ಚನ್ನರಾಯಪಟ್ಟಣ: ಗಲೀಜು ನೀರು… ದುರ್ನಾತ… ಮೂಗು ಮುಚ್ಚಿಕೊಂಡು ಜನರ ಓಡಾಟ… ಕಳೆದ ಒಂದು ವಾರದಿಂದ ಪಟ್ಟಣದ ಹೃದಯ ಭಾಗದಲ್ಲಿ ಸಾರ್ವಜನಿಕರು ಅನುಭವಿಸುತ್ತಿರುವ ಸಂಕಷ್ಟವಿದು.
ಜನನಿಬಿಡ ಹಾಗೂ ಪ್ರಮುಖ ವಾಣಿಜ್ಯ ಪ್ರದೇಶವಾಗಿರುವ ಪಟ್ಟಣದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಮುಂಭಾಗ ಬಿ.ಎಂ.ರಸ್ತೆಯಲ್ಲಿರುವ ಎಲ್ಲೊ ಮಾರ್ಟ್ ಶಾಪಿಂಗ್‌ಮಾಲ್‌ನ ಮುಂಭಾಗದಲ್ಲಿ ಒಳಚರಂಡಿ ಮ್ಯಾನ್‌ಹೋಲ್ ಒಡೆದು ಕಲುಷಿತ ನೀರು ತುಂಬಿ ಹರಿಯುತ್ತಿದೆ. ನಗರದ ಹೃದಯಭಾಗದಲ್ಲೇ ಈ ರೀತಿಯ ಅವ್ಯವಸ್ಥೆ ಇದ್ದರೂ ಪುರಸಭೆ ಅದನ್ನು ದುರಸ್ತಿಗೊಳಿಸುವ ಗೋಜಿಗೆ ಹೋಗದೆ ನಿರ್ಲಕ್ಷಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಿಂದ ಧನಲಕ್ಷ್ಮೀ ಚಿತ್ರಮಂದಿರದವರೆಗೂ ಮ್ಯಾನ್‌ಹೋಲ್‌ಗಳ ಪೈಪ್‌ಲೈನ್‌ಗಳು ಪದೇ ಪದೆ ಒಡೆದು ಕಲುಷಿತ ನೀರು ತುಂಬಿ ಹರಿಯುತ್ತಿರುತ್ತದೆ. ಒಂದು ಕಡೆ ದುರಸ್ತಿಗೊಳಿಸಿದರೆ, ಮತ್ತೊಂದು ಕಡೆ ಪೈಪ್‌ಲೈನ್ ಒಡೆದೋ ಅಥವಾ ಕಸ ಕಟ್ಟಿಕೊಂಡೋ ಮ್ಯಾನ್‌ಹೋಲ್‌ನಿಂದ ಕಲುಷಿತ ನೀರು ಬರುವುದು ಸಾಮಾನ್ಯವಾಗಿಬಿಟ್ಟಿದೆ. ಈ ರೀತಿ ಪದೇ ಪದೆ ಆಗುತ್ತಿರುವುದರಿಂದ ದುರ್ವಾಸನೆ ಸಹಿಸುವುದು ನಿತ್ಯಕರ್ಮ ಎನ್ನುವಂತಾಗಿದೆ ಎಂಬುದು ಸಾರ್ವಜನಿಕರ ಆರೋಪ. ಇದಕ್ಕೆ ಶಾಶ್ವತ ಪರಿಹಾರ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಹಲವು ಬಾರಿ ಪುರಸಭೆಗೆ ಮನವಿ ಮಾಡಿದ್ದರೂ ಫಲಿತಾಂಶ ಶೂನ್ಯವಾಗಿದೆ.
ಬಸ್ ನಿಲ್ದಾಣದಿಂದ ಕೋಟೆ ಬಡಾವಣೆ, ಚನ್ನಿಗರಾಯ ಬಡಾವಣೆ, ರಾಮೇಶ್ವರ ಬಡಾವಣೆ, ಮಕಾನ್‌ಗೆ ಇದೇ ರಸ್ತೆಯಲ್ಲಿ ಸಾಗಬೇಕಾಗಿರುವುದರಿಂದ ಹಾಗೂ ಬಸ್ ನಿಲ್ದಾಣದ ಪ್ರಮುಖ ರಸ್ತೆ ಆಗಿದ್ದು, ಒಂದು ವಾರಕ್ಕೂ ಹೆಚ್ಚಿನ ದಿನಗಳಿಂದ ಚರಂಡಿ ತುಂಬಿಕೊಂಡು ರಸ್ತೆ ಮೇಲೆ ಹರಿಯುತ್ತಿದೆ. ಅಷ್ಟೇ ಅಲ್ಲದೆ, ಆ ನೀರು ರಸ್ತೆ ಮೇಲೆಯೇ ಪಾಚಿಗಟ್ಟಿದೆ. ರಸ್ತೆಯ ಬದುವಿನಲ್ಲಿ ನಿಂತು ಇಡೀ ಪ್ರದೇಶದಲ್ಲಿ ದುರ್ವಾಸನೆ ಸೃಷ್ಟಿಸಿದೆ. ನಿತ್ಯ ಸಾವಿರಾರು ವಾಹನಗಳು, ಜನರು ಅದೇ ಗಲೀಜು ನೀರಿನಲ್ಲಿ, ಅಸಹನೀಯ ದುರ್ವಾಸನೆಯಲ್ಲಿಯೇ ಓಡಾಡಬೇಕಿದೆ.
