ಮೈಸೂರು: 2023-24ನೇ ಶೈಕ್ಷಣಿಕ ಸಾಲಿನ ಮೈಸೂರು ವಿಶ್ವವಿದ್ಯಾಲಯ ಮಟ್ಟದ ಅಂತರ ಕಾಲೇಜು ‘ಸಾಹಿತ್ಯ ಮತ್ತು ಸಾಂಸ್ಕೃತಿಕ ಸ್ಪರ್ಧೆ’ಯ ಸಮಾರೋಪ ಸಮಾರಂಭ ಗದ್ದಲದ ಗೂಡಾಗಿ ಮಾರ್ಪಟ್ಟಿತು.
ವಿವಿಧ ಸ್ಪರ್ಧೆಗಳ ಬಹುಮಾನ ವಿತರಣೆ ವೇಳೆ ಆಯೋಜಕರು ಮತ್ತು ಕೆಲ ಸ್ಪರ್ಧಿಗಳ ನಡುವೆ ಫಲಿತಾಂಶಕ್ಕೆ ಸಂಬಂಧಿಸಿದಂತೆ ವಾಗ್ವಾದ ನಡೆಯಿತು. ಜಾನಪದನೃತ್ಯ ಸ್ಪರ್ಧೆಯ ಫಲಿತಾಂಶ ಘೋಷಣೆ ವೇಳೆ ಗೊಂಗಲ ಉಂಟಾಯಿತು.
ಮಹಾರಾಜ ಕಾಲೇಜಿನ ಸುದರ್ಶನ್ ಮತ್ತು ತಂಡಕ್ಕೆ ಪ್ರಥಮ ಹಾಗೂ ಮಾನಸಗಂಗೋತ್ರಿಯ ಅಮಿತ್ ಮತ್ತು ತಂಡಕ್ಕೆ ದ್ವಿತೀಯ ಬಹುಮಾನ ಘೋಷಣೆ ಮಾಡಲಾಯಿತು. ಈ ವೇಳೆ ಫಲಿತಾಂಶಕ್ಕೆ ಅಮಿತ್ ಮತ್ತು ತಂಡ ಆಕ್ಷೇಪ ವ್ಯಕ್ತ ಪಡಿಸಿತು. ‘ನಮ್ಮ ತಂಡ ಉತ್ತಮವಾಗಿ ನೃತ್ಯ ಪ್ರದರ್ಶಿಸಿದ್ದರೂ ನಮಗೆ ಫಲಿತಾಂಶದಲ್ಲಿ ಮೋಸ ಮಾಡಲಾಗಿದೆ. ಕಳೆದ ವರ್ಷವೂ ನಮಗೆ ಮೋಸ ಆಗಿದೆ’ ಎಂದು ಆರೋಪಿಸಿ ಆಯೋಜಕರ ವಿರುದ್ಧ ವಾಗ್ವಾದಕ್ಕೆ ಮುಂದಾದರು. ಪರಿಣಾಮ ಸಮಾರಂಭದಲ್ಲಿ ಗದ್ದಲ ಉಂಟಾಯಿತು. ಆಯೋಜಕರು ಎಷ್ಟೇ ಸಮಾಧಾನ ಮಾಡಿದರೂ ಮಾನಸಗಂಗೋತ್ರಿಯ ಜಾನಪದ ನೃತ್ಯತಂಡದ ಕಲಾವಿದರು ವಾಗ್ವಾದ ಮುಂದುವರೆಸಿದರು. ಕಡೆಗೆ ಗದ್ದಲದ ನಡುವೆಯೇ ಬಹುಮಾನ ವಿತರಣೆ ಮುಂದುವರೆಯಿತು.
‘ಫಲಿತಾಂಶದಲ್ಲಿ ಯಾವುದೇ ಮೋಸ ಆಗಿಲ್ಲ. ತೀರ್ಪುಗಾರರು ಉತ್ತಮವಾದ ತೀರ್ಪು ನೀಡಿದ್ದಾರೆ. ಆದರೂ, ಕೆಲಸವರು ಕಾರ್ಯಕ್ರಮದಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಕಳೆದ ಬಾರಿಯೂ ಇದೇ ರೀತಿ ಮಾಡಿದ್ದರು. ಕೆಲವರ ಕುಮ್ಮಕ್ಕಿನಿಂದ ಹೀಗೆ ನಡೆಯುತ್ತಿದೆ. ಮುಂದಿನ ವರ್ಷದಿಂದ ಜಾನಪದ ನೃತ್ಯ ಸ್ಪರ್ಧೆಯನ್ನು ಕೈ ಬಿಡಲಾಗುತ್ತದೆ’ ಎಂದು ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯದ ನಿರ್ದೇಶಕ ಪ್ರೊ.ಬಿ.ಎಸ್.ಚಂದ್ರಶೇಖರ ಅವರು ವೇದಿಕೆ ಮೇಲೆಯೇ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದರು.