ನಿಯಂತ್ರಣ ತಪ್ಪಿ ಮತ್ತೊಂದು ರಸ್ತೆಗೆ ನುಗ್ಗಿದ ಬೃಹತ್ ಕಂಟೈನರ್
ಚನ್ನಪಟ್ಟಣದ ಸಂಕಲಗೆರೆ ಗೇಟ್ ಬಳಿ ಘಟನೆ
ಚನ್ನಪಟ್ಟಣ: ಬಹುಶಃ ಮಟಮಟ ಮಧ್ಯಾಹ್ನವಾದ ಕಾರಣ ಯಮರಾಜ ವಿಶ್ರಾಂತಿ ಪಡೆದಿದ್ದ ಅನಿಸುತ್ತದೆ. ಈ ಕಾರಣದಿಂದ ಘೋರ ದುರಂತವೊಂದು ತಪ್ಪಿರುವ ಘಟನೆಯೊಂದು ಬೆಂಗಳೂರು ಮೈಸೂರು ನೂತನ ಎಕ್ಸ್‌ಪ್ರೆಸ್ ಹೈವೇಯಲ್ಲಿ ಬುಧವಾರ ಚನ್ನಪಟ್ಟಣ ತಾಲೂಕು ಬೈರಾಪಟ್ಟಣ ಸಮೀಪದ ಸಂಕಲಗೆರೆ ಗೇಟ್ ಬಳಿ ನಡೆದಿದೆ.
ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಸರಕು ಸಾಗಾಣಿಕೆ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ, ಚನ್ನಪಟ್ಟಣ ತಾಲೂಕಿನ ಸಂಕಲಗೆರೆ ಗೇಟ್ ಬಳಿ ರಸ್ತೆ ವಿಭಜಕವನ್ನು ದಾಟಿ ನುಗ್ಗಿದೆ.
ಅದೃಷ್ಟವಶಾತ್ ಈ ಸಮಯದಲ್ಲಿ ಯಾವುದೇ ವಾಹನಗಳು ಬಾರದ ಹಿನ್ನೆಲೆಯಲ್ಲಿ ಘೋರ ದುರಂತ ತಪ್ಪಿದಂತಾಗಿದೆ. ವಾಹನ ಎಡಭಾಗದಿಂದ ಬಲಭಾಗಕ್ಕೆ ರಭಸದಿಂದ ನುಗ್ಗಿರುವ ದೃಶ್ಯ ಸಮೀಪದ ಸಿಸಿಟಿವಿ ಕ್ಯಾಮೆರದಲ್ಲಿ ಸೆರೆಯಾಗಿದೆ