ನುಗ್ಗೆಹಳ್ಳಿ, ತಿಪಟೂರು, ಹಿರೀಸಾವೆ, ಮಟ್ಟನವಿಲೆ, ಶ್ರವಣಬೆಳಗೊಳ ಮಾರ್ಗದ ನೂರಾರು ಪ್ರಯಾಣಿಕರು ಸಾರಿಗೆ ವ್ಯವಸ್ಥೆಗಾಗಿ ಇದೇ ಜಾಗದಲ್ಲಿ ನಿತ್ಯ ನಿಂತುಕೊಳ್ಳುತ್ತಾರೆ. ಅಲ್ಲದೆ, ಬೆಂಗಳೂರು-ಮಂಗಳೂರು ಮುಖ್ಯರಸ್ತೆಯಾಗಿರುವುದರಿಂದ ಈ ರಸ್ತೆಯಲ್ಲಿ ಪ್ರತಿದಿನ ಸಾವಿರಾರು ವಾಹನಗಳು ಸಂಚರಿಸುತ್ತವೆ. ಈಗಾಗಲೇ ರಸ್ತೆ ಪಕ್ಕದಲ್ಲಿ ಕಲುಷಿತ ನೀರು ನಿಂತಿರುವುದರಿಂದ ಸೊಳ್ಳೆಗಳಿಗೆ ವಾಸಸ್ಥಾನವಾಗಿದೆ. ರೋಗರುಜಿನಗಳು ಹರಡುವ ಭೀತಿಯೂ ಎದುರಾಗಿದೆ. ಈ ಬಗ್ಗೆ ಪುರಸಭೆ ಯಾವುದೇ ಕ್ರಮ ಕೈಗೊಳ್ಳದಿರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈ ಸಂಬಂಧ ಪುರಸಭೆ ಅಧಿಕಾರಿಗಳನ್ನು ಪ್ರಶ್ನಿಸಿದರೆ ಹಲವು ಕಾರಣಗಳನ್ನು ಮುಂದಿಡುತ್ತಾರೆ. ಪುರಸಭೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಹೀಗಾಗಿ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ. ಪಟ್ಟಣದ ಒಳಚರಂಡಿ ವ್ಯವಸ್ಥೆ ತುಂಬ ಹಳೆಯದಾಗಿದ್ದು, ಆಗಾಗ ಈ ರೀತಿ ತೊಂದರೆಯಾಗುವುದು ಸಾಮಾನ್ಯ. ಅಲ್ಲದೆ, ಜನಸಂಖ್ಯೆಗೆ ಅನುಗುಣವಾಗಿ ಬಡಾವಣೆಗಳು ಹೆಚ್ಚಾಗಿದ್ದು, ಅದಕ್ಕೆ ತಕ್ಕಂತೆ ಒಳಚರಂಡಿ ವ್ಯವಸ್ಥೆ ವಿಸ್ತಾರಗೊಂಡಿಲ್ಲ. ಹೀಗಾಗಿ, ಇರುವ ಒಳಚರಂಡಿ ವ್ಯವಸ್ಥೆಯಲ್ಲೇ ಒತ್ತಡ ಹೆಚ್ಚಾಗಿ ಪೈಪ್‌ಲೈನ್ ಒಡೆಯುತ್ತಿರುತ್ತದೆ. ಇತ್ತೀಚೆಗೆ ಜನಸಂಖ್ಯೆಗೆ ಅನುಗುಣವಾಗಿ ಪುರಸಭೆಯನ್ನು ಮೇಲ್ದರ್ಜೆಗೇರಿಸಿ ನಗರಸಭೆ ಮಾಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಜತೆಗೆ, ಪುರಸಭೆಗೆ ಬರುವ ಅನುದಾನವೂ ಸಾಕಾಗುತ್ತಿಲ್ಲ. ಹೀಗಾಗಿ, ನಗರಸಭೆಯಾಗಿ ಮೇಲ್ದರ್ಜೆಗೇರಿಸಿದರೆ ಸರ್ಕಾರದಿಂದ ಬರುವ ಅನುದಾನ ಹೆಚ್ಚಾಗುವುದರಿಂದ ಶಾಶ್ವತ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗುತ್ತದೆ ಎಂಬುದು ಅಧಿಕಾರಿಗಳ ಸಮಜಾಯಿಷಿ.
ಪುರಸಭೆಯ ಪ್ರತಿನಿಧಿಗಳು ಈ ಬಗ್ಗೆ ಕ್ಷೇತ್ರದ ಶಾಸಕರಿಗೆ ಸಮಸ್ಯೆಯ ಅರಿವು ಮೂಡಿಸಿ, ಮ್ಯಾನ್‌ಹೋಲ್‌ಗಳಿಂದ ಪದೇ ಪದೆ ಕುಲುಷಿತ ನೀರು ಹೊರಬರದಂತೆ ಶಾಶ್ವತ ಪರಿಹಾರ ಕ್ರಮ ಕೈಗೊಳ್ಳಬೇಕಿದೆ. ಜತೆಗೆ, ತ್ವರಿತವಾಗಿ ಸ್ಪಂದಿಸಲು ಪುರಸಭೆಗೆ ಹೆಚ್ಚಿನ ಸಿಬ್ಬಂದಿ ಒದಗಿಸುವ ಬಗ್ಗೆ ಗಮನಹರಿಸಬೇಕಿದೆ. ಈ ನಿಟ್ಟಿನಲ್ಲಿ ಶೀಘ್ರವೇ ಪರಿಹಾರ ಕಂಡುಕೊಂಡು ಸಾರ್ವಜನಿಕರ ಸುಗಮ ಓಡಾಟಕ್ಕೆ ಅನುವು ಮಾಡಿಕೊಡಲಿ ಎಂಬುದು ಪಟ್ಟಣ ನಿವಾಸಿಗಳ ಒತ್ತಾಯವಾಗಿದೆ.
ಪಟ್ಟಣದ ಮುಖ್ಯ ಜನನಿಬಿಡ ರಸ್ತೆಯಲ್ಲಿ ಒಳಚರಂಡಿಯ ಮ್ಯಾನ್‌ಹೋಲ್ ಶಿಥಿಲಗೊಂಡು ಅದರ ಕಲ್ಮಶ ನೀರು ಹೊರಬರುತ್ತಿದ್ದು, ಸಾರ್ವಜನಿಕರು ಮೂಗು ಮುಚ್ಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಬಂಧಪಟ್ಟವರು ಕೂಡಲೇ ದುರಸ್ತಿಗೊಳಿಸಿ ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗದಂತೆ ಕ್ರಮವಹಿಸಬೇಕು.
ಆರ್.ಎಲ್. ಮಧುಸೂದನ್
ಮಾಲೀಕರು ಧನಲಕ್ಷ್ಮೀ ಕ್ಲಾತ್ ಸೆಂಟರ್, ಚನ್ನರಾಯಪಟ್ಟಣ
ಪಟ್ಟಣದಲ್ಲಿ ತುಂಬ ಹಳೆಯದಾದ ಒಳಚರಂಡಿ ವ್ಯವಸ್ಥೆ ಇರುವುದರಿಂದ ಸಮಸ್ಯೆ ಮರುಕಳಿಸುತ್ತಿದೆ. ಜತೆಗೆ, ಪುರಸಭೆಯಲ್ಲಿ ಸಿಬ್ಬಂದಿ ಕೊರೆತೆಯೂ ಇದೆ. ಶೀಘ್ರದಲ್ಲೇ ಸುಮಾರು 30 ಅಡಿಯವರೆಗೆ ರಸ್ತೆ ಬದಿಯಲ್ಲಿ ಅಗೆದು ಸಮಸ್ಯೆ ಮರುಕಳಿಸದಂತೆ ದುರಸ್ತಿಗೆ ಕ್ರಮ ವಹಿಸಲಾಗುವುದು.
ಕೆ.ಎನ್. ಹೇಮಂತ್
ಪುರಸಭಾ ಮುಖ್ಯಾಧಿಕಾರಿ, ಚನ್ನರಾಯಪಟ್ಟಣ
ವ್ಯಾಪಾರಸ್ಥರು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು, ಸಾರಿಗೆ ವಾಹನಗಳು ಸಂಚರಿಸುವ ಪಟ್ಟಣದ ಪ್ರಮುಖ ರಸ್ತೆ ಇದಾಗಿದ್ದು, ಕೂಡಲೇ ಸಂಬಂಧಪಟ್ಟ ಇಲಾಖಾಧಿಕಾರಿಗಳು, ಜನಪ್ರತಿನಿಧಿಗಳು ಕ್ರಮ ಕೈಗೊಳ್ಳಬೇಕು.
ಜಿ.ಕೆ.ಪುಟ್ಟರಾಜು
ನಿವೃತ ಸೇನಾಧಿಕಾರಿ, ಚನ್ನರಾಯಪಟ್ಟಣ