ಚನ್ನರಾಯಪಟ್ಟಣ: ಚೀನಾ ದೇಶದ ವಸ್ತುಗಳ ಬಳಕೆಯನ್ನು ನಿಷೇಧಿಸುವಂತೆ ಆಗ್ರಹಿಸಿ ಸ್ವದೇಶಿ ಜಾಗರಣ ಮಂಚ್ ವತಿಯಿಂದ ಬುಧವಾರ ಸಂಜೆ ಪಟ್ಟಣದ ಕೆ.ಆರ್.ವೃತ್ತದಲ್ಲಿ ಪ್ರತಿಭಟನೆ ನಡೆಯಿತು.
ಸ್ವದೇಶಿ ಜಾಗರಣ ಮಂಚ್, ವಿಶ್ವ ಹಿಂದು ಪರಿಷತ್, ಬಜರಂಗ ದಳ ಹಾಗೂ ಯುವ ಬ್ರಿಗೇಡ್ ಕಾರ್ಯಕರ್ತರು ಪಟ್ಟಣದ ಕೆ.ಆರ್.ವೃತ್ತದಲ್ಲಿ ಜಮಾಯಿಸಿ ದೇಶದ ಗಡಿಯಲ್ಲಿ ಹುತಾತ್ಮರಾದ ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಬಳಿಕ ಪ್ರತಿಭಟನೆ ಕೈಗೊಂಡರು.
ಆರ್‌ಎಸ್‌ಎಸ್ ವ್ಯವಸ್ಥಾಪಕ ಪ್ರಮುಖ್ ಆನಂದ್ ಮಾತನಾಡಿ, ಕಮ್ಯುನಿಸ್ಟ್ ಆಡಳಿತ ದೇಶದ ವಸ್ತುಗಳನ್ನು ಉಪಯೋಗಿಸಬಾರದು, ದೇಶವಾಸಿಗರು ಚೀನಾ ವಸ್ತುಗಳನ್ನು ಉಪಯೋಗಿಸುವುದರಿಂದ ಅವರ ದೇಶ ಆರ್ಥಿಕವಾಗಿ ಸದೃಢವಾಗಲಿದ್ದು, ನಮ್ಮ ದೇಶದ ಮೇಲೆ ಯುದ್ಧಕ್ಕೆ ಮುಂದಾಗುವುದರ ಜತೆಗೆ, ದೇಶದ ಭೂ ಭಾಗವನ್ನು ವಿಸ್ತರಿಸಿಕೊಳ್ಳಲು ಹವಣಿಸುತ್ತಿದೆ ಎಂದರು.
ದೇಶದಲ್ಲಿ ಶೇ.20ರಷ್ಟು ಚೀನಾ ದೇಶದ ಮೊಬೈಲ್‌ಗಳು ಬಳಕೆಯಾಗುತ್ತಿದ್ದು, ಆ್ಯಪ್‌ಗಳ ಬಳಕೆಯೂ ಹೆಚ್ಚಿದೆ. ನಾವು ಚೀನಾದೊಂದಿಗೆ ವಹಿವಾಟು ಮಾಡುವುದು ನಮಗೇ ಮುಳುವಾಗುತ್ತಿದೆ ಎಂದರು.
ಆರ್‌ಎಸ್‌ಎಸ್ ಸಂಘ ಚಾಲಕ ಡಾ.ಶೇಷಾಶಯನ್, ಕಾರ್ಯಾವಾರು ಮನೋಹರ್, ಸ್ವದೇಶಿ ಜಾಗರಣ ಮಂಚ್‌ನ ಮಂಜುನಾಥ್, ಮೋಹನ್, ವಿಜಯಕುಮಾರ್, ವಿಶ್ವ ಹಿಂದು ಪರಿಷತ್ ಜಿಲ್ಲಾ ಉಪಾಧ್ಯಕ್ಷ ಕೆ.ಶಾಮ್, ತಾಲೂಕು ಅಧ್ಯಕ್ಷ ಮಂಜೇಗೌಡ, ಕಾರ್ಯದರ್ಶಿ ಕಾರ್ತಿಕ್, ಬಜರಂಗ ದಳದ ಮಧು, ಯುವ ಬ್ರಿಗೇಡ್ ತಾಲೂಕು ಅಧ್ಯಕ್ಷ ಧರಣೇಶ್, ಉಪಾಧ್ಯಕ್ಷ ಜಗದೀಶ್ ಮತ್ತಿತರರಿದ್ದರು.