ಗಂಗೊಳ್ಳಿ: ವಿವಿಧ ದೇವಾಲಯಗಳಲ್ಲಿ ಮಹಾಶಿವರಾತ್ರಿ ಮಹೋತ್ಸವವನ್ನು ಬುಧವಾರ ವಿಜೃಂಭಣೆಯಿಂದ ಆಚರಿಸಲಾಯಿತು. ಶಿವ ದೇವಾಲಯಗಳಲ್ಲಿ ಭಕ್ತಸಾಗರ ಹೆಚ್ಚಿತ್ತು. ಪುರಾಣ ಪ್ರಸಿದ್ಧ ಗುಜ್ಜಾಡಿ ಗ್ರಾಮದ ವಿಶಿಷ್ಟ ಗುಹಾಂತರ ಶ್ರೀ ಗುಹೇಶ್ವರ ದೇವಾಲಯದಲ್ಲಿ ಈ ವರ್ಷ ಕೂಡ ಜನರಿಗೆ ಗುಹೆ ಪ್ರವೇಶಿಸಿ ಪೂಜೆ ಸಲ್ಲಿಸುವ ಅವಕಾಶ ಕಲ್ಪಿಸಲಾಗಿಲ್ಲ. ಆದರೂ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಬೆಳಗ್ಗಿನಿಂದಲೇ ಸರತಿ ಸಾಲಿನಲ್ಲಿ ನಿಂತು ಶ್ರೀ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು.
ಬೆಳಗ್ಗೆ ಶ್ರೀ ಗಣಪತಿ ದೇವರಿಗೆ ಗಣಪತಿಹೋಮ, ಶ್ರೀ ಗುಹೇಶ್ವರ ಭಜನಾ ಮಂಡಳಿ ಕೊಡಪಾಡಿ ಹಾಗೂ ವಿವಿಧ ಭಜನಾ ಮಂಡಳಿಗಳಿಂದ ಭಗವದ್ಗೀತಾ ಪಠಣ, ವಿಷ್ಣು ಸಹಸ್ರನಾಮ ಪಠಣ ಮತ್ತು ಭಜನಾ ಕಾರ್ಯಕ್ರಮ ನಡೆಯಿತು. ಶ್ರೀ ದೇವರಿಗೆ ಶತರುದ್ರಾಭಿಷೇಕ, ವಿಶೇಷ ಪೂಜೆಗಳು ನೆರವೇರಿತು. ಅರ್ಚಕ ವೃಂದ, ದೇವಸ್ಥಾನ ವ್ಯವಸ್ಥಾಪನಾ ಸಮಿತಿ, ದೇವಸ್ಥಾನ ಅಭಿವೃದ್ಧಿ ಸಮಿತಿ, ಸ್ಥಳೀಯ ಸವ್ಯಸಾಚಿ ಯುವಕ ಮಂಡಲ, ಭಾರತ್ ಸಂಘ, ತಾಯಿ ಮಾರಿಕಾಂಬಾ ಮಹಿಳಾ ಮಂಡಳಿ, ಗುಹೇಶ್ವರ ಯಕ್ಷಗಾನ ಸಂಘದ ಸದಸ್ಯರು ಭಕ್ತರ ಅನುಕೂಲಕ್ಕೆ ಅಗತ್ಯ ವ್ಯವಸ್ಥೆ ಏರ್ಪಡಿಸಿದ್ದರು.
ಮರವಂತೆ ಕಡಲತೀರದ ಮಾರಸ್ವಾಮಿಯಲ್ಲಿನ ಗಂಗಾಧರೇಶ್ವರ ದೇವಸ್ಥಾನ, ಗಂಗೊಳ್ಳಿ ಶ್ರೀ ವೀರೇಶ್ವರ ದೇವಸ್ಥಾನ, ಶ್ರೀ ಇಂದುಧರ ದೇವಸ್ಥಾನ, ಮೇಲ್‌ಗಂಗೊಳ್ಳಿ ಶ್ರೀ ಬಸವೇಶ್ವರ ದೇವಸ್ಥಾನ, ಗುಜ್ಜಾಡಿ ನಾಯಕವಾಡಿ ಶ್ರೀ ಸಂಗಮೇಶ್ವರ ದೇವಸ್ಥಾನ, ಮೊವಾಡಿ ಗ್ರಾಮದ ಶ್ರೀ ಮಾಣಿಸಿದ್ಧಲಿಂಗೇಶ್ವರ ದೇವಸ್ಥಾನ, ಶ್ರೀ ಮಾಣಿಕೊಳಲು ದೇವಸ್ಥಾನ ಸೇರಿದಂತೆ ಅನೇಕ ಶಿವ ದೇವಾಲಯಗಳಿಗೆ ಭಕ್ತರು ಭೇಟಿ ನೀಡಿ ವಿವಿಧ ಅರ್ಚನೆ, ಪೂಜೆಗಳನ್ನು ಸಲ್ಲಿಸಿ ಪ್ರಸಾದ ಸ್ವೀಕರಿಸಿದರು. ಶಿವರಾತ್ರಿ ಪ್ರಯುಕ್ತ ದೇವಳಗಳಲ್ಲಿ ಬಿಲ್ವಪತ್ರ ಅರ್ಚನೆ, ಶತರುದ್ರಾಭಿಷೇಕ, ವಿಶೇಷ ಪೂಜೆ, ಮಹಾಪೂಜೆ, ಅಖಂಡ ಭಜನಾ ಮಹೋತ್ಸವ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಭಕ್ತರ ಅನುಕೂಲಕ್ಕೆ ದೇವಾಲಯಗಳ ಆಡಳಿತ ಮಂಡಳಿ ಸಕಲ ಸಿದ್ಧತೆಗಳನ್ನು ಮಾಡಿತ್ತು.