ಚನ್ನರಾಯಪಟ್ಟಣ: ಚನ್ನರಾಯಪಟ್ಟಣ ನಾಡಕಚೇರಿ ಆವರಣದಲ್ಲಿ ಭೂ ಸ್ವಾಧಿನ ವಿರೋಧಿ ಹೋರಾಟ ಸಮಿತಿ ನಡೆಸುತ್ತಿರುವ ಹೋರಾಟ 3 ತಿಂಗಳು ಕಳೆದರೂ ಸರ್ಕಾರ ಮೌನವಹಿಸಿರುವುದು ಇಡೀ ಕೃಷಿಕ ಸಮಾಜವನ್ನು ಕೆರಳುವಂತೆ ಮಾಡಿದೆ ಎಂದು ಹೋರಾಟ ಸಮಿತಿ ಅಶ್ವತ್ಥಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಶುಕ್ರವಾರ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹೋರಾಟ 75ನೇ ಪೂರೈಸಿದ ಹಿನ್ನೆಲೆಯಲ್ಲಿ ದೇವನಹಳ್ಳಿ ಬಂದ್ ಕರೆ ನೀಡಲಾಗಿತ್ತು. ಅಲ್ಲಿಗೆ ಭೇಟಿ ನೀಡಿದ್ದ ಸಚಿವ ಎಂಟಿಬಿ ನಾಗರಾಜ್ ವಾರದೊಳಗೆ ಸಿಎಂ ಜತೆ ಮಾತನಾಡಿ ರೈತರ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರು. ಆದರೆ ಇಲ್ಲಿಯವರೆಗೆ ಅತ್ತ ಕಡೆಯಿಂದ ಯಾವುದೇ ಸದ್ದಿಲ್ಲ ಎಂದು ದೂರಿದರು.
3 ತಿಂಗಳಿನಿಂದ ಶಾಂತಿಯುತ ಹೋರಾಟದ ಮೂಲಕದ ಸರ್ಕಾರದ ಗಮನ ಸೆಳೆದರೂ ಯಾವುದೇ ಪ್ರಯೋಜವಾಗಿಲ್ಲ. ಹೋರಾಟ ವಿಲಗೊಳಿಸಲು ಸರ್ಕಾರವೇ ಹಿಂಬಾಗಿಲ ಪ್ರಯತ್ನ ನಡೆಸುತ್ತಿದೆ ಎಂದು ಆರೋಪಿಸಿದರು.
ದೇವನಹಳ್ಳಿ ತಾಲೂಕಿನಲ್ಲಿ ಇದುವರೆಗೆ ನಡೆದ ಅನೇಕ ಹೋರಾಟಗಳ ಪೈಕಿ ಇಷ್ಟು ದೀರ್ಕಾಲ ನಡೆಯುತ್ತಿರುವ ಹೋರಾಟವಾಗಿದೆ, ಅನೇಕ ಸಂ&ಸಂಸ್ಥೆಗಳು, ರಾಜಕೀಯ ಮುಖಂಡರು ಬೆಂಬಲ ನೀಡಿದ್ದಾರೆ. ಆದರೂ ಸರ್ಕಾರ ಜಿದ್ದಿಗೆ ಬಿದ್ದಂತೆ ಕೃಷಿ ಭೂಮಿ ಸ್ವಾಧಿನಕ್ಕೆ ಮುಂದಾಗಿದೆ ಎಂದು ರೈತ ಮುಖಂಡ ನಂಜಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಕೃಷಿ ಭೂಮಿ ಉಳಿಯಬೇಕು: ಚನ್ನರಾಯಾಪಟ್ಟಣ ಹೋಬಳಿಗಳ ಸಾವಿರಾರು ಎಕರೆ ಫಲವತ್ತಾದ ಕೃಷಿ ಭೂಮಿಯನ್ನು ವಶಪಡಿಸಿಕೊಂಡು ರೈತರನ್ನು ಬೀದಿಗೆ ತಳ್ಳುವ ಹುನ್ನಾರ ನಡೆದಿದೆ. ಇಲ್ಲಿನ ರೈತರ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರ ಕೂಡಲೇ ಭೂಸ್ವಾಧಿನ ಪ್ರಕ್ರಿಯೆಯಿಂದ ಹಿಂದೆ ಸರಿಯಬೇಕು. ಈ ಹೋರಾಟ ಕೇವಲ ಚನ್ನರಾಯಾಪಟ್ಟಣ ಹೋಬಳಿಯ ರೈತರ ಹೋರಾಟವಲ್ಲ, ಇಡೀ ರೈತ ಸಮುದಾಯಕ್ಕೆ ಎದುರಾಗಿರುವ ಸವಾಲಾಗಿದೆ, ಇದನ್ನು ಎಲ್ಲರೂ ಒಟ್ಟುಗೂಡಿ ಎದುರಿಸಲೇಬೇಕು ರೈತರ ಕೃಷಿ ಭೂಮಿ ಉಳಿಯಲೇಬೇಕು ಎಂದು ಮುಖಂಡ ವೆಂಕಟರಮಣಪ್ಪ ಕರೆ ನೀಡಿದರು.