ಜಿಲ್ಲೆ

ಸಾಧು-ಸಂತರನ್ನು ಕೊಡುಗೆಯಾಗಿ ನೀಡಿದ ರಾಣೆಬೆನ್ನೂರ; ಚನ್ನಮಲ್ಲಿಕಾರ್ಜುನ ಸ್ವಾಮೀಜಿ

Haveri - Kariyappa Aralikatti

ರಾಣೆಬೆನ್ನೂರ: ರಾಣೆಬೆನ್ನೂರ ತಾಲೂಕು ಕೇವಲ ವಾಣಿಜ್ಯ ಕ್ಷೇತ್ರಕ್ಕೆ ಸಿಮಿತವಾಗದೆ ಆಧ್ಯಾತ್ಮಿಕ ಕೇಂದ್ರದ ತವರೂರಾಗಿದೆ. ನಾಡಿನ ಧಾರ್ಮಿಕ ಕ್ಷೇತ್ರಕ್ಕೆ ಹಲವಾರು ಸಾಧು-ಸಂತರನ್ನು ಕೊಡುಗೆಯಾಗಿ ನೀಡಿದ ಹೆಗ್ಗಳಿಕೆ ಹೊಂದಿದೆ ಎಂದು ಹೊನ್ನಾಳಿ ಹಿರೇಕಲ್ಮಠದ ಡಾ. ಒಡೆಯರ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯರು ಹೇಳಿದರು.
ಇಲ್ಲಿನ ಮೃತ್ಯುಂಜಯ ನಗರದ ಚನ್ನೇಶ್ವರ ಮಠದ ಜಗದ್ಗುರು ವಾಗೀಶ ಪಂಡಿತರಾಧ್ಯ ಸಮುದಾಯ ಭವನದಲ್ಲಿ ಸ್ಥಳೀಯ ಹೊನ್ನಾಳಿ ಸಂಸ್ಕೃತಿ ಪ್ರಸಾರ ಪರಿಷತ್ ವತಿಯಿಂದ ಬುಧವಾರ ಏರ್ಪಡಿಸಿದ್ದ ಅಧಿಕ ಶ್ರಾವಣ ಮಾಸದ ಜ್ಞಾನವಾಹಿನಿ ಮಾಸಿಕ ಧರ್ಮಸಭೆ ಹಾಗೂ ತಾಲೂಕು ಶ್ರೀ ವೀರಶೈವ ಜಂಗಮ ಪುರೋಹಿತ ಮತ್ತು ಅರ್ಚಕರ ಸಂಘದ ದ್ವಿತೀಯ ವಾರ್ಷಿಕೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಅಧಿಕ ಮಾಸದಲ್ಲಿ ಸಾಧು-ಸಂತರ ದೇವರ ದರ್ಶನವನ್ನು ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ. ಜ್ಞಾನದ ಹಸಿವು ಉಳಿದೆಲ್ಲ ಹಸಿವುಗಳಿಗಿಂತ ಮಿಗಿಲಾಗಬೇಕು. ಮನುಷ್ಯನ ಬದುಕು ಇತರ ಪ್ರಾಣಿಗಳಿಂದ ಬೇರೆಯಾಗಿ ಸಾರ್ಥಕವಾಗಬೇಕಾದರೆ ಸಾಧನೆ ಆಗಬೇಕು. ಆಧ್ಯಾತ್ಮ ನನ್ನನ್ನು ನಾನು ಅರಿತುಕೊಳ್ಳುವ ಉತ್ತಮ ಮತ್ತು ಸುಲಭ ಮಾರ್ಗವಾಗಿದೆ ಎಂದರು.
ಭಗವಾನ ಪರಮೇಶ್ವರನ ಅಧಿಕ ಮಾಸದ ವ್ರತಾಚರಣೆ ಕುರಿತು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ತಾಲೂಕ ಘಟಕ ಅಧ್ಯಕ್ಷ ಪಿ.ವಿ. ಮಠದ ಉಪನ್ಯಾಸ ನೀಡಿದರು.
ಮಠದ ನೂತನ ಕಾರ್ಯದರ್ಶಿ ಅಮೃತಗೌಡ ಹಿರೇಮಠ, ಜಗದೀಶ ಮಳಿಮಠ, ಕಸ್ತೂರಿ ಪಾಟೀಲ, ಬಿ.ಎಸ್. ಪಟ್ಟಣಶೆಟ್ಟಿ, ಶಿವಮೂರ್ತಯ್ಯ ಆರಾಧ್ಯಮಠ, ಭಾಗ್ಯಶ್ರೀ ಗುಂಡಗಟ್ಟಿ, ಶಕುಂತಲಾ ಪಾಟೀಲ, ಶಿವರಾಜ ಪಾಟೀಲ, ರುದ್ರಗೌಡ ಪಾಟೀಲ, ವೀರಶೈವ ಜಂಗಮ ಪುರೋಹಿತ ಮತ್ತು ಅರ್ಚಕರ ಸಂಘದ ಅಧ್ಯಕ್ಷ ರಾಚಯ್ಯ ಹಿರೇಮಠ ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.