filter: 0; fileterIntensity: 0.0; filterMask: 0; module: a; hw-remosaic: 0; touch: (0.38759688, 0.38759688); modeInfo: ; sceneMode: Night; cct_value: 0; AI_Scene: (-1, -1); aec_lux: 60.479496; hist255: 0.0; hist252~255: 0.0; hist0~15: 0.0; 
ಜಿಲ್ಲೆ

ಅವ್ಯವಸ್ಥೆಯ ಆಗರವಾಗಿದೆ ಅಂಗನವಾಡಿ ಕೇಂದ್ರ

ಮುದಗಲ್: ಕನ್ನಾಪುರಹಟ್ಟಿಯಲ್ಲಿ ಅಂಗನವಾಡಿ ಕೇಂದ್ರಕ್ಕೆ ಹೋಗಲು ರಸ್ತೆ ಇಲ್ಲದೆ ಮಕ್ಕಳು ಪರದಾಡುವಂತಾಗಿದೆ.

ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಅಂಗನವಾಡಿ ಕೇಂದ್ರ ನಿರ್ಮಿಸಲಾಗಿದೆ. ಆದರೆ, ಕಟ್ಟಡದ ಮುಂಭಾಗದಲ್ಲಿರುವ ಹಳೆಯ ಅಡುಗೆ ಕೋಣೆ ತೆರವು ಮಾಡದಿರುವುದು ಸಮಸ್ಯೆಗೆ ಕಾರಣವಾಗಿದೆ. ಅಡುಗೆ ಕೋಣೆಯಿಂದಾಗಿ ಅಂಗನವಾಡಿ ಕೇಂದ್ರಕ್ಕೆ ತೆರಳಲು ಸಾಧ್ಯವಾಗದಂತಹ ಪರಿಸ್ಥಿತಿ ಇದೆ.
ಅಂಗನವಾಡಿ ಕೇಂದ್ರದ ಮುಂದೆ ಚರಂಡಿ ಕೊಳಚೆ ಹರಿಯುತ್ತಿದ್ದು, ಗೋಡೆಗೆ ತಿಪ್ಪೆಗುಂಡಿ ಹಾಕಲಾಗಿದೆ. ಇದರಿಂದಾಗಿ ಅಂಗನವಾಡಿ ಕೇಂದ್ರಕ್ಕೆ ಬರುವ ಮಕ್ಕಳು ರೋಗ ಭೀತಿ ಎದುರಿಸುವಂತಾಗಿದೆ. ಹೈಟೆಕ್ ಹಾಗೂ ಮಾದರಿ ಅಂಗನವಾಡಿ ಕೇಂದ್ರ ಎಂದು ಹೇಳಲಾಗುವ ಈ ಕೇಂದ್ರದಲ್ಲಿ ಸರಿಯಾಗಿ ಬಾಗಿಲು, ಕಿಟಕಿ ಅಳವಡಿಸಿಲ್ಲ. ವಿದ್ಯುತ್, ಕುಡಿವ ನೀರಿನ ವ್ಯವಸ್ಥೆ ಕಲ್ಪಿಸಿಲ್ಲ. ಕಿಟಕಿಗಳಿಗೆ ಚಿಲಕ ಇಲ್ಲದೆ ತಂತಿಯಿಂದ ಕಟ್ಟಲಾಗಿದೆ. ಸಾವಿರಾರು ರೂ. ಮೌಲ್ಯದ ಆಹಾರ, ಬೆಲೆ ಬಾಳುವ ವಸ್ತುಗಳನ್ನು ಕೇಂದ್ರದಲ್ಲಿ ಇಡಲಾಗಿದೆ. ಆದರೆ, ಅಂಗನವಾಡಿ ಕೇಂದ್ರದ ಬಾಗಿಲು, ಕಿಟಕಿಗಳಿಗೆ ಭದ್ರತೆ ಇಲ್ಲದಂತಾಗಿದೆ.

ಅಂಗನವಾಡಿ ಬಾಗಿಲು ಮುಂಭಾಗದಲ್ಲೇ ಜನರು ಮಲ-ಮೂತ್ರ ವಿಸರ್ಜಿಸಿ ಮಲೀನಗೊಳಿಸುತ್ತಿದ್ದಾರೆ. ಇದರಿಂದ ಅಂಗನವಾಡಿ ಕೇಂದ್ರಕ್ಕೆ ಮಕ್ಕಳನ್ನು ಕಳಿಸಲು ಪಾಲಕರು ಹಿಂದೇಟು ಹಾಕುತಿದ್ದಾರೆ. ಅಂಗನವಾಡಿ ಮುಂಬಾಗದಲ್ಲಿ ಇರುವ ಹಳೆಯ ಕಟ್ಟಡ ತೆರವುಗೊಳಿಸಬೇಕು. ಅಂಗನವಾಡಿ ಕೇಂದ್ರಕ್ಕೆ ಕಾಂಪೌಂಡ್ ನಿರ್ಮಿಸಿ ವಿದ್ಯುತ್ ಮತ್ತು ಕುಡಿವ ನೀರಿನ ವ್ಯವಸ್ಥೆ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.