ಕಸ ವಿಲೇವಾರಿ ಮಾಡದ ಒರಿಣಾಮ ಕಸದ ರಾಶಿ ಹೆಚ್ಚಾಗಿರುವುದು. 
ಜಿಲ್ಲೆ

ಯಳಂದೂರು ಪಪಂನ 9ನೇ ವಾರ್ಡ್‌ನ ಜನತಾ ಬಡಾವಣೆಯಲ್ಲಿ ಅವ್ಯವಸ್ಥೆ

ಯಳಂದೂರು: ಕಿತ್ತು ಹೋಗಿರುವ ಸಿಸಿ ರಸ್ತೆ… ಕುಡಿಯುವ ನೀರಿನ ನಲ್ಲಿಗಳಲ್ಲಿ ಹುಳ… ಹೂಳು ತುಂಬಿಕೊಂಡು ಗಬ್ಬು ನಾರುತ್ತಿರುವ ಚರಂಡಿ…ಸಮಪರ್ಕವಾಗಿ ಕಸ ವಿಲೇವಾರಿ ಮಾಡದ ಸಿಬ್ಬಂದಿ.. ರೋಗ ಹೆಚ್ಚುತ್ತಿದ್ದರೂ ಅಧಿಕಾರಿಗಳ ನಿರ್ಲಕ್ಷೃ…

ಇದು ಯಾವುದೇ ಗ್ರಾಮೀಣ ಭಾಗದ ಸಮಸ್ಯೆಯಲ್ಲ. ಬದಲಾಗಿ ಪಟ್ಟಣ ಪಂಚಾಯಿತಿಯ 9ನೇ ವಾರ್ಡ್ ವ್ಯಾಪ್ತಿಯ ಜನತಾ ಬಡಾವಣೆಯ ಸ್ಥಿತಿ. 300 ಕ್ಕೂ ಹೆಚ್ಚು ಕುಟುಂಬಗಳಿವೆ. ಇಲ್ಲಿ ಮೂಲ ಸೌಕರ್ಯ ಎಂಬುದು ಮರೀಚಿಕೆ.

ಇಷ್ಟೆಲ್ಲ ಸಮಸ್ಯೆಗಳಿದ್ದರೂ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗಮನ ಹರಿಸುತ್ತಿಲ್ಲ. ಇದರಿಂದ ಸಾಕಷ್ಟು ಜನರಲ್ಲಿ ರೋಗಗಳು ಕಾಣಿಸಿಕೊಳ್ಳ ತೊಡಗಿದೆ. ಈ ಬಡಾವಣೆ ನಿರ್ಮಾಣವಾಗಿ ಮೂರು ದಶಕಗಳೇ ಕಳೆದಿದೆ. ಅಂತೆಯೇ ಸಾಕಷ್ಟು ಸಮಸ್ಯೆಗಳೂ ಇದೆ. ಈ ಬಗ್ಗೆ ಪಟ್ಟಣ ಪಂಚಾಯಿತಿ ಆಡಳಿತ ಮಾತ್ರ ಇತ್ತ ಗಮನ ಹರಿಸುತ್ತಿಲ್ಲ.

ನಲ್ಲಿಗಳಲ್ಲಿ ಹುಳ ಪತ್ತೆ!: ಕೊಳವೆ ಬಾವಿಯಿಂದ ನಲ್ಲಿಗಳಿಗೆ ಸಂಪರ್ಕ ನೀಡಲಾಗಿದ್ದು, ಮನೆಗೆ ಸರಬರಾಜಾಗುವ ಕುಡಿಯುವ ನೀರು ಕಲುಷಿತಗೊಂಡಿದೆ. ಇದ್ದರಿಂದ ಸಾಕಷ್ಟು ಜನರು ಅನಾರೋಗ್ಯಕ್ಕೊಳಗಾಗುತ್ತಿದ್ದಾರೆ. ಶುದ್ಧ ನೀರು ಪೂರೈಕೆ ಮಾಡಬೇಕಾದ ಪಟ್ಟಣ ಪಂಚಾಯಿತಿ ತನಗೂ ಇದಕ್ಕೂ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತಿದೆ. ಅಧಿಕಾರಿಗಳ ಈ ನಡೆಗೆ ಜನರು ತತ್ತರಿಸಿ ಹೋಗಿದ್ದಾರೆ. ಆದರೂ ಕೂಡ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಕ್ಯಾರೆ ಎನ್ನುತ್ತಿಲ್ಲ. ಅನಿವಾರ್ಯವಾಗಿ ಈ ನೀರನ್ನೇ ಕುಡಿಯಬೇಕಾದ ಸ್ಥಿತಿ ಇದೆ ಎಂಬುದು ಬಡಾವಣೆ ನಿವಾಸಿ ಸಾಕಮ್ಮ ಮತ್ತು ಮಹದೇವಮ್ಮ ಅವರ ಅಳಲು.

ಹಲವು ತಿಂಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ಆರೋಗ್ಯಾಧಿಕಾರಿ ಪರಶಿವಪ್ಪ ಅವರು ಗುಂಡ್ಲುಪೇಟೆಯ ಪುರಸಭೆಯಲ್ಲಿ 3 ದಿನ ಹಾಗೂ ಯಳಂದೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 3 ದಿನ ಕೆಲಸ ನಿರ್ವಹಿಸಬೇಕಿದೆ. ಇಲ್ಲಿನ ಪಟ್ಟಣ ಪಂಚಾಯಿತಿಗೆ ನೇಮಕವಾಗಿ ಹಲವು ತಿಂಗಳು ಕಳೆದರೂ ಯಳಂದೂರು ವಾರ್ಡ್‌ಗಳಲ್ಲಿ ಕಸ ವಿಲೇವಾರಿ, ಕುಡಿಯುವ ನೀರು, ಚರಂಡಿ. ಹೀಗೆ ಸಮಸ್ಯೆಗಳನ್ನು ಬಗೆಹರಿಸುವತ್ತ ಮಾತ್ರ ಗಮನಹರಿಸಿಲ್ಲ. ಅಲ್ಲದೆ ಒಂದು ದಿನವೂ ಭೇಟಿ ನೀಡಿಲ್ಲ ಎಂಬುದು ಸ್ಥಳೀಯರ ಆರೋಪ.

ಉಪಯೋಗಕ್ಕೆ ಬಾರದ ಶೌಚಾಲಯL ಪಟ್ಟಣದ 9ನೇ ವಾರ್ಡ್ ವ್ಯಾಪ್ತಿಯಲ್ಲಿ ಸಾಕಷ್ಟು ಚಿಕ್ಕ ಮನೆಗಳಿದ್ದು, ಈ ಪೈಕಿ ಕೆಲವು ಕುಟುಂಬ ಜಾಗದ ಕೊರತೆಯಿಂದ ಶೌಚಗೃಹ ನಿರ್ಮಿಸಿಲ್ಲ. ಪರಿಣಾಮ ಸಾಮೂಹಿಕ ಶೌಚಗೃಹದ ಮೊರೆ ಹೋಗಿದೆ. ಈ ನಡುವೆ ಸಾಮೂಹಿಕ ಶೌಚಗೃಹದಲ್ಲಿ ಅಶುಚಿತ್ವ ತಾಂಡವವಾ ಡುತ್ತಿದೆ. ಕಟ್ಟಡದ ಸುತ್ತ ಗಿಡಗಂಟಿ ಬೆಳೆದು ನಿಂತಿದ್ದು, ಇಡೀ ವಾತಾವರಣ ಕಲುಷಿತಗೊಂಡಿದೆ. ಪರಿಣಾಮ ಸಾಂಕ್ರಾಮಿಕ ರೋಗ ಭೀತಿ ಎದುರಾಗಿದೆ.

ಬಳೆಪೇಟೆಗಿಲ್ಲ ಕಾವೇರಿ ನೀರು: ಪಟ್ಟಣದ ಕೆ.ಕೆ.ರಸ್ತೆ ಬಳಿಯ ಬಡಾವಣೆ, ಕುಂಬಾರಗುಂಡಿ ಹಾಗೂ ಗೌತಮ್ ಬಡಾವಣೆ ಹೊರತುಪಡಿಸಿ ಉಳಿದಂತೆ ಬಳೆಪೇಟೆಯ 3 ವಾರ್ಡ್‌ಗಳ ವ್ಯಾಪ್ತಿಗೆ ಕಾವೇರಿ ನೀರು ಪೂರೈಕೆಯಾಗುತ್ತಿಲ್ಲ. ಕೆಲವು ಸಂದರ್ಭಗಳಲ್ಲಿ ಪಟ್ಟಣದ ನಿವಾಸಿಗಳು ಕುಡಿಯುವ ನೀರಿನ ಸಮಸ್ಯೆ ಎದುರಿಸಬೇಕಾಗಿದೆ.

ಪಟ್ಟಣ ಪಂಚಾಯಿತಿ ವ್ಯಾಪ್ತಿಯ 9 ನೇ ವಾರ್ಡ್‌ನ ನಲ್ಲಿಗಳಲ್ಲಿ ಹುಳುಗಳು ಬರುತ್ತಿರುವ ಕುರಿತು ಈ ಹಿಂದೆಯೇ ಭೇಟಿ ನೀಡಿ ಪರಿಶೀಲಿಸಲಾಗಿತ್ತು. ಮನೆಗಳಲ್ಲಿರುವ ನೀರಿನ ಸಂಪ್‌ಗಳ ಮೂಲಕ ಹುಳುಗಳು ಬಂದಿರುವ ಸಾಧ್ಯತೆ ಇದ್ದು, ಈ ಬಗ್ಗೆ ಮತ್ತೊಮ್ಮೆ ಭೇಟಿ ನೀಡಿ ಪರಿಶೀಲಿಸಲಾಗುವುದು. ಮೂರ‌್ನಾಲ್ಕು ದಿನಗಳಿಂದ ಪೌರಕಾರ್ಮಿಕ ಬಡಾವಣೆಯಲ್ಲಿ ಹಬ್ಬವಿದ್ದ ಹಿನ್ನೆಲೆಯಲ್ಲಿ ಸ್ವಚ್ಛತೆ ಮಾಡುವ ಸಿಬ್ಬಂದಿ ಗೈರಾಗಿದ್ದರು. ಹಾಗಾಗಿ ಕಸ ವಿಲೇವಾರಿ ಮಾಡಿರಲಿಲ್ಲ. ಈ ಬಗ್ಗೆ ಗಮನ ನೀಡಿ ವಿಲೇವಾರಿ ಮಾಡಲಾಗುವುದು. ಸಮರ್ಪವಾಗಿ ಕೆಲಸ ಮಾಡದ ಆರೋಪದ ಮೇರೆಗೆ ಆರೋಗ್ಯಾಧಿಕಾರಿಗೆ ಈಗಾಗಲೇ ನೋಟಿಸ್ ನೀಡಲಾಗಿದೆ.
ಮಹೇಶ್ ಕುಮಾರ್ ಮುಖ್ಯಾಧಿಕಾರಿ, ಪಟ್ಟಣ ಪಂಚಾಯಿತಿ, ಯಳಂದೂರು

ಪಟ್ಟಣ ಪಂಚಾಯಿತಿ ವ್ಯಾಪ್ತಿಯ 9ನೇ ವಾರ್ಡ್ ವ್ಯಾಪ್ತಿಯ ಜನತಾ ಬಡಾವಣೆಯಲ್ಲಿ ಹಲವು ದಿನಗಳಿಂದ ಕುಡಿಯುವ ನೀರಿನ ನಲ್ಲಿಗಳಲ್ಲಿ ಹುಳುಗಳು ಪತ್ತೆಯಾಗಿದೆ. ಅಲ್ಲದೆ ಕಸ ಹಾಗೂ ಚರಂಡಿಗಳಲ್ಲಿ ಹೂಳು ತೆಗೆಯದ ಪರಿಣಾಮ ಅಶುಚಿತ್ವ ತಾಂಡವವಾಡುತ್ತಿದೆ. ಇದರಿಂದ ರೋಗಗಳು ಬರುವ ಸಾಧ್ಯತೆ ಹೆಚ್ಚಿದೆ. ಸಂಬಂಧಪಟ್ಟ ಅಧಿಕಾರಿಗಳು ಬಡಾವಣೆಗೆ ಭೇಟಿ ನೀಡಿ ಮೂಲ ಸೌಕರ್ಯ ಕಲ್ಪಿಸಬೇಕು.
ಮುತ್ತಯ್ಯ ಜನತಾ ಬಡಾವಣೆ ನಿವಾಸಿ