ಚನ್ನರಾಯಪಟ್ಟಣ: ನಿಮ್ಮನ್ನು ನೋಡಲು ಆತುರದಲ್ಲಿ ಬಸ್‌ನಿಂದ ಹಾರಿದಾಗ ನನ್ನ ಹಲ್ಲುಗಳು ಮುರಿದಿದ್ದು, ನೀವೇ ಕಟ್ಟಿಸಿಕೊಡಬೇಕೆಂದು ಜೆಡಿಎಸ್ ಕಾರ್ಯಕರ್ತ ಶಾಸಕ ಸಿ.ಎನ್. ಬಾಲಕೃಷ್ಣ ಅವರಿಗೆ ಪತ್ರ ಬರೆದಿದ್ದಾರೆ.
ಶ್ರವಣಬೆಳಗೊಳ ಹೋಬಳಿ ಕೊತ್ತನಘಟ್ಟ ಗ್ರಾಮದ ಜೆಡಿಎಸ್ ಕಾರ್ಯಕರ್ತ ಅಣ್ಣಪ್ಪ ಶಾಸಕರಿಗೆ ಪತ್ರ ಬರೆದಿದಿದ್ದಾರೆ. ಬಿದ್ದಿರೋ ಹಲ್ಲಿಗೆ ಶಾಸಕರೇ ಕಾರಣ ಅವರೇ ಹಲ್ಲು ಕಟ್ಟಿಸಿಕೊಡಬೇಕು. ನಾನು ಜೆಡಿಎಸ್ ನಿಷ್ಠಾವಂತ ಕಾರ್ಯಕರ್ತನಾಗಿದ್ದು ಶಾಸಕ ಸಿ.ಎನ್. ಬಾಲಕೃಷ್ಣ ಅವರ ಪಕ್ಕಾ ಅಭಿಮಾನಿ.
ಜೆಡಿಎಸ್‌ಗಾಗಿ ಪ್ರಾಣ ಕೊಡಲೂ ತಯಾರಿದ್ದೇನೆ. ನಾನು ಕೆಲ ವರ್ಷಗಳ ಹಿಂದೆ ಬಸ್ಸಿನಲ್ಲಿ ಪ್ರಯಾಣಿಸುತಿದ್ದಾಗ ರಸ್ತೆ ಪಕ್ಕದಲ್ಲಿ ನೀವು ನಿಂತಿರುವುದನ್ನು ನೋಡಿ, ಭೇಟಿಯಾಗುವ ಆತುರದಲ್ಲಿ ಚಲಿಸುತ್ತಿದ್ದ ಬಸ್‌ನಿಂದಲೇ ಕೆಳ ನೆಗೆದಾಗ ಆಯತಪ್ಪಿ ಬಿದ್ದಿದ್ದೆ. ಪರಿಣಾಮ ನನ್ನ ಹಲ್ಲುಗಳನ್ನು ಕಳೆದುಕೊಳ್ಳಬೇಕಾಯಿತು. ನಾನು ಬಿದ್ದಿದ್ದನ್ನು ನೀವೆ ನೋಡಿದ್ದೀರ ನಿಮಗೆ ಗೊತ್ತಿದೆ. ನನ್ನ ಕಳೆದುಹೋದ ಹಲ್ಲುಗಳಿಗೆ ಹೊಸ ಹಲ್ಲುಗಳನ್ನು ಕಟ್ಟಿಸಿ ಕೊಡಬೇಕು ಎಂದು ಪತ್ರ ಬರೆದು ದುಂಬಾಲು ಬಿದ್ದಿದ್ದಾನೆ.
ಶಾಸಕ ಸಿ.ಎನ್. ಬಾಲಕೃಷ್ಣ ಪ್ರತಿಕ್ರಿಯಿಸಿ, ಅಣ್ಣಪ್ಪ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಎನ್ನುವುದರ ಜತೆಗೆ ಒಂದು ರೀತಿಯಲ್ಲಿ ಆತ್ಮೀಯ ವ್ಯಕ್ತಿ. ಅವರಿಗೆ ಹಲ್ಲು ಕಟ್ಟಿಸಿಕೊಡುವುದರ ಜತೆಗೆ ಸಂಪೂರ್ಣ ಆರೋಗ್ಯ ತಪಾಸಣೆ ಮಾಡಿಸಲಾಗುವುದು ಎಂದು ಪ್ರತಿಕ್ರಿಯಿಸಿದ್ದಾರೆ.