ವಿಜಯವಾಣಿ ಸುದ್ದಿಜಾಲ ಚನ್ನರಾಯಪಟ್ಟಣ
ಸರ್ಕಾರದ ಆದೇಶದಂತೆ ಎಲ್ಲ ಶಾಲೆಗಳಲ್ಲೂ ಕ್ಲಸ್ಟರ್ ಹಂತದಲ್ಲಿ ಪ್ರತಿಭಾ ಕಾರಂಜಿಯನ್ನು ನಡೆಸುವುದರಿಂದ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಲು ಸಹಕಾರಿಯಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸುಮಾ ಹೇಳಿದರು.
ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾ ಕಾರಂಜಿ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಪ್ರಶಸ್ತಿ ಪತ್ರ ವಿತರಿಸಿ ಮಾತನಾಡಿದರು.
ಶಾಲಾ ಹಂತದಲ್ಲಿ ಮಕ್ಕಳಿಗೆ ಪಠ್ಯೇತರ ಚಟುವಟಿಕೆಗಳ ಜತೆಗೆ ವರ್ಷಕೊಮ್ಮೆ ಪ್ರತಿಭಾ ಕಾರಂಜಿ ವೇದಿಕೆಯನ್ನು ರೂಪಿಸುವುದರಿಂದ ಅವರಲ್ಲಿರುವ ಪ್ರತಿಭೆ ಅನಾವರಣಗೊಳಿಸಲು ಸಹಕಾರಿಯಾಗಲಿದೆ ಎಂದರು.
ಗ್ರಾಪಂ ಅಧ್ಯಕ್ಷ ಮಾರೇಗೌಡ ಮಾತನಾಡಿ, ಮಕ್ಕಳ ವಿದ್ಯಾಭ್ಯಾಸಕ್ಕೆ ಸರ್ಕಾರ ಹಲವು ಸವಲತ್ತುಗಳನ್ನು ನೀಡುತ್ತಿದೆ. ಪಾಲಕರು ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳಿಸಿ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಿ ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸದಸ್ಯರಾದ ಸೋಮಶೇಖರ್ ನಾಗೇಶ್, ಗಂಗಾಧರ್, ಸಿಆರ್‌ಪಿ, ಲೋಕೇಶ್, ಶಾಲಾ ಮುಖ್ಯ ಶಿಕ್ಷಕ ಮದ್ದೂರಪ್ಪ, ಸಹ ಶಿಕ್ಷಕರಾದ ಅಂಜನಪ, ಶೈಲಾ, ನಗಿನ ತಾಜ್ ಇದ್ದರು.