ಜಿಲ್ಲೆ

ಭಕ್ತಿಗೆ ಅಡ್ಡ ಬಂದ್ರೆ ಶಕ್ತಿ ತೋರಿಸ್ತೇವೆ: ಚಂದು ಪಾಟೀಲ್

ರಮೇಶ ಮೇಳಕುಂದಾ

ಕಲಬುರಗಿ: ಶತಮಾನಗಳ ಕಳಂಕ ದೂರಾಗಿ ರಾಷ್ಟ್ರ ಮಂದಿರ, ರಾಮಜನ್ಮಭೂಮಿಯಲ್ಲಿ ಬಾಲರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆಯ ಪುಣ್ಯ ಪರ್ವದಲ್ಲಿ ದೇಶದೆಲ್ಲೆಡೆ ರಾಮೋತ್ಸವ ಆಚರಿಸುತ್ತಿದ್ದು, ಕಲಬುರಗಿಯಲ್ಲಿ ಅದಕ್ಕೆ ತಡೆ ಒಡ್ಡುವ ಪ್ರಯತ್ನಗಳು ನಡೆದಿವೆ. ಸರ್ಕಾರ ಭಕ್ತರ ಭಾವನೆಗಳ ಮಧ್ಯೆ ಚಲ್ಲಾಟವಾಡಬಾರದು ಭಕ್ತಿಯ ಮಧ್ಯೆ ಬಂದರೆ ನಮ್ಮ ಶಕ್ತಿ ತೋರಿಸಬೇಕಾಗುತ್ತದೆ ಎಂದು ಬಿಜೆಪಿ ನಗರಾಧ್ಯಕ್ಷ ಚಂದು ಪಾಟೀಲ್ ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮಮಂದಿರ ಉದ್ಘಾಟನೆ ಬಿಜೆಪಿ ಕಾರ್ಯಕ್ರಮವಲ್ಲ, ರಾಮಭಕ್ತರ ಕಾರ್ಯಕ್ರಮ. ಯಾರೂ ಬೇಕಾದರೂ ಉತ್ಸವ ಮಾಡಬಹುದು. ಅದಕ್ಕೆ ತಡೆ ಒಡ್ಡುವುದು, ಕಿರಿಕುಳ ನೀಡುವುದು ಮಾಡಿದರೆ ಬಿಜೆಪಿಯಿಂದ ತಕ್ಕ ಉತ್ತರ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕಲಬುರಗಿ ಜಿಲ್ಲೆಯಲ್ಲಿ ಬಾಲರಾಮೋತ್ಸವಕ್ಕೆ ತಡೆ ಒಡ್ಡುತ್ತಿರುವ, ತೊಂದರೆ ನೀಡುತ್ತಿರುವ ರಾಜ್ಯ ಸರ್ಕಾರ, ಜಿಲ್ಲಾಡಳಿತ ಕ್ರಮ ವಿರೋಧಿಸಿ ಜಿಲ್ಲಾ ಬಿಜೆಪಿಯಿಂದ ಹಮ್ಮಿಕೊಂಡ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಲಾಯಿತು.

ರಾಮೋತ್ಸವವನ್ನು ಜಿಲ್ಲೆಯ ಎಲ್ಲ ರಾಮಭಕ್ತರು ವೈಭವದಿಂದ ನಡೆಸಬೇಕು, ಯಾವುದೇ ತಡೆಗಳಾದರೂ ಪಕ್ಷ ರಾಮಭಕ್ತರ ಜೊತೆಗೆ ನಿಲ್ಲಲಿದೆ ಎಂದು ಹೇಳಲಾಯಿತು.

ಪಕ್ಷದ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ, ಸಂಸದ ಡಾ.ಉಮೇಶ್ ಜಾಧವ್, ಶಾಸಕ ಬಸವರಾಜ ಮತ್ತಿಮಡು, ವಿಧಾನ ಪರಿಷತ್ ಸದಸ್ಯರಾದ ಶಶೀಲ್ ನಮೋಶಿ, ಬಿ.ಜಿ. ಪಾಟೀಲ್, ಪ್ರಮುಖರಾದ ಮಾಲೀಕಯ್ಯ ಗುತ್ತೇದಾರ, ರಾಜಕುಮಾರ ಪಾಟೀಲ್ ತೆಲ್ಕೂರ್, ದತ್ತಾತ್ರೇಯ ಪಾಟೀಲ್ ರೇವೂರ, ಅಮರಾನಾಥ ಪಾಟೀಲ್, ಹರ್ಷವರ್ಧನ್ ಗುತ್ತೇದಾರ, ಶಿವಕಾಂತ್ ಮಹಾಜನ್, ಸಂತೋಷ ಹಾದಿಮನಿ, ಬಾಬು ಹಾಗರಗುಂಡಗಿ ಉಪಸ್ಥಿತರಿದ್ದರು.