ವಿಜಯವಾಣಿ ಸುದ್ದಿಜಾಲ ಧಾರವಾಡ
ಚನ್ನಪ್ಪ ಎಂಬ ಹೆಸರಿನಲ್ಲೇ ರೆ. ಚನ್ನಪ್ಪ ಉತ್ತಂಗಿಯವರ ವ್ಯಕ್ತಿತ್ವ ಅಡಗಿದೆ. ಇವರ ಪೂರ್ವಜರು ಲಿಂಗಾಯತರಾದರೂ ಎರಡು ತಲೆಮಾರಿನಿಂದ ಕ್ರೈಸ್ತ ಧರ್ಮ ಸ್ವೀಕರಿಸಿ ಕಾರ್ಯ ಪ್ರವೃತ್ತರಾದವರು ಉತ್ತಂಗಿ ಚನ್ನಪ್ಪನವರು ಎಂದು ಹೆಬಿಕ್ ಸ್ಮಾರಕ ಚರ್ಚನ ರೆ. ಸಮುವೇಲ್ ಕಾಲ್ವಿನ್ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ರೆ. ಉತ್ತಂಗಿ ಚನ್ನಪ್ಪ ದತ್ತಿ ನಿಮಿತ್ತ ಶನಿವಾರ ಆಯೋಜಿಸಿದ್ದ ಕ್ರೈಸ್ತ ಸಾಹಿತ್ಯ ವಿಷಯ ಕುರಿತ ಉಪನ್ಯಾಸ ಹಾಗೂ ರೆ. ಚನ್ನಪ್ಪ ಉತ್ತಂಗಿ (ಜೀವನಚರಿತ್ರೆ) ಮರಾಠಿ ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಸರ್ವಜ್ಞ ಕವಿಯನ್ನು ನಾಡಿಗೆ ಸಮಗ್ರವಾಗಿ ಪರಿಚಯಿಸಿಕೊಟ್ಟವರು ಚನ್ನಪ್ಪನವರು. ಇವರು ಸಾಹಿತ್ಯದ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದರು. ತಾಯಿಯ ಅಪೇಕ್ಷೆಯಂತೆ ಕ್ರೈಸ್ತ ಧರ್ಮದ ಗುರುವಾದವರು. ಧರ್ಮ ಗ್ರಂಥಗಳನ್ನು ಹೆಚ್ಚು ಅಧ್ಯಯನ ಮಾಡಿ, ಸಾಹಿತ್ಯಿಕ ಕೃಷಿಯೊಂದಿಗೆ ಪಾದ್ರಿಯಾಗಿ ಧರ್ಮ ಪ್ರಚಾರಕ್ಕೆ ತೊಡಗುತ್ತಾರೆ. ಅನೇಕ ಕೃತಿಗಳನ್ನು ರಚಿಸಿ ಕನ್ನಡ ಸಾಹಿತ್ಯ ಕ್ಷೇತ್ರ ಶ್ರೀಮಂತಗೊಳಿಸಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಗ್ರಂಥಾಲಯ ವಿಜ್ಞಾನಿ ಡಾ. ಎಸ್.ಆರ್. ಗುಂಜಾಳ ಮಾತನಾಡಿ, ಚನ್ನಪ್ಪನವರನ್ನು ನೆನಪು ಮಾಡಿಕೊಳ್ಳುವುದೇ ಒಂದು ಸಡಗರ, ಸಂಭ್ರಮ. ಕ್ರಿಸ್ತನ ಬಗ್ಗೆ ಭಕ್ತಿ, ಅಪಾರ ಪ್ರೀತಿ, ಗೌರವ ಇಟ್ಟುಕೊಂಡವರು. ಅವರು ರಚಿಸಿದ ಅನೇಕ ಕೃತಿಗಳು ಮರು ಮುದ್ರಣಗೊಂಡಿರುವುದು ಹೆಮ್ಮೆಯ ಸಂಗತಿ ಎಂದರು.
ಲೇಖಕಿ ಪ್ರೊ. ಶಾಲಿನಿ ದೊಡಮನಿ, ಪ್ರಕಾಶ ಗಿರಿಮಲ್ಲನವರ ಮಾತನಾಡಿದರು. ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ, ವೀರಣ್ಣ ಒಡ್ಡೀನ, ಗುರು ಹಿರೇಮಠ, ಡಾ. ಶ್ರೀಶೈಲ ಹುದ್ದಾರ, ಡಾ. ಜಿನದತ್ತ ಹಡಗಲಿ, ವಿಲ್ಸನ್ ಮೈಲಿ, ಪ್ರೊ. ಎಸ್. ವಿ. ಅಯ್ಯನಗೌಡರ, ಪ್ರಕಾಶ ಹುಗ್ಗಿ, ದೇವದಾನ ದೊಡಮನಿ, ಎಂ.ಎಂ. ಚಿಕ್ಕಮಠ, ವೀರೇಶ ಜಾಲಿಕಟ್ಟಿ, ಪ್ರಕಾಶ ಗಿರಿಮಲ್ಲನವರ, ಇತರರು ಇದ್ದರು.
ಡಾ. ಧನವಂತ ಹಾಜವಗೋಳ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಕರ ಕುಂಬಿ ನಿರೂಪಿಸಿದರು. ಸತೀಶ ತುರಮರಿ ವಂದಿಸಿದರು.