಡಿ, ನೂಕು ನುಗ್ಗಲು ನಿಯಂತ್ರಿಸಿದ್ದರೆ ಸಮಸ್ಯೆ ಆಗುತ್ತಿರಲಿಲ್ಲ ಎಂಬ ಮಾತುಗಳೂ ಕೇಳಿಬಂದವು.

ಸರಸ್ ಮೇಳಕ್ಕಿಲ್ಲ ಸ್ಪಂದನೆ

ಜಿಲ್ಲಾಡಳಿತ, ಜಿಲಾ ಪಂಚಾಯಿತಿಯಿಂದ ವಿವಿಧ ಇಲಾಖೆಗಳು ಮಹಿಳಾ ದಿನಾಚರಣೆ ಅಂಗವಾಗಿ ಜಿಲ್ಲಾ ಕ್ರೀಡಾಂಗಣದ ಕೆಳಭಾಗದಲ್ಲಿ 3 ದಿನ ಸರಸ್ ಮೇಳ ಆಯೋಜಿಸಿದೆ. ಆದರೆ, ಪ್ರಮುಖವಾಗಿ ಪ್ರಾರಂಭದ ದಿನವೇ ಹೆಚ್ಚಿನ ಮಹಿಳೆಯರು ಬಂದರೂ ಮೇಳದಲ್ಲಿ ಬೆರಳೆಣಿಕೆಯಷ್ಟು ಮಹಿಳೆಯರು ವಾತ್ರ ಕಂಡರು